ಉಡುಪಿ, ಜ. 20: ಯುವತಿಯೊಬ್ಬರು ಒಎಲ್ ಎಕ್ಸ್‌ನಲ್ಲಿ ಕಿವಿಯೋಲೆ ಮಾರಾಟ ಮಾಡಲು ಹೋಗಿ 93 ಸಾವಿರ ರೂ., ಹಣ ಕಳೆದುಕೊಂಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ:ದಾಸೋಹ ದಿನ; ಪ್ರಪಂಚಕ್ಕೆ ದಾಸೋಹ ತತ್ವ ಸಾರಿದ ಸಿದ್ಧಗಂಗಾ ಶ್ರೀ
ಮಣಿಪಾಲ, ಸೋನಿಯ ಹಾಸ್ಟೆಲ್ ನಿವಾಸಿ ಖುಷಿ ಮೆಹ್ತಾ ಅವರು ಒಎಲ್‌ಎಕ್ಸ್‌ನಲ್ಲಿ ಕಿವಿ ಯೋಲೆ ಮಾರಾಟ ಮಾಡುವ ಜಾಹೀರಾತು ನೀಡಿದ್ದರು. ಅಪರಿಚಿತ ವ್ಯಕ್ತಿ ಕರೆ ಮಾಡಿ ಕಿವಿಯೋಲೆ ಖರೀದಿಸುವುದಾಗಿ ತಿಳಿಸಿದ್ದಾರೆ. ಯುವತಿಗೆ ಮೊದಲು 100 ರೂ., ಹಣವನ್ನು ಪೇಟಿಎಂ ಮೂಲಕ ಪಾವತಿಸಿದ್ದಾರೆ.
ಅನಂತರ ಯುವತಿ ಖಾತೆಯಿಂದಲೇ 19,018 ರೂ., ಕಡಿತಗೊಂಡಿದೆ. ಈ ಬಗ್ಗೆ ಯುವತಿ ಆತನಿಗೆ ಕರೆ ಮಾಡಿ ವಿಚಾರಿಸಿದಾಗ ಹಣ ಮರುಪಾವತಿ ಮಾಡುವುದಾಗಿ ನಂಬಿಸಿ, ಬೇರೆ ಯಾವುದಾದರು ಖಾತೆ ವಿವರವನ್ನು ಒದಗಿಸುವಂತೆ ಹೇಳಿದ್ದಾನೆ.
ಇದನ್ನೂ ನಂಬಿದ ಯುವತಿ ಸ್ನೇಹಿತೆ ಸಾಯಿ ಚಂದನ್ ಎಂಬವರ ಮೊಬೈಲ್ ನಂಬರ್ ನೀಡುತ್ತಾರೆ. ಅನಂತರ ಅಪರಿಚಿತ ವ್ಯಕ್ತಿ ಸಾಯಿ ಚಂದನ್‌ಗೆ ಬಂದಿರುವ ಒಟಿಪಿ ವಿವರ ತಿಳಿಸುವಂತೆ ಹೇಳಿದ್ದು, ಸ್ನೇಹಿತೆಯ ಖಾತೆಯಿಂದಲೂ ಹಂತ ಹಂತವಾಗಿ ಒಟ್ಟು 74,800 ರೂ., ಹಣ ಕಡಿತಗೊಂಡಿದೆ. ಕಿವಿಯೋಲೆ ಖರೀದಿಸುವ ನೆಪದಲ್ಲಿ ಒಟ್ಟು 93,818 ರೂ., ವಂಚಿಸಲಾಗಿದೆ ಎಂದು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.