ಮುಂಬಯಿ : ರಾಜಕೀಯ ಹಾಗೂ ಕೋವಿಡ್ ವಿಚಾರದಲ್ಲಿ ತಮ್ಮನ್ನು ಟೀಕಿಸುತ್ತಿರುವವರಿಗೆ ಉತ್ತರಿಸಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, “ಮಹಾ ರಾಷ್ಟ್ರಕ್ಕೆ ಕಳಂಕ ತರಲು ಕೆಲವರು ಸಂಚು ರೂಪಿಸಿದ್ದಾರೆ. ಆದರೆ, ಯಾವುದೇ ರೀತಿಯ ರಾಜಕೀಯ ಬಿರುಗಾಳಿಯನ್ನೂ, ಕೋವಿಡ್ ಸೋಂಕನ್ನೂ ಎದುರಿಸಲು ನಾನು ಸಿದ್ಧನಿದ್ದೇನೆ’ ಎಂದು ಹೇಳಿದ್ದಾರೆ.
ಕಂಗನಾ ಗಲಾಟೆ ಹಾಗೂ ಕೋವಿಡ್ ವ್ಯಾಪಿಸುವಿಕೆ ಹಿನ್ನೆಲೆಯಲ್ಲಿ ಅವರ ಮಾತುಗಳು ಮಹತ್ವ ಪಡೆದಿವೆ. ರವಿವಾರ ಟಿವಿ ಮೂಲಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ನಮ್ಮ ಸರಕಾರವು ಕೋವಿಡ್ ಸೋಂಕು, ಚಂಡಮಾರುತ, ಪ್ರವಾಹವನ್ನು ಸಮರ್ಥವಾಗಿ ಎದುರಿಸಿದೆ. ಅದೇ ರೀತಿ ರಾಜಕೀಯ ಬಿರುಗಾಳಿಯನ್ನೂ ಎದುರಿಸಲಿದೆ.
ಕೀಳುಮಟ್ಟದ ರಾಜಕೀಯಕ್ಕೆ ಪ್ರತಿಕ್ರಿಯಿಸಬೇಕೆಂದರೆ ನಾನು “ಮುಖ್ಯಮಂತ್ರಿ’ ಎಂಬ ಮಾಸ್ಕ್ ಅನ್ನು ತೆಗೆಯಬೇಕಾಗುತ್ತದೆ. ನಾನು ಮಾತನಾಡುತ್ತಿಲ್ಲ ಎಂದ ಮಾತ್ರಕ್ಕೆ, ನನ್ನಲ್ಲಿ ಉತ್ತರವಿಲ್ಲ ಎಂದರ್ಥವಲ್ಲ’ ಎಂದು ನುಡಿದಿದ್ದಾರೆ.
ಇದನ್ನೂ ಓದಿ :
ವಿಮಾನ ಪ್ರಯಾಣಿಕರ ಗಮನಕ್ಕೆ! ಪ್ರಯಾಣದ ವೇಳೆ ನಿಯಮ ಉಲ್ಲಂಘಿಸಿದರೆ ಜೋಕೆ!
ಸೋಂಕಿನ ಕುರಿತೂ ಮಾತನಾಡಿದ ಅವರು, ಕೊರೊನಾ ಈಗ ರಾಜ್ಯದ ಗ್ರಾಮೀಣ ಭಾಗಗಳಲ್ಲೂ ವ್ಯಾಪಕವಾಗಿ ಹಬ್ಬುತ್ತಿದೆ. ದಯವಿಟ್ಟು ಯಾರೂ ಇದನ್ನು ಹಗುರವಾಗಿ ಪರಿಗಣಿಸಬೇಡಿ.
ಜನ ಬೆಂಬಲ ದೊಂದಿಗೆ ನಾವು ಈ ಯುದ್ಧವನ್ನು ಗೆಲ್ಲಬೇಕಿದೆ. ಸೆ.15ರಿಂದ “ನನ್ನ ಕುಟುಂಬ, ನನ್ನ ಹೊಣೆಗಾರಿಕೆ’ ಎಂಬ ಅಭಿಯಾನ ಆರಂಭಿಸುತ್ತಿದ್ದು, ಅದನ್ನು ಎಲ್ಲರೂ ಸೇರಿ ಯಶಸ್ವಿಯಾಗಿಸಬೇಕು ಎಂದೂ ಕರೆ ನೀಡಿದ್ದಾರೆ.