ಮುಂಬಯಿ: ಮಹಾರಾಷ್ಟ್ರದಲ್ಲಿ ನೂತನ ಸರಕಾರ ರಚಿಸುವ ನಿಟ್ಟಿನಲ್ಲಿ ಶಿವಸೇನೆಗೆ ಬೆಂಬಲ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಪಕ್ಷಗಳು ಗುರುವಾರದಂದು ಮತ್ತೊಂದು ಸುತ್ತಿನ ಮಹತ್ವದ ಮಾತುಕತೆಗಳನ್ನು ನಡೆಸಿವೆ. ಮತ್ತು ಮುಂದಿನ ಸಮ್ಮಿಶ್ರ ಸರಕಾರದಲ್ಲಿ ಶಿವಸೇನೆಯ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರೇ ಮುಖ್ಯಮಂತ್ರಿಯಾಗಬೇಕೆಂದು ಈ ಎರಡೂ ಮೈತ್ರಿ ಪಕ್ಷಗಳು ಅಪೇಕ್ಷೆಪಟ್ಟಿವೆ.
ಇನ್ನು ನೂತನ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್ ಸಮಾನ ಪಾಲುದಾರಿಕೆಯನ್ನು ಬಯಸುತ್ತಿದೆ ಎಂದು ತಿಳಿದುಬಂದಿದೆ. ಶಿವಸೇನೆಯೊಂದಿಗೆ ಸೇರಿಕೊಂಡು ರಾಜ್ಯದಲ್ಲಿ ನೂತನ ಸರಕಾರ ರಚಿಸುವುಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಾಂಗ್ರೆಸ್ ಮತ್ತು ಎನ್.ಸಿ.ಪಿ, ಪಕ್ಷಗಳ ಮುಖಂಡರು ಇಂದು ನವದೆಹಲಿಯಲ್ಲಿರುವ ಶರದ್ ಪವಾರ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಅಂತಿಮಗೊಳಿಸಿದರು.
ಖಾತೆಗಳ ಸಮಾನ ಹಂಚಿಕೆಯ ಬೇಡಿಕೆಯಂತೆ ಮೂರೂ ಪಕ್ಷಗಳಿಗೆ ತಲಾ 14 ಸಚಿವ ಸ್ಥಾನಗಳು ಲಭಿಸಬೇಕೆಂದು ಕಾಂಗ್ರೆಸ್ ಅಪೇಕ್ಷಿಸುತ್ತಿದೆ. ಹಾಗಾಗಿ ಇದು 14-14-14 ಸೂತ್ರವನ್ನು ಮುಂದಿಟ್ಟಿದೆ. ಆದರೆ ಮುಖ್ಯಮಂತ್ರಿ ಪಟ್ಟವನ್ನು ಸರದಿ ಪ್ರಕಾರ ಬದಲಿಸುವ ಯಾವುದೇ ಪ್ರಸ್ತಾಪ ಇಂದಿನ ಸಭೆಯಲ್ಲಿ ಬರಲಿಲ್ಲ. ಬದಲಾಗಿ ಎರಡೂ ಪಕ್ಷಗಳು ಉದ್ಭವ್ ಠಾಕ್ರೆ ಅವರೇ ಮುಖ್ಯಮಂತ್ರಿಯಾಗಲೆಂದು ಬಯಸಿವೆ.
ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳ ಮಹತ್ವದ ಸಭೆ ಮುಂಬಯಿಯಲ್ಲಿ ನಡೆಸಲು ಉದ್ದೇಶಿಸಿರುವಂತೆ ಶಿವಸೇನೆಯ ಶಾಸಕರು ಶುಕ್ರವಾರದಂದು ಜೈಪುರಕ್ಕೆ ಹೋಗುವ ನಿರೀಕ್ಷೆ ಇದೆ.
ಉದ್ದೇಶಿತ ಮೈತ್ರಿ ಸರಕಾರದ ನೂತನ ಸಚಿವ ಸಂಪುಟದಲ್ಲಿ ಶಿವಸೇನೆ ನಗರಾಭಿವೃದ್ಧಿ, ಪಿ.ಡಬ್ಲ್ಯು.ಡಿ, ಗೃಹ ಮತ್ತು ಶಿಕ್ಷಣ (ಉನ್ನತ, ತಾಂತ್ರಿಕ, ವೈದ್ಯಕೀಯ, ಪ್ರಾಥಮಿಕ) ಹಾಗೂ ಗ್ರಾಮೀಣಾಭಿವೃದ್ಧಿ ಖಾತೆಗಳನ್ನು ಅಪೇಕ್ಷಿಸುತ್ತಿದೆ.
ಇನ್ನು ಶರದ್ ಪವಾರ್ ಅವರ ಪಕ್ಷ ಗೃಹ, ಹಣಕಾಸು, ಪಿ.ಡಬ್ಲ್ಯು.ಡಿ., ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಗಳನ್ನು ಬಯಸುತ್ತಿದೆ.
ಆದರೆ ಕಾಂಗ್ರೆಸ್ ಪಕ್ಷವು ಇದುವರೆಗೂ ಯಾವುದೇ ನಿರ್ಧಿಷ್ಟ ಖಾತೆಯ ಬೇಡಿಕೆಯ ಕುರಿತಾಗಿ ಬಾಯಿ ಬಿಡುತ್ತಿಲ್ಲ. ಮತ್ತು ಈ ಎಲ್ಲಾ ವಿಚಾರಗಳನ್ನು ಶುಕ್ರವಾರದ ಸಭೆಯಲ್ಲಿಯೇ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಮತ್ತು ಶಿವಸೇನೆಗೆ ಪಕ್ಷ ಬೆಂಬಲ ನೀಡುವ ಕುರಿತಾಗಿ ಶುಕ್ರವಾರದ ಸಭೆಯಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಜೀ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ಅವರು ತಿಳಿಸಿದ್ದಾರೆ.