Advertisement
ಬೆಂಗಳೂರು: ಕಾಂಗ್ರೆಸ್ ಜತೆಗಿನ ಮೈತ್ರಿ ಮುಗಿದ ಅಧ್ಯಾಯ. ನನ್ನ ಸರಕಾರದ ಪತನ ಪ್ರಯತ್ನ ಪ್ರಾರಂಭವಾದದ್ದೇ ಬೆಳಗಾವಿಯ ಕಾಂಗ್ರೆಸ್ ಆಂತರಿಕ ಸಮಸ್ಯೆಯಿಂದ. ಆಗ ಯಾರೂ ಬಂಡೆಯಂತೆ ನಿಂತು ರಕ್ಷಿಸಲಿಲ್ಲ. ನಮಗೆ ಯಾರ ಕನಿಕರವೂ ಅಗತ್ಯವಿಲ್ಲ, ನಾವೂ ಯಾರ ಹಂಗಿನಲ್ಲೂ ಇಲ್ಲ.
– ಕಾಂಗ್ರೆಸ್ ಜತೆಗಿನ ಮೈತ್ರಿ ಮುಗಿದ ಅಧ್ಯಾಯ. ಯಾರ ಮನೆ ಬಾಗಿಲಿಗೆ ಹೋಗುವ ಪ್ರಶ್ನೆಯೇ ಇಲ್ಲ. ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾದದ್ದು ಯಾರ ದಯೆಯಿಂದಲೂ ಅಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಮತ್ತೋರ್ವ ಅಭ್ಯರ್ಥಿ ಕಣಕ್ಕಿಳಿಸಲು ಸಂಖ್ಯಾಬಲ ಇರಲಿಲ್ಲ ಎಂಬುದಷ್ಟೇ ಸತ್ಯ. ಹೀಗಾಗಿ ನಾವು ಯಾರ ಮರ್ಜಿಯಲ್ಲೂ ಇಲ್ಲ.
Related Articles
– ರಾಜ್ಯದ ನಾಯಕರ್ಯಾರೂ ನಮ್ಮ ಬಳಿ ಮಾತನಾಡಲಿಲ್ಲ. ನಿಜ ಹೇಳಬೇಕು ಎಂದರೆ ಕಾಂಗ್ರೆಸ್‌ನಲ್ಲಿ 2ನೇ ಅಭ್ಯರ್ಥಿ ಇಳಿಸಬೇಕು ಎಂದೇ ಇಲ್ಲಿ ಪಟ್ಟು ಹಿಡಿಯಲಾಗಿತ್ತು. 2ನೇ ಅಭ್ಯರ್ಥಿ ಕಣಕ್ಕಿಳಿಸಿದರೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಹೀಗಾಗಿ ಸುಮ್ಮನಾದರು.
Advertisement
ಬಿಜೆಪಿಯವರು ನಿಮ್ಮ ಬಳಿ ಮಾತನಾಡಿದ್ದರೇ?– ಬಿಜೆಪಿಯವರು 3ನೇ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ ಎಂದು ಹೇಳಿದ್ದರು. ರಾಜ್ಯಸಭೆಗೆ ದೇವೇಗೌಡರು ಆಯ್ಕೆಯಾಗಲು ಕಾಂಗ್ರೆಸ್ ಅಥವಾ ಬಿಜೆಪಿಯ ಬೆಂಬಲ ನಾವು ಕೇಳಿರಲಿಲ್ಲ. ಯಾಕೆಂದರೆ ದೇವೇಗೌಡರಿಗೆ ರಾಜ್ಯಸಭೆಗೆ ಹೋಗಲು ಇಷ್ಟವಿರಲಿಲ್ಲ. ನಾನು ಪ್ರಧಾನಿ ಸ್ಥಾನ ಬಿಟ್ಟು ಬಂದವನು, ಈ ವಯಸ್ಸಿನಲ್ಲಿ ಹೋಗುವುದಿಲ್ಲ, ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ ಎಂದೇ ಹೇಳಿದ್ದರು. ಆದರೆ ನಾವೇ ಒತ್ತಡ ಹಾಕಿದೆವು. ಕಾಂಗ್ರೆಸ್ ಹೈಕಮಾಂಡ್ ಜತೆ ನೀವೂ ಮಾತನಾಡಿರಲಿಲ್ಲವೇ?
– ದೇವೇಗೌಡರು ಸ್ಪರ್ಧಿಸಬೇಕೆಂದು ಜೆಡಿಎಲ್‌ಪಿ ನಿರ್ಣಯ ಕೈಗೊಂಡದ್ದನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ತಿಳಿಸಿದ್ದೆ ಅಷ್ಟೇ. ಅನಂತರ ಸೋನಿಯಾ, ರಾಹುಲ್ ಗಾಂಧಿ ಸಹಿತ ಹೈಕಮಾಂಡ್ ನಾಯಕರೇ ಗೌಡರನ್ನು ಒಪ್ಪಿಸಿದರು. ಇದರಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಪಾತ್ರವೇನೂ ಇಲ್ಲ. ಅಷ್ಟೇಕೆ, ಮೈತ್ರಿ ಸರಕಾರ ರಚನೆ ಸಂದರ್ಭದಲ್ಲೂ ರಾಜ್ಯ ಕಾಂಗ್ರೆಸ್ ನಾಯಕರೂ ನಮ್ಮ ಬಳಿ ಚರ್ಚೆಗೆ ಬಂದಿರಲಿಲ್ಲ. ನಿಮ್ಮ ಸರಕಾರ ಪತನದ ಕಾರಣವೇನು?
– ಅದೆಲ್ಲ ಗೊತ್ತಿರುವ ವಿಚಾರವೇ. ನನ್ನ ಸರಕಾರ ಪತನದ ಪ್ರಯತ್ನ ಆರಂಭವಾದದ್ದೇ ಬೆಳಗಾವಿಯಲ್ಲಿ ಕಾಂಗ್ರೆಸ್‌ನ ಆಂತರಿಕ ಸಮಸ್ಯೆಯಿಂದ. ಆಗ ಯಾರೂ ಬಂಡೆಯಂತೆ ನಿಂತು ಸರಕಾರ ಉಳಿಸಲು ಮುಂದಾಗಲಿಲ್ಲ. ಕಾಂಗ್ರೆಸ್‌ನ ಬಹುತೇಕ ನಾಯಕರಿಗೆ ನಾನು ಸಿಎಂ ಆಗಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಯಡಿಯೂರಪ್ಪ ಸಿಎಂ ಆದರೆ ವಿಪಕ್ಷ ಸ್ಥಾನ ಸಿಗುತ್ತದೆ, ವರ್ಷದಲ್ಲಿ ಮತ್ತೆ ಚುನಾವಣೆ ಬರುತ್ತದೆ ಎಂದೆಲ್ಲ ಕನಸು ಕಂಡಿದ್ದರು. ಸರಕಾರ ಪತನದ ಬಳಿಕ ಮೌನವಾಗಿದ್ದೀರಲ್ಲ?
– ಮೌನವಾಗಿಲ್ಲ, ಎಲ್ಲವನ್ನೂ ಗಮನಿಸುತ್ತಿದ್ದೇನೆ. ಕೋವಿಡ್ 19 ಸಂದರ್ಭದಲ್ಲಿ ನನಗೆ ರಾಜಕೀಯ ಬೇಕಿಲ್ಲ, ಜನರ ಹಿತ ಮುಖ್ಯ. ಮೈತ್ರಿ ಸರಕಾರದಲ್ಲಿ ನಾನು ಸಿಎಂ ಆಗಿದ್ದಾಗ ಅನುಭವಿಸಿದ ನೋವು ನನಗೇ ಗೊತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನ ಪಡೆಯಲು ಸಿದ್ದರಾಮಯ್ಯ ಅವರೇ ಕಾರಣ. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಅಲ್ಪಸಂಖ್ಯಾಕರನ್ನು ನಮ್ಮಿಂದ ದೂರ ಮಾಡಿದರು. ಇಲ್ಲದಿದ್ದರೆ ಬಿಜೆಪಿ 80 ದಾಟುತ್ತಿರಲಿಲ್ಲ. ಪಕ್ಷ ಸಂಘಟನೆಗಾಗಿ ದೇವೇಗೌಡರು ಕಾರ್ಯ ಕರ್ತರು, ಮುಖಂಡರಿಗೆ ಪತ್ರ ಬರೆದಿದ್ದಾರಲ್ಲವೇ?
– ರಾಷ್ಟ್ರೀಯ ಅಧ್ಯಕ್ಷರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಚಟುವಟಿಕೆಗಳಲ್ಲಿ ತೊಡಗಿಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ಹೋರಾಟಕ್ಕೆ ಸೂಚಿಸಿದ್ದಾರೆ. ಮೈತ್ರಿ ಸರಕಾರದಲ್ಲಿ ನಮ್ಮಿಂದ ತಪ್ಪಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರಲ್ಲ?
– ಸಿಎಂ ಆಗಿದ್ದಾಗ ನನ್ನಿಂದ ಕಾರ್ಯಕರ್ತರು, ಮುಖಂಡರ ಸ್ಥೈರ್ಯ ಕುಗ್ಗಿಸುವ ಕೆಲಸ ಆಗಲಿಲ್ಲ. ಅಧಿಕಾರ ನೀಡುವ ವಿಚಾರದಲ್ಲಿ ನಾನೇ ಪಕ್ಷದ ಕಚೇರಿಯಲ್ಲಿ ಕಣ್ಣೀರು ಹಾಕಿದ್ದೆ, ಆಗಿನ ಪರಿಸ್ಥಿತಿ ನನಗೇ ಗೊತ್ತು. ಶಾಸಕರು, ಸಚಿವರಾಗಿದ್ದವರು ಸ್ಥಳೀಯವಾಗಿ ಕಾರ್ಯಕರ್ತರು ಮತ್ತು ಮುಖಂಡರ ಕಷ್ಟ ಸುಃಖ ಕೇಳಬೇಕಿತ್ತು. ಸರಕಾರದ ಕೋವಿಡ್ 19 ನಿರ್ವಹಣೆ ಹೇಗಿದೆ?
– ನನಗಂತೂ ತುಂಬಾ ನಿರಾಸೆಯಾಗಿದೆ. ಎಪ್ರಿಲ್ ಮೊದಲ ವಾರದಲ್ಲೇ ನಾನು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ, ವೈದ್ಯರು ಮತ್ತು ಇತರ ಸೌಲಭ್ಯಗಳ ಕುರಿತು ಸಲಹೆ ನೀಡಿದ್ದೆ. ಆದರೆ ನಿರ್ಲಕ್ಷಿಸಿದರು. ಈಗ ಅದರ ಪರಿಣಾಮ ಎದುರಿಸುತ್ತಿದ್ದಾರೆ. ಕೋವಿಡ್ 19 ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ಆರೋಪ ಇದೆಯಲ್ಲ?
– ನಾನು ಈ ಸಂದರ್ಭದಲ್ಲಿ ಟೀಕೆ ಮಾಡಲು ಹೋಗುವುದಿಲ್ಲ. ದಾಖಲೆ ಇದ್ದರೆ ಮುಂದಿಟ್ಟು ಮಾತನಾಡುವವನು ನಾನು. ಕೋವಿಡ್ 19 ಸೋಂಕಿನಿಂದ ಜನರ ಜೀವರಕ್ಷಣೆ ನಮ್ಮೆಲ್ಲರ ಗುರಿಯಾಗಬೇಕು. ಬಿಎಸ್‌ವೈ ಮುಂದುವರಿಯಲಿ
ರಾಜ್ಯದಲ್ಲಿ ಬಿಜೆಪಿ ಸರಕಾರವೇ ಮುಂದುವರಿಯಲಿ, ಯಡಿಯೂರಪ್ಪ ಅವರೇ ಮುಂದಿನ 3 ವರ್ಷ ಮುಖ್ಯಮಂತ್ರಿಯಾಗಿರಲಿ. ಆದರೆ ಜನರ ಹಿತಕ್ಕಾಗಿ ಕೆಲಸ ಮಾಡಲಿ, ನನಗೆ ರಾಜ್ಯದ ಜನತೆಯ ಹಿತ ಮುಖ್ಯ. ನಾನಂತೂ ಸರಕಾರ ಉರುಳಿಸುವ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಜೆಡಿಎಸ್-ಕಾಂಗ್ರೆಸ್ ಸರಕಾರ ರಚನೆ ಸಂದರ್ಭ ರಾಜ್ಯ ಕಾಂಗ್ರೆಸ್ ನಾಯಕರು ನಮ್ಮ ಜತೆ ಮಾತನಾಡಿರಲಿಲ್ಲ, ರಾಜ್ಯಸಭೆ ಚುನಾವಣೆ ಸಮಯದಲ್ಲೂ ಮಾತನಾಡಲಿಲ್ಲ. ನಮ್ಮ ಸಮುದಾಯದ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು ಕೆಲವರು ದೇವೇಗೌಡರಿಗೆ ದೊಡ್ಡ ಉಪಕಾರ ಮಾಡಿದವರಂತೆ ಬಿಂಬಿಸಿ ಕೊಳ್ಳುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಜೆಡಿಎಸ್‌ನ ಶಕ್ತಿ ಕುಂದಿಸುವ ಎರಡನೇ ಹಂತದ ಪ್ರಯತ್ನ.