Advertisement

MNS ಮತ್ತು ಉದ್ಧವ್ ಬಣದ ಕಾರ್ಯಕರ್ತರ ಸಂಘರ್ಷ: ಪರಸ್ಪರ ದಾಳಿ

05:04 PM Aug 11, 2024 | Team Udayavani |

ಮುಂಬಯಿ: ಬೀಡ್ ಜಿಲ್ಲೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರ ಬೆಂಗಾವಲು ವಾಹನದ ಮೇಲೆ ಶಿವಸೇನೆ (ಯುಬಿಟಿ) ಕಾರ್ಯಕರ್ತರು ದಾಳಿ ಮಾಡಿದ ಒಂದು ದಿನದ ನಂತರ, ಎಂಎನ್‌ಎಸ್ ಬೆಂಬಲಿಗರು ಶನಿವಾರ ಸಂಜೆ ಥಾಣೆಯಲ್ಲಿ ಉದ್ಧವ್ ಠಾಕ್ರೆ ಅವರ ಬೆಂಗಾವಲು ಪಡೆಯ ಮೇಲೆ ಸಗಣಿ, ಟೊಮ್ಯಾಟೊ, ತೆಂಗಿನಕಾಯಿ ಮತ್ತು ಬಳೆಗಳನ್ನು ಎಸೆಯುವ ಮೂಲಕ ಪ್ರತಿದಾಳಿ ನಡೆಸಿದ್ದಾರೆ. ವಿಧಾನ ಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜಕೀಯ ಸಂಘರ್ಷ ತೀವ್ರವಾಗುತ್ತಿದೆ.

Advertisement

ಉದ್ಧವ್ ಅವರ ಬೆಂಗಾವಲು ಪಡೆ ಗಡ್ಕರಿ ರಂಗಾಯತನ ಸಭಾಂಗಣಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿತ್ತು. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲು ನಿರ್ಧರಿಸಲಾಗಿತ್ತು. ಎಂಎನ್‌ಎಸ್ ಬೆಂಬಲಿಗರು ಪಕ್ಷದ ಧ್ವಜಗಳನ್ನು ಕಿತ್ತು ಉದ್ಧವ್ ವಿರುದ್ಧ ಘೋಷಣೆಗಳನ್ನು ಕೂಗಿದ್ದು ಕೋಲಾಹಲಕ್ಕೆ ಕಾರಣವಾಯಿತು. ಥಾಣೆ ಪೊಲೀಸರ ಮಧ್ಯಪ್ರವೇಶ ಮಾಡಿ ಮಹಿಳೆಯರು ಸೇರಿದಂತೆ ಹಲವಾರು ಎಂಎನ್‌ಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

MNS ನಾಯಕರು ಪ್ರತಿಭಟನೆಯನ್ನು ಸಮರ್ಥಿಸಿಕೊಂಡರು, ಇದು ಮರಾಠಾ ಮೀಸಲಾತಿಗೆ ಸಂಬಂಧಿಸಿದ ಅವರ ಮರಾಠವಾಡ ಪ್ರವಾಸದ ಸಮಯದಲ್ಲಿ ರಾಜ್ ಅವರ ಬೆಂಗಾವಲು ಪಡೆ ಮೇಲೆ ನಡೆದ ದಾಳಿಗೆ ಸ್ವಯಂಪ್ರೇರಿತ ಪ್ರತಿಕ್ರಿಯೆ ಎಂದು ಹೇಳಿಕೊಂಡಿದ್ದಾರೆ.

ಕ್ರಿಯೆಗೆ ಪ್ರತಿಕ್ರಿಯೆ

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಭದ್ರಕೋಟೆಯಲ್ಲೇ ಘಟನೆ ನಡೆದಿದ್ದು, ಸಿಎಂ ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ. “ಎಂಎನ್ಎಸ್ ಕಾರ್ಯಕರ್ತರ ಪ್ರತಿಭಟನೆಯು ಶಿವಸೇನೆಯ (ಯುಬಿಟಿ) ಕ್ರಮಗಳಿಗೆ ಪ್ರತಿಕ್ರಿಯೆಯಾಗಿದೆ. ಒಂದು ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದು ಹೇಳಿದ್ದಾರೆ. ಭಾನುವಾರ ಮಧ್ಯಾಹ್ನ, ಗಲಭೆ ಮತ್ತು ಕಾನೂನುಬಾಹಿರ ಸಭೆಗಾಗಿ ಥಾಣೆ ಪೊಲೀಸರು 44 ಕ್ಕೂ ಹೆಚ್ಚು ಎಂಎನ್‌ಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Advertisement

ಕೇಸರಿ ತೊರೆದಿದ್ದಾರೆ
”ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಕೇಸರಿ ತೊರೆದಿದ್ದಾರೆ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯಿಂದ ದೂರವಿದ್ದಾರೆ. ಅವರನ್ನು ಜನರು ಕ್ಷಮಿಸುವುದಿಲ್ಲ” ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಭಾನುವಾರ ಕಿಡಿ ಕಾರಿದ್ದಾರೆ.

“ಔರಂಗಜೇಬ್ ಅಭಿಮಾನಿಗಳ ಸಂಘದ ನಾಯಕ ಉದ್ಧವ್ ಠಾಕ್ರೆ ಠಾಣೆಗೆ ಹೋಗಿ ಬಿಜೆಪಿ ರಾಮಮುಕ್ತ ಮಾಡುವ ಬಗ್ಗೆ ಸಾಕಷ್ಟು ಗಲಾಟೆ ಮಾಡಿದರು ಆದರೆ ಈ ಜನ್ಮದಲ್ಲಿ ಅದು ನಿಮಗೆ ಸಾಧ್ಯವಿಲ್ಲ.” ಉದ್ಧವ್ ಠಾಕ್ರೆಯವರ ರ್‍ಯಾಲಿಗಳಲ್ಲಿ ಹಸಿರು ಬಾವುಟಗಳನ್ನು ಜನರು ಮರೆತಿಲ್ಲ. ವಕ್ಫ್ ಮಂಡಳಿಗೆ ಏಕೆ ಬೆಂಬಲ ನೀಡುತ್ತಿಲ್ಲ ಎಂದು ಆಗ್ರಹಿಸಿ ಅವರ ನಿವಾಸ ‘ಮಾತೋಶ್ರೀ’ ಎದುರು ಮುಸ್ಲಿಮರ ಗುಂಪು ಪ್ರತಿಭಟನೆ ನಡೆಸಿದೆ’ ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next