Advertisement

ಪೆಟ್ಟು ತಿಂದರೂ ಬುದ್ಧಿ ಕಲಿಯದ ಉದ್ಧವ್‌ ಠಾಕ್ರೆ

01:17 AM Jan 18, 2021 | Team Udayavani |

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕರ್ನಾಟಕದ ಗಡಿ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿರುವುದು ಗಡಿ ಭಾಗದಲ್ಲಿ ಮತ್ತೆ ವಿವಾದದ ಬೆಂಕಿಗೆ ತುಪ್ಪ ಸುರಿದಿದೆ. ಗಡಿ ಭಾಗದಲ್ಲಿರುವ ಮರಾಠಿ ಭಾಷಿಕರೇ ಇದಕ್ಕೆ ಸೊಪ್ಪು ಹಾಕುತ್ತಿಲ್ಲ ಎಂಬುದು ಗೊತ್ತಿದ್ದರೂ ಯಾರೋ ಕೆಲವರನ್ನು ತೃಪ್ತಿಪಡಿಸಲು ಹಾಗೂ ಭಾವನಾತ್ಮಕವಾಗಿ ಅವರನ್ನು ಕಟ್ಟಿ ಹಾಕಲು ಇಂತಹ ಕೆಲಸಕ್ಕೆ ಕೈ ಹಾಕುತ್ತಿ ರುವುದು ಹೊಸದೇನಲ್ಲ. ಇದರಲ್ಲಿ ರಾಜಕೀಯ ಸ್ವಾರ್ಥ ಇದೆ ಎಂಬುದು ಗಮನಿಸಬೇಕಾದ ಸಂಗತಿ.

Advertisement

ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದದ ವಿಷಯ ಇಂದು ನಿನ್ನೆ ಆರಂಭವಾದದ್ದಲ್ಲ. ಮಹಾರಾಷ್ಟ್ರ ಸರಕಾರ ಇದರಲ್ಲಿ ಪದೇ ಪದೆ ಕಿರಿಕಿರಿ ಉಂಟು ಮಾಡುತ್ತಲೆ ಬಂದಿದೆ. ಅದಕ್ಕೆ ಕನ್ನಡಿಗರು ಸಹ ತಕ್ಕ ಉತ್ತರ ನೀಡುತ್ತಲೇ ಬಂದಿದ್ದಾರೆ. ಆದರೆ ಈಗ ಮತ್ತೆ ಮಹಾರಾಷ್ಟ್ರದ ಮುಖ್ಯ ಮಂತ್ರಿ ಉದ್ಧವ್‌ ಠಾಕ್ರೆ ವಿವಾದಾತ್ಮಕ ಹೇಳಿಕೆ ಮತ್ತು ಮಹಾರಾಷ್ಟ್ರದ ಮೊಂಡುತನವನ್ನು ಪ್ರಶ್ನೆ ಮಾಡುವಂತಿದೆ.

ಮಹಾರಾಷ್ಟ್ರದ ಕಪಿಬುದ್ಧಿಗೆ ಆಗಾಗ ತಕ್ಕಪಾಠ ಕಲಿಸುತ್ತಲೇ ಬಂದಿರುವ ಗಡಿ ಭಾಗದ ಕನ್ನಡ ಪರ ಹೋರಾಟಗಾರರು ಗಡಿ ಪ್ರದೇಶದ ಹಳ್ಳಿಗಳಲ್ಲಿ ಕನ್ನಡ ಗಟ್ಟಿಯಾಗಿ ಬೆಳೆಯುವಂತೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕನ್ನಡ ಸಂಘಟನೆಗಳ ಸದಸ್ಯರು ಮಹಾನಗರ ಪಾಲಿಕೆ ಎದುರು ಅನಿರೀಕ್ಷಿತ ಎಂಬಂತೆ ಕನ್ನಡ ಧ್ವಜ ಹಾರಿಸಿ ಕನ್ನಡದ ಮತ್ತು ಕನ್ನಡಿಗರ ಶಕ್ತಿ ಏನು ಎಂಬುದನ್ನು ಬಹಳ ಬಲವಾಗಿಯೇ ತೋರಿಸಿದ್ದಾರೆ. ಇಲ್ಲಿ ಪ್ರತಿಭಟನೆ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಲು ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರಯತ್ನ ಮಾಡಿದರೂ ಅದಕ್ಕೆ ಸೂಕ್ತ ಪ್ರತಿಕ್ರಿಯೆ ಸಿಗಲಿಲ್ಲ ಎಂಬುದು ಗಮನಾರ್ಹ.

ಮುಖ್ಯವಾಗಿ ಚುನಾವಣೆ ಬಂದಾಗಲೊಮ್ಮೆ ಮಹಾರಾಷ್ಟ್ರ ನಾಯ ಕರು ಮತ್ತು ಬೆಳಗಾವಿಯಲ್ಲಿರುವ ಮಹಾರಾಷ್ಟ್ರ ಪರ ನಾಯಕರು ಇಂಥ ಕೆಟ್ಟ ಆಟ ಆಡುತ್ತಾರೆ. ಗ್ರಾ.ಪಂ. ಚುನಾವಣೆ ಸಮಯದಲ್ಲಿ ಇಂತಹ ಪ್ರಯತ್ನ ನಡೆಯಿತಾದರೂ ಜನರು ಅದಕ್ಕೆ ಕಿವಿಗೊಡಲಿಲ್ಲ. ಈಗ ಜಿ.ಪಂ., ತಾ.ಪಂ. ಹಾಗೂ ಮಹಾನಗರ ಪಾಲಿಕೆ ಚುನಾವಣೆ ಬರುತ್ತಿವೆ. ಇಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂಬ ದುರುದ್ದೇಶದಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಗಡಿ ವಿವಾದ ಕೆಣಕುತ್ತಿವೆ. ತಮ್ಮ ಹೇಳಿಕೆಗಳಿಂದ ಏನೂ ಪರಿಣಾಮ ಬೀರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿರುವ ಈ ನಾಯಕರು ಇದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಸೇರಿದಂತೆ ಅಲ್ಲಿನ ನಾಯಕರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಹಾಗೆ ನೋಡಿದರೆ ಗಡಿ ಭಾಗದಲ್ಲಿ ಈಗ ಸಾಕಷ್ಟು ಬದಲಾವಣೆ ಕಂಡಿದೆ. ಕನ್ನಡ ಪರ ವಾತಾವರಣ ಮೊದಲಿಗಿಂತ ಗಮನಾರ್ಹ ಹೆಚ್ಚಿದೆ. ಮರಾಠಿ ಭಾಷಿಕರು ಸಹ ವಿವಾದದಿಂದ ಹೊರಬಂದು ಮುಖ್ಯವಾಹಿನಿಗೆ ಬರಲು ಆಸಕ್ತಿ ತೋರಿಸುತ್ತಿದ್ದಾರೆ. ರಾಜಕೀಯದಲ್ಲಿ ಆಸಕ್ತಿ ಇದ್ದವರು ಪ್ರಮುಖ ರಾಷ್ಟ್ರೀಯ ಪಕ್ಷಗಳ ಮೂಲಕ ತಮ್ಮ ಭವಿಷ್ಯ ರೂಪಿಸಿ ಕೊಳ್ಳುತ್ತಿದ್ದರೆ, ಉಳಿದವರು ತಮ್ಮ ಬದುಕಿಗಾಗಿ ವಾಸ್ತವ ಸ್ಥಿತಿಯ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದು ಬಹಳ ಒಳ್ಳೆಯ ಬೆಳವಣಿಗೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next