Advertisement

ಉದಯವಾಣಿ ಸಂದರ್ಶನ: ಜನರ ನಿರೀಕ್ಷೆಯಂತೆ ಶತದಿನಗಳ ಆಡಳಿತ

10:07 AM Nov 04, 2019 | mahesh |

ಬೆಂಗಳೂರು: ನೂರು ದಿನಗಳ ಆಡಳಿತದಲ್ಲಿ ಜನರ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ. ಮುಂದಿನ ಮೂರೂವರೆ ವರ್ಷಗಳ ಬೆಳವಣಿಗೆಗೆ ಅಡಿಪಾಯ ಹಾಕಿದ್ದೇನೆ. ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸವಿರಿಸಿ ಸಿಎಂ ಮಾಡಿದ್ದಾರೆ. ಅಧಿಕಾರಾವಧಿ ಪೂರ್ಣಗೊಳಿಸುವ ವಿಶ್ವಾಸವಿದ್ದು, ಅದು ನನ್ನ ಕಾರ್ಯ ನಿರ್ವಹಣೆ ಮೇಲೆ ಅವಲಂಬಿತವಾಗಿದೆ.

Advertisement

-ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಪಷ್ಟ ನುಡಿ. ರಾಜ್ಯ ಬಿಜೆಪಿ ಸರಕಾರ ಶನಿವಾರಕ್ಕೆ ಶತದಿನ ಪೂರೈಸಿದ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಸರಕಾರದ ಆಡಳಿತ ವೈಖರಿ, ಸವಾಲು, ರಾಜಕೀಯ ಬೆಳವಣಿಗೆ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಶತದಿನಗಳ ಆಡಳಿತ ಹೇಗನ್ನಿಸುತ್ತಿದೆ?
ಒಂದು ದಿನವೂ ವಿಶ್ರಾಂತಿ ಪಡೆಯದೆ ಕರ್ತವ್ಯ ನಿರ್ವಹಿಸಿದ್ದೇನೆ. ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ. ಸಂಪುಟ ಸಹೋದ್ಯೋಗಿಗಳು, ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷರು ಸಹಕರಿಸುತ್ತಿದ್ದಾರೆ. ಸಮಸ್ಯೆಯಿಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.

“ತಂತಿ ಮೇಲಿನ ನಡಿಗೆ’ ಸ್ಥಿತಿ ಸುಧಾರಿಸಿದೆಯೇ?
ಸಾಲ ಮನ್ನಾ, ನೆರೆ ಸಂತ್ರಸ್ತರಿಗೆ ಪರಿಹಾರ, ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಬೇಕಾದಾಗ, ಅನುದಾನ ಬೇಡಿಕೆಯೂ ಎದುರಾದಾಗ ಆ ಹೇಳಿಕೆ ನೀಡಿದ್ದೆ. ಈಗ ಹಣಕಾಸು ಸ್ಥಿತಿ ಚೆನ್ನಾಗಿದೆ. ತೆರಿಗೆ ಸಂಗ್ರಹವೂ ತೃಪ್ತಿಕರವಾಗಿದೆ. ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು.

ರಾಜ್ಯದ ಅಭಿವೃದ್ಧಿಗೆ ನಿಮ್ಮ ಗುರಿ ಏನು?
ಮುಖ್ಯವಾಗಿ ರಾಜ್ಯದ ರೈತರ ಆರ್ಥಿಕತೆ ಸುಧಾರಣೆಗೆ ಒತ್ತು ನೀಡಲಾಗುವುದು. ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುವಂತೆ ಪ್ರಯತ್ನಿಸಲಾಗುವುದು. ತಿಂಗಳಿ ನಲ್ಲಿ ಬೆಂಗಳೂರಿಗೆ ಹೊಸ ರೂಪ ನೀಡಲು ಪ್ರಯತ್ನಿಸಲಾಗುವುದು. ವಸತಿ ಯೋಜನೆಗಳಿಗೆ ಆದ್ಯತೆ ನೀಡಿ, ಕೈಗಾರಿಕಾಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಗಮನ ನೀಡಲಾಗುತ್ತಿದೆ. 100 ದಿನಗಳಲ್ಲಿ ಇದಕ್ಕೆ ಪೂರಕವಾದ ಅಡಿಪಾಯ ಹಾಕುವ ಪ್ರಯತ್ನ ಮಾಡಿದ್ದೇನೆ.

Advertisement

ಅನರ್ಹರಾದ ಶಾಸಕರಿಗೂ ಬಿಜೆಪಿ ಸಂಬಂಧವಿಲ್ಲ ಎನ್ನುವ ನೀವು, ಅವರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡುತ್ತಿರುವ ಉದ್ದೇಶವೇನು?
ಅನರ್ಹರಾದ ಶಾಸಕರು ಹಿಂದಿನ ಮೈತ್ರಿ ಸರಕಾರದ ಮೇಲೆ ವಿಶ್ವಾಸವಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದವರು. ಹಾಗಾಗಿ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾದ ಬಿಜೆಪಿಗೆ ಅಧಿಕಾರಕ್ಕೆ ಸಿಕ್ಕಿದೆ. ಅಂದರೆ ಪರೋಕ್ಷವಾಗಿ ಅವರ ಸಹಕಾರ ನಮಗೆ ಸಿಕ್ಕಿದೆ, ಹೌದಲ್ಲವೆ? ಸುಪ್ರೀಂ ಕೋರ್ಟ್‌ ತೀರ್ಪಿನ ಅನಂತರ ಮುಂದೇನು ಮಾಡಬೇಕು ಎಂಬುದು ಅವರಿಗೆ ಬಿಟ್ಟ ವಿಚಾರ. ನಾವೇನು ಮಾಡಬೇಕು ಎಂಬುದನ್ನು ಪರಿಸ್ಥಿತಿ ಅವಲೋಕಿಸಿ, ಚರ್ಚಿಸಿ ತೀರ್ಮಾನಿಸುತ್ತೇವೆ. ಹಿಂದೆ ಅನುದಾನ ಹಂಚಿಕೆಯಲ್ಲಿ ಉಂಟಾಗಿದ್ದ ಅಸಮತೋಲನ ಸರಿಪಡಿಸಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ಮೇರೆಗೆ ಅನುದಾನ ನೀಡಲಾಗುತ್ತಿದೆಯಷ್ಟೆ.

ಯಡಿಯೂರಪ್ಪ ಅವರಿಗೆ ತೊಂದರೆ ನೀಡಿದರೆ ಬೀದಿಗಿಳಿಯ ಲಾಗುವುದು ಎಂದು ಹಲವು ಮಠಾಧಿಪತಿಗಳು ಎಚ್ಚರಿಕೆ ನೀಡಿದ್ದು ವಿಪಕ್ಷಗಳಿಗೋ ಬಿಜೆಪಿಗೋ?
ಅಂಥ ಹೇಳಿಕೆಯ ಅಗತ್ಯವಿಲ್ಲ. ರಾಜ್ಯದ ಎಲ್ಲ ಮಠಾಧಿಪತಿಗಳು, ಸ್ವಾಮೀಜಿಗಳು, ಎಲ್ಲ ಜನಾಂಗದವರು ನನಗೆ ಬೆಂಬಲವಾಗಿದ್ದಾರೆ. ಆದ್ದರಿಂದ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಸರಕಾರ, ಪಕ್ಷದ ನಡುವೆ ಸಮನ್ವಯದ ಕೊರತೆ ಇದೆಯೇ?
ಅಂಥ ಪ್ರಶ್ನೆಯೇ ಇಲ್ಲ. ಹಿಂದೆ ನಾನು ರಾಜ್ಯಾಧ್ಯಕ್ಷನಾಗಿದ್ದಾಗ ಪಕ್ಷದ ಕಾರ್ಯಾಲಯದಲ್ಲಿ ಹಿಂದೆ ಇದ್ದ ಕೆಲವರನ್ನು ಬದಲಾಯಿಸಿ ನನಗೆ ಬೇಕಾದವರನ್ನು ನೇಮಿಸಿಕೊಂಡಿದ್ದೆ. ಈಗ ಹೊಸ ರಾಜ್ಯಾಧಕ್ಷರಿದ್ದಾರೆ. ಹಾಗಾಗಿ ತಮಗೆ ಬೇಕಾದವರನ್ನು ನೇಮಿಸಿಕೊಂಡಿದ್ದಾರೆ. ಇದು ಸಹಜ ಪ್ರಕ್ರಿಯೆ. ನನ್ನೊಂದಿಗೆ ಚರ್ಚಿಸಿಯೇ ಇವೆಲ್ಲ ಆಗಿವೆ. ಹಾಗಿದ್ದರೂ ಕೆಲವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ.

ಆಡಳಿತ ಯಂತ್ರಕ್ಕೆ ಹೇಗೆ ಚುರುಕು ಮುಟ್ಟಿಸುವಿರಿ?
ಯಾವೆಲ್ಲ ಇಲಾಖೆಗಳಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಖಾಲಿ ಹುದ್ದೆ ಭರ್ತಿಗೆ ಸೂಚನೆ ನೀಡಲಾಗಿದೆ. ನನ್ನ ಕಚೇರಿಗೂ ದಕ್ಷ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳುತ್ತಿದ್ದು, ದೂರುಗಳಿದ್ದ ಅಧಿಕಾರಿಗಳನ್ನು ಬದಲಾಯಿಸಲಾಗಿದೆ. ಆಯಕಟ್ಟಿನ ಸ್ಥಾನಗಳಿಗೆ ಜನರು ಒಪ್ಪುವಂಥ ಸೂಕ್ತ, ಸಮರ್ಥ ಅಧಿಕಾರಿಗಳನ್ನು ನೇಮಿಸುವ ಕಾರ್ಯ ನಡೆದಿದೆ.

 ಕುಮಾರಸ್ವಾಮಿಯವರು ಸರಕಾರದ ಬಗ್ಗೆ ಮೃದು ಧೋರಣೆ ತೋರುತ್ತಿರುವುದರ ಅರ್ಥವೇನು?
ಜೆಡಿಎಸ್‌ ಜತೆ ಕೈಜೋಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಉಪಚುನಾವಣೆ ಬಳಿಕ ಬಿಜೆಪಿ ಶೇ.101ರಷ್ಟು ಸ್ಪಷ್ಟ ಬಹುಮತ ಪಡೆಯಲಿದೆ. ಮೂರೂವರೆ ವರ್ಷದ ಆಡಳಿತ ಪೂರ್ಣಗೊಳಿಸುತ್ತೇವೆ.

 ಯಡಿಯೂರಪ್ಪ ಸರಕಾರದ ಶತದಿನಗಳ ಸಾಧನೆ ಶೂನ್ಯ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಏನು ಹೇಳುವಿರಿ?
ಸದ್ಯದಲ್ಲೇ ಶತದಿನಗಳ ಸಾಧನೆಯ ಹೊತ್ತಿಗೆ ಬಿಡುಗಡೆ ಮಾಡಲಿದ್ದೇನೆ. ಆಗ ರಾಜ್ಯದ ಜನ ಎಷ್ಟು ಅಂಕ ಕೊಡುತ್ತಾರೋ ಅದಕ್ಕೆ ತಲೆಬಾಗುತ್ತೇನೆ. ನಾನು ಎಲ್ಲವನ್ನೂ ಮಾಡಿದ್ದೇನೆ ಎಂದು ಹೇಳುವುದಿಲ್ಲ. ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ. ಮೊದಲಿಗೆ ಸಿದ್ದರಾಮಯ್ಯ ಅವರ ಸಾಧನೆ ಏನೆಂದು ನೋಡಿಕೊಳ್ಳಲಿ. ಅವರು ಅಧಿಕಾರದಲ್ಲಿದ್ದಾಗಲೇ ಲೋಕಸಭಾ ಕ್ಷೇತ್ರದಲ್ಲಿ ಕೇವಲ ಒಂದು ಸ್ಥಾನ ಗಳಿಸಿರುವುದನ್ನು ಗಮನದಲ್ಲಿಟ್ಟುಕೊಳ್ಳಲಿ.

 ಉಪಚುನಾವಣೆ ಸಿದ್ಧತೆಯಲ್ಲಿ ಹಿನ್ನಡೆಯಾಗಿಲ್ಲವೇ?
ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ ತೀರ್ಪು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣೆಗೆ ಸಿದ್ಧರಾಗುತ್ತೇವೆ. ಉಪಚುನಾವಣೆಯನ್ನು ಅಭಿವೃದ್ಧಿ ಅಜೆಂಡಾ ಆಧಾರದ ಮೇಲೆ ಎದುರಿಸಲಾಗುವುದು.

ಹೈಕಮಾಂಡ್‌ ಕಡಿವಾಣ ಹಾಕುತ್ತಿದೆಯೇ?
ಇವೆಲ್ಲ ಗಾಳಿ ಸುದ್ದಿ. ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಮತ್ತು ನಾನು ನಿರಂತರ ಸಂಪರ್ಕ ದಲ್ಲಿ ದ್ದೇವೆ. ರಾಜ್ಯಾಧ್ಯಕ್ಷರು, ಸಂತೋಷ್‌ ಮತ್ತು ನನ್ನ ನಡುವೆ ಭಿನ್ನಾಭಿಪ್ರಾಯ ಇಲ್ಲ. ಕೇಂದ್ರ ನಾಯಕರು ನನ್ನ ಮೇಲೆ ವಿಶ್ವಾಸ ಹೊಂದಿದ್ದರಿಂದ ಸಿಎಂ ಮಾಡಿದ್ದಾರೆ. ನನಗೆ ಬೇಕೆನಿಸಿದಾಗ ಪ್ರಧಾನಿಯವರನ್ನು 5- 10 ನಿಮಿಷಗಳಲ್ಲಿ ಭೇಟಿಯಾಗಿ ಬರುತ್ತೇನೆ. ಹಾಗೆಂದು ಅದನ್ನು ಪ್ರಚಾರ ಮಾಡಲಾಗುತ್ತದೆಯೇ?

- ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next