Advertisement

Interview:ನಾವು ಹಿಂದೂಗಳಪರ ಎಂದು ಬೊಬ್ಬೆ ಹಾಕುವ ಬಿಜೆಪಿಯೇ ಹುಂಡಿಗೆ ಮೊದಲು ಕೈ ಹಾಕಿದ್ದು!

10:08 AM Feb 28, 2024 | Team Udayavani |

ಯಡಿಯೂರಪ್ಪ ಅವಧಿಯಲ್ಲೇ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು ಎಂದು ಅವರು ಮರೆತರೇ?

Advertisement

ಬಿಜೆಪಿಗೆ ಅರ್ಚಕರು ಮತ್ತು ನೌಕರರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಈ ಕಾಯ್ದೆ ಬೆಂಬಲಿಸಲಿ

ದೇವಸ್ಥಾನಗಳ ಹುಂಡಿಗೆ ಮೊದಲು ಕೈಹಾಕಿದ್ದೇ ಬಿಜೆಪಿಯವರು. ತಾವು ಹಿಂದೂಗಳ ಪರ ಎಂದು ಬೊಬ್ಬೆ ಹೊಡೆಯುವ ಇವರ್ಯಾಕೆ ದೇವಸ್ಥಾನಗಳ ಹುಂಡಿಗೆ ಕೈಹಾಕಿದ್ರು? ಅಷ್ಟು ಕಳಕಳಿ ಇದ್ದಿದ್ದರೆ, 2011ರಲ್ಲಿ ಕಾಯ್ದೆಯನ್ನು ರದ್ದು ಮಾಡ ಬೇಕಿತ್ತಲ್ಲವೇ? ಹಾಗಾಗಿ, “ಹುಂಡಿಯಲ್ಲೂ ಹತ್ತು ಪರ್ಸೆಂಟ್‌’ನ ಮೊದಲ ಕ್ರೆಡಿಟ್‌ ಈಗ ಆರೋಪ ಮಾಡುತ್ತಿರುವ ವಿಪಕ್ಷಕ್ಕೇ ಹೋಗುತ್ತದೆ…

ಹುಂಡಿಯಲ್ಲೂ ಹತ್ತು ಪರ್ಸೆಂಟ್‌ ಲೂಟಿ ಎಂದು ಆರೋಪಿಸುತ್ತಿರುವ ವಿಪಕ್ಷ ಬಿಜೆಪಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ತಿರುಗೇಟು ಇದು.

“ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಮಸೂದೆ- 2024′ ಈಗ ವಿವಾದದ ಕೇಂದ್ರಬಿಂದು ಆಗಿದೆ. ಮೇಲ್ಮನೆಯಲ್ಲಿ ಮಸೂದೆಗೆ ಸೋಲುಂಟಾಗಿದ್ದು, ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಸರಕಾರ ಮತ್ತೆ ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ನಿರ್ಧರಿಸಿದೆ.

Advertisement

ಈ ಮಧ್ಯೆ ವಿಪಕ್ಷಗಳು ಕಾಂಗ್ರೆಸ್‌ ಸರಕಾರದ ವಿರುದ್ಧ ಮತ್ತೂಂದು “ಹಿಂದೂ ವಿರೋಧಿ’ ಅಸ್ತ್ರ ಪ್ರಯೋಗಿಸುತ್ತಿವೆ. ಸೋಮ ವಾರ ಕೆಳಮನೆಯಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಸಿದ್ಧತೆ ಮಾಡಿಕೊಳ್ಳುವಲ್ಲಿ ನಿರತರಾಗಿದ್ದ ಮುಜರಾಯಿ ಸಚಿವ ರಾಮ ಲಿಂಗಾರೆಡ್ಡಿ “ಉದಯವಾಣಿ’ಯೊಂದಿಗೆ ಅದೇ ಮಸೂದೆಯ ಬಗ್ಗೆ ಸುದೀರ್ಘ‌ವಾಗಿ ಮಾತನಾಡಿದರು.

 ಗ್ಯಾರಂಟಿಗಳಿಂದ ಸರಕಾರದ ಬಳಿ ದುಡ್ಡಿಲ್ಲ ಎಂಬ ಆರೋಪ ವಿಪಕ್ಷಗಳು ಮಾಡುತ್ತಲೇ ಇವೆ. ಈ ಮಧ್ಯೆ ದೇವಸ್ಥಾನಗಳ ಹುಂಡಿಗೂ ಕೈಹಾಕುವ ಮೂಲಕ ಅದನ್ನು ಸರಕಾರ ಸಾಬೀತುಪಡಿಸಲು ಹೊರಟಿದೆಯೇ?

ದೇವಸ್ಥಾನಗಳ ಹುಂಡಿಗೆ ಮೊದಲು ಕೈಹಾಕಿದ್ದೇ ಬಿಜೆಪಿಯವರು. 2003ರಲ್ಲಿ ಜಾರಿಗೊಂಡಿದ್ದ ಈ ಕಾಯ್ದೆಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪ ಅವಧಿಯಲ್ಲಿ ಅಂದರೆ 2011ರಲ್ಲಿ ತಿದ್ದುಪಡಿ ತಂದು ಮೊದಲ ಬಾರಿಗೆ ಹುಂಡಿಗೆ ಕೈಹಾಕಲಾಯಿತು. ಆಗ ನೀವ್ಯಾಕೆ (ಬಿಜೆಪಿ) ಕೈಹಾಕಿದ್ರಿ? ಕಾಯ್ದೆ ರದ್ದು ಮಾಡ ಬೇಕಿತ್ತಲ್ಲವೇ? ನಮ್ಮ ವಿರುದ್ಧ ಹತ್ತು ಪರ್ಸೆಂಟ್‌ ಆರೋಪ ಮಾಡು ತ್ತಿರುವ ಬಿಜೆಪಿಯೇ ಇದರ ಮೊದಲ ಕ್ರೆಡಿಟ್‌ ತೆಗೆದುಕೊಂಡಿದೆ ಎಂದಾಯಿತಲ್ಲವೇ?

 ದೇವಸ್ಥಾನಗಳ ಅಭಿವೃದ್ಧಿಗೆ ವರ್ಷಕ್ಕೆ 50 ಕೋ.ರೂ. ಕೊಡಲಿಕ್ಕೂ ಸರಕಾರಕ್ಕೆ ಆಗುವುದಿಲ್ಲವೇ? ಅದನ್ನೂ ಒಂದು ದೇವಸ್ಥಾನದಿಂದ ಕಿತ್ತು ಮತ್ತೂಂದು ದೇವಸ್ಥಾನಕ್ಕೆ ಕೊಡುವ ಸ್ಥಿತಿ ಬಂದಿತೇ?

ಸರಕಾರದ ಬಳಿ ದುಡ್ಡಿಲ್ಲ ಅಂತಲ್ಲ. ಈ ಬಾರಿ ಬಜೆಟ್‌ನಲ್ಲಿ ಕೊಡುತ್ತಾರೆ ಅಂದುಕೊಳ್ಳೋಣ. ಮುಂದಿನ ಬಾರಿ ಕೊಡದೆ ಹೋಗಬಹುದು. ಆಗ ಯೋಜನೆ ಕೈಬಿಡಬೇಕಾ? ಯೋಜನೆ ಅಡಿ ಅರ್ಚಕರು ಮತ್ತು ದೇವಸ್ಥಾನಗಳ ನೌಕರರಿಗೆ ಜೀವವಿಮೆಯ ಪ್ರಿಮಿಯಂ, ಅವರ ಮಕ್ಕಳಿಗೆ ಶಿಷ್ಯವೇತನ ಕೊಡಲಿದ್ದೇವೆ. ಅದಕ್ಕೊಂದು ಶಾಶ್ವತ ಆದಾಯ ಮೂಲ ಇರಬೇಕು. ಒಮ್ಮೆ ಕೊಟ್ಟ ಅನಂತರ ನಿರಂತರವಾಗಿರಬೇಕು. ಒಂದು ವರ್ಷ ದುಡ್ಡು ಇಟ್ಟಿಲ್ಲ ಅಂತ ನಿಲ್ಲಿಸುವಂತಾಗಬಾರದು. ಅಷ್ಟಕ್ಕೂ ಬಿಜೆಪಿಯವರು ತಿದ್ದುಪಡಿ ಮಾಡಿದ್ದರಿಂದ ಎಂಟು ಕೋಟಿ ಬರುತ್ತಿತ್ತಲ್ಲ. ಅದನ್ನು ಯಾಕೆ ಮಾಡಿದರು? ಅವರು ಮಾಡಿದ್ದಕ್ಕಿಂತ ನಾವು ಸ್ವಲ್ಪ ಜಾಸ್ತಿ ಮಾಡಿದ್ದೇವೆ ಅಷ್ಟೇ. ಅವರು ನಿವ್ವಳದಲ್ಲಿ ಮಾಡಿದ್ದರು. ನಾವು ಒಟ್ಟಾರೆ ಆದಾಯ ದಲ್ಲಿ ಶೇ. 10ರಷ್ಟು ಮಾಡಿದ್ದೇವೆ. 50-60 ಕೋಟಿ ಆದಾಯ ಬರುತ್ತದೆ.

 ಒಟ್ಟಾರೆ ಶಕ್ತಿ ಯೋಜನೆಯಿಂದ ಹುಂಡಿಗಳು ತುಂಬುತ್ತಿವೆ. ಅದನ್ನು ಕಾಯ್ದೆಗೆ ತಿದ್ದುಪಡಿ ತಂದು ಖಾಲಿ ಮಾಡುತ್ತಿದ್ದೀರಿ ಎನ್ನುತ್ತಿವೆ ವಿಪಕ್ಷಗಳು.

ಇದಕ್ಕೆ ನನ್ನ ಪ್ರಶ್ನೆ ಇಷ್ಟೇ- ಇಷ್ಟೆಲ್ಲ ಆರೋಪ ಮಾಡುವವರು, ನೀವ್ಯಾಕೆ ನಾಲ್ಕು ವರ್ಷಗಳಲ್ಲಿ ಸರಕಾರದಿಂದಲೇ ಹಣ ತೆಗೆದುಕೊಳ್ಳಲಿಲ್ಲ? ಸರಕಾರದಿಂದ ದೇವಸ್ಥಾನಗಳಿಗಾಗಿ ಅನುದಾನ ಪಡೆದರೂ, ಅದನ್ನು “ಸಿ’ ದರ್ಜೆ ದೇವಸ್ಥಾನಗಳ ಅಭಿವೃದ್ಧಿಗೆ ಯಾಕೆ ವಿನಿಯೋಗಿಸಲಿಲ್ಲ? ನೌಕರರಿಗೆ ಕನಿಷ್ಠ ಸೌಲಭ್ಯಗಳನ್ನು ಕೊಡಲಿಲ್ಲ. ನೌಕರರು ಸಾವನ್ನಪ್ಪಿದರೆ, ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರ 35 ಸಾವಿರ ರೂ. ಅದು ಅಂತ್ಯಸಂಸ್ಕಾರಕ್ಕೂ ಆಗುವುದಿಲ್ಲ. ಈ ತಿದ್ದುಪಡಿಯಿಂದ ಎರಡು ಲಕ್ಷ ಸಿಗುತ್ತದೆ.

ಚುನಾವಣೆ ಹೊಸ್ತಿಲಲ್ಲಿ ತರುತ್ತಿರುವ ಈ ಕಾಯ್ದೆಯು ವಿಪಕ್ಷಗಳಿಗೆ ಮತ್ತೂಂದು ಅಸ್ತ್ರ ಆಗುವುದಿಲ್ಲವೇ?

ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿದ್ದಾಗಲೂ ಹಿಜಾಬ್‌, ಹಲಾಲ್‌, ಜಟ್ಕಾಕಟ್‌, ಆಜಾನ್‌, ಜಾತ್ರೆಗಳಲ್ಲಿ ಅಲ್ಪಸಂಖ್ಯಾಕರು ವ್ಯಾಪಾರ ಮಾಡುವಂತಿಲ್ಲ ಎಂದೆಲ್ಲ ವಿವಾದ ಸೃಷ್ಟಿಸಿದರು. ಎಲ್ಲ ಕಟ್ಟುಗಳು, ಪಟ್ಟುಗಳು, ನೈತಿಕ ಪೊಲೀಸ್‌ಗಿರಿ ಅನಂತರವೂ ಆಗಿದ್ದು ಏನು? ಹೀನಾಯವಾಗಿ ಸೋಲನುಭವಿಸಿದರು. ಯಾಕೆಂದರೆ ಜನ ಇವರನ್ನು ತಿರಸ್ಕರಿಸಿದರು. ಲೋಕಸಭೆ ಚುನಾವಣೆಯಲ್ಲೂ ಜನ ತಕ್ಕ ಉತ್ತರ ನೀಡಲಿದ್ದಾರೆ. ಬಿಜೆಪಿಗೆ ಅರ್ಚಕರು ಮತ್ತು ನೌಕರರ ಬಗ್ಗೆ ಕಾಳಜಿ ಇದ್ದರೆ, ಕಾಯ್ದೆ ಬೆಂಬಲಿಸಬೇಕಿತ್ತು.

 ಕಾಯ್ದೆ ತಿದ್ದುಪಡಿಯ ಅನುಕೂಲವಾದರೂ ಏನು?

ನಮ್ಮಲ್ಲಿ 35 ಸಾವಿರ ದೇವಸ್ಥಾನಗಳಿವೆ. ಅದರಲ್ಲಿ 205 ಎ ದರ್ಜೆ ದೇವಸ್ಥಾನಗಳಿದ್ದು, 25 ಲಕ್ಷಕ್ಕಿಂತ ಹೆಚ್ಚು ಆದಾಯ ಬರುವಂತಹದ್ದು. “ಬಿ’ ದರ್ಜೆಯ 5-10 ಲಕ್ಷ ಆದಾಯ ಇರುವಂತಹವು. ಸಿ- 5 ಲಕ್ಷಕ್ಕಿಂತ ಕಡಿಮೆ ಇರುವಂತಹವು. ಧಾರ್ಮಿಕ ಪರಿಷತ್ತು, ಸೆಂಟ್ರಲ್‌ ಪೂಲ್‌ ಫ‌ಂಡ್‌ ಅಂತ ಬರುತ್ತದೆ. 34 ಸಾವಿರಕ್ಕೂ ಅಧಿಕ “ಸಿ’ ದರ್ಜೆ ದೇವಸ್ಥಾನಗಳಿವೆ. 40 ಸಾವಿರಕ್ಕೂ ಅಧಿಕ ಅರ್ಚಕರು, ನೌಕರರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅವರಿಗೆ ಏನಾದರೂ ಸಹಾಯ ಮಾಡಬೇಕು ಅಂತ ಈ ತಿದ್ದುಪಡಿ ತರಲಾಗಿದೆ. ಇದರಿಂದ 50-60 ಕೋಟಿ ಬರುತ್ತದೆ. ಅದರಲ್ಲಿ 25 ಕೋಟಿಯಲ್ಲಿ ಒಂದು ಸಾವಿರ ದೇವಸ್ಥಾನಗಳ ಅಭಿವೃದ್ಧಿಗೆ ತಲಾ 2.5 ಲಕ್ಷ ರೂ. ವಿನಿಯೋಗಿಸಲಾಗುತ್ತದೆ. ಐದು ವರ್ಷಕ್ಕೆ ಐದು ಸಾವಿರ ದೇವಸ್ಥಾನಗಳಾಗುತ್ತವೆ. ಉಳಿದಂತೆ 15 ಕೋಟಿ ಮೊತ್ತವನ್ನು 750 ಅರ್ಚಕರು ಮತ್ತು ನೌಕರರ ಮನೆ ನಿರ್ಮಾಣಕ್ಕೆ, 40 ಸಾವಿರ ಜನರಿಗೆ ವಿಮಾ ಕಂತು ಪಾವತಿಸಲು 7-8 ಕೋಟಿ ಬೇಕಾಗುತ್ತದೆ. ಐದು ಕೋಟಿ ಅವರ ಮಕ್ಕಳ ಶಿಷ್ಯವೇತನ ನೀಡಲಾಗುವುದು. ಎಲ್ಲ ಹಣವೂ “ಸಿ’ ದರ್ಜೆ ದೇವಸ್ಥಾನಗಳಿಗೇ ಹೋಗುತ್ತದೆ.

 ಹಿಂದೂಯೇತರ ದೇವಸ್ಥಾನಗಳಿಗೆ ವಿನಿಯೋಗಿಸುವ ಆತಂಕವೂ ವ್ಯಕ್ತವಾಗುತ್ತಿದೆಯಲ್ಲ?

ಈ ಕಾಯ್ದೆ ಜಾರಿ ಬಂದಾಗಿನಿಂದಲೂ ಯಾವ ಸರಕಾರದಲ್ಲೂ ಆಯಾ ದೇವಸ್ಥಾನಗಳಲ್ಲೇ ಇರುತ್ತದೆ. ಬೇರೆ ಉದ್ದೇಶಕ್ಕೆ ಅಥವಾ ಅನ್ಯ ಧಾರ್ಮಿಕ ಸಂಸ್ಥೆಗಳಿಗೆ ಬಳಕೆ ಮಾಡಲು ಅವಕಾಶವೇ ಇಲ್ಲ. 21 ವರ್ಷಗಳಲ್ಲಿ ಎಲ್ಲಿಯಾದರೂ ಬಳಸಿದ್ದು ಒಂದು ಉದಾಹರಣೆ ತೋರಿಸಲಿ. ಸರಕಾರದಿಂದ ಬೇರೆ ಬೇರೆ ಧಾರ್ಮಿಕ ಸಂಸ್ಥೆಗಳಿಗೆ ಕೊಡಬಹುದಷ್ಟೇ. ಇನ್ನು ತಸ್ತಿಕ್‌ ಹಣ 2006ರಲ್ಲಿ ಬರೀ 6 ಸಾವಿರ ರೂ. ಇತ್ತು. 2010ರಲ್ಲಿ 12 ಸಾವಿರ ಆಯಿತು. 2013ರಿಂದ 2017ರವರೆಗೆ 48 ಸಾವಿರ ರೂ. ಆಯಿತು. ನಮ್ಮ ಅವಧಿಯಲ್ಲೇ 36 ಸಾವಿರ ಹೆಚ್ಚಳ ಆಯಿತು. ಇದಕ್ಕೆ ಇನ್ನಷ್ಟು ಸಹಾಯ ಆಗಲಿ ಅಂತಾನೇ ಈ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ.

 ಮತ್ತೆ ಏಕೆ ಹಿಂದೂ ವಿರೋಧಿ ಪಟ್ಟ ಕಟ್ಟಲಾಗುತ್ತಿದೆ?

ಅವರು ಅಪಪ್ರಚಾರ ಮಾಡುತ್ತಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾ ಗೆಲ್ಲ ಹೀಗೆ ಅಪಪ್ರಚಾರ ಮಾಡುತ್ತಾರೆ. ನಿಜ ಹೇಳಬೇಕೆಂದರೆ, ಬಿಜೆಪಿ ಯವರೇ “ಸಿ’ ದರ್ಜೆ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡದ ಮತ್ತು ಅಭಿವೃದ್ಧಿಗೆ ಅವಕಾಶ ಮಾಡಿಕೊಡದ ಹಿಂದೂ ವಿರೋಧಿಗಳು. ಅರ್ಚಕರು, ನೌಕರರ ಬಗ್ಗೆ ಗಮನಹರಿಸದ ಇವರು ವಿರೋಧಿಗಳು.

ಹಾಗಿದ್ದರೆ, ಅವರ ಅಪಪ್ರಚಾರಕ್ಕೆ ಪ್ರತ್ಯುತ್ತರ ಏನು?

ಈ ಹಿಂದೆ ನಾನು ಗೃಹ ಸಚಿವನಾಗಿದ್ದಾಗಲೂ ಹೀಗೇ ಅಪಪ್ರಚಾರ ಮಾಡುತ್ತಿದ್ದರು. ಕಾಂಗ್ರೆಸ್‌ ಅವಧಿಯಲ್ಲಿ ಹೆಚ್ಚು ಕೊಲೆಗಳಾದವು ಎಂದು ಟೀಕಿಸಿದರು. ಆಗ “ನಗ್ನಸತ್ಯ’ ಎಂಬ ಕಿರುಹೊತ್ತಿಗೆ ತಂದಿದ್ದೆ. ಆ ಮೂಲಕ ಉತ್ತರ ನೀಡಲಾಗಿತ್ತು. ಈ ಸಲವೂ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಒಂದು ಪುಸ್ತಕವನ್ನೇ ಹೊರತರಲಾಗುವುದು. ಅದನ್ನು ಜನರಿಗೆ ಹಂಚಲಾಗುವುದು.

 ವಿಧಾನಸೌಧದ ಮುಂದೆ ಹುಂಡಿ ಇಟ್ಟುಬಿಡಿ ಅಂತಿದ್ದಾರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು…

ಯಡಿಯೂರಪ್ಪ ಕಾಲದಲ್ಲಿ ಜಿಎಸ್‌ಟಿ ಬದಲಿಗೆ ವಿಎಸ್‌ಟಿ ಇದ್ದದ್ದು ಯಾರದ್ದು? ವಿಧಾನಸೌಧದಲ್ಲೇ ಕುಳಿತು ಲೂಟಿ ಹೊಡೆದುಕೊಂಡು ಹೋಗುತ್ತಿದ್ದರು. ನೋಟು ಎಣಿಸುವ ಮಷಿನ್‌ ಇಟ್ಟುಕೊಂಡವರು, ವಿಧಾನಸೌಧ ಆವರಣದಲ್ಲೇ ಒಂದು ಕೋಟಿ ಸಿಕ್ಕಿದ್ದು ಇವರ ಕಾಲದಲ್ಲೇ. ಹುಂಡಿ ಇಟ್ಟುಕೊಂಡಿದ್ದವರು ಇವರು. ಇಂತಹವರು ನಮಗೆ ಹೇಳುತ್ತಾರೆ.

ನೂರು ರಾಮನ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸುವ ಕಾಂಗ್ರೆಸ್‌ ಸರಕಾರದ ಯೋಜನೆ ಏನಾಯಿತು?

ಅಂತಹದ್ದೊಂದು ಪ್ಲಾನ್‌ ಇದೆ. ಮುಂದೆ ನೋಡೋಣ. ಪ್ರಸ್ತುತ ಅಂಜನಾದ್ರಿಗೆ 100, ಮಂತ್ರಾಲಯ ಬ್ರಿಡ್ಜ್ಗೆ 155, ಶ್ರೀಶೈಲ ಅಭಿವೃದ್ಧಿಗೆ ಸುಮಾರು 80 ಕೋ. ರೂ. ಗಳನ್ನು ನೀಡಲಾಗಿದೆ. ಬಿಜೆಪಿಯವರು ಈ ಹಿಂದೆ ಒಟ್ಟಾರೆ 242 ಕೋ. ರೂ. ಮುಜರಾಯಿಗೆ ಕೊಟ್ಟಿದ್ದರು. ಆದರೆ, “ಸಿ’ ದರ್ಜೆ ದೇವಸ್ಥಾನಗಳಿಗೆ ಒಂದು ರೂ. ಕೊಡಲಿಲ್ಲ.

ಉದಯವಾಣಿ ಸಂದರ್ಶನ 

-ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next