ಭೋಪಾಲ್: ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಯ ಮೇಲೆ ಶೂ ಇಟ್ಟು ಅಪಮಾನಿಸಿದ ಘಟನೆ ಭೋಪಾಲ್ ನಲ್ಲಿ ಶನಿವಾರ(ನ.2) ನಡೆದಿದ್ದು ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ರಾಜಭವನ ಮತ್ತು ಪೊಲೀಸ್ ಕಂಟ್ರೋಲ್ ರೂಮ್‌ಗೆ ಸಮೀಪದಲ್ಲಿರುವ ನಗರದ ಪ್ರಮುಖ ಸ್ಥಳವಾದ ಭೋಪಾಲ್‌ನ ಕುಶಾಬಾವ್ ಠಾಕ್ರೆ ಕನ್ವೆನ್ಷನ್ ಸೆಂಟರ್‌ನಲ್ಲಿರುವ ಪ್ರತಿಮೆ ಮೇಲೆ ಕಿಡಿಗೇಡಿಗಳು ಶೂ ಇಟ್ಟು ಅಪಮಾನ ಎಸಗಿದ್ದು ಇದರಿಂದ ಕೆರಳಿದ ಕಾಂಗ್ರೆಸ್ ನಾಯಕರು ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನೆ ಬಳಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಮೆ ಮೇಲಿದ್ದ ಶೂ ತೆಗೆದು ಹಾಲಿನಿಂದ ಪ್ರತಿಮೆಗೆ ಅಭಿಷೇಕ ಮಾಡಿ ಶುಚಿಗೊಳಿಸಿದರು.
ಘಟನೆ ಸಂಬಂಧ ಜಹಾಂಗೀರಾಬಾದ್ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಯಶವಂತ್ ಯಾದವ್ ಅವರು ನೀಡಿದ ದುರೀಬ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಮನೋಜ್ ಪಟ್ವಾ ತಿಳಿಸಿದ್ದಾರೆ. ವಿಚಾರಣೆ ವೇಳೆ ವ್ಯತಿ ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಘಟನೆಯಿಂದ ಸ್ಥಳದಲ್ಲಿ ಕೆಲ ಹೊತ್ತು ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.