Advertisement

Udayavani Special Inerview: ಟಾಕ್‌, ಟಚ್‌, ಟ್ರೀಟ್‌ ಮುಂದುವರೀಲಿ: ಡಾ| ಮಂಜುನಾಥ್‌

08:48 AM Feb 01, 2024 | Team Udayavani |

ಬೆಂಗಳೂರು: “ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಪರಿಷ್ಕರಿಸಬೇಕು’ ಎಂದು ಸರ್ಕಾರಕ್ಕೆ ಸಲಹೆ ನೀಡಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ಗಮಿತ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌, “ಆಸ್ಪತ್ರೆಯಲ್ಲಿ ಅಳವಡಿಸಿಕೊಂಡಿರುವ ಟ್ರೀಟ್ಮೆಂಟ್‌ ಫ‌ಸ್ಟ್‌, ಪೇಮೆಂಟ್‌ ನೆಕ್ಸ್ಟ್ ಎನ್ನುವ ಧ್ಯೇಯ ಎಂದಿಗೂ ಬದಲಾಗಬಾರದು’ ಎಂದಿದ್ದಾರೆ.

Advertisement

ಕಳೆದ 16 ವರ್ಷಗಳಿಂದ ಸಂಸ್ಥೆಯ ನಿರ್ದೇಶಕರಾಗಿ ಬುಧವಾರ ನಿವೃತ್ತಿ ಹೊಂದಿದ ಅವರು, “ಉದಯವಾಣಿ’ ಪತ್ರಿಕೆಗೆ ಸಂದರ್ಶನ ನೀಡಿದ್ದು, ತಮ್ಮ ಮನದಾಳವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

 ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿ ನಿಮಗಿಂದು ಕೊನೆಯ ದಿನ, ಏನನ್ನಿಸುತ್ತಿದೆ?

ನನಗೆ ಈ ಸಂಸ್ಥೆಯೊಂದಿಗಿನ ಸಂಬಂಧ ಇಂದು ನಿನ್ನೆಯದಲ್ಲ. 1988ರಿಂದಲೂ ಒಂದಿಲ್ಲೊಂದು ರೀತಿಯ ಒಡನಾಟ ಇದ್ದೇ ಇತ್ತು. ಸಹ ಪ್ರಾಧ್ಯಾಪಕನಾಗಿ ಜಯದೇವ ಸಂಸ್ಥೆ ಸೇರಿದ ನಾನು ನಿರ್ದೇಶಕನಾಗಿ ನಿವೃತ್ತನಾಗಿದ್ದೇನೆ. ನಿರ್ದೇಶಕ (ಡೈರೆಕ್ಟರ್‌) ಎನ್ನುವುದಕ್ಕಿಂತಲೂ ವೈದ್ಯನಾಗಿ, ತಣ್ತೀಬೋಧಕನಾಗಿ ನಾನು ಮಾಡಿದ ಕೆಲಸ ತೃಪ್ತಿ ಕೊಟ್ಟಿದೆ. 2006-07 ರಲ್ಲಿ ನಿರ್ದೇಶಕನಾದ ನಾನು, ಇದುವರೆಗೆ ಶಸ್ತ್ರಚಿಕಿತ್ಸಾ ಕೊಠಡಿ (ಆಪರೇಷನ್‌ ಥಿಯೇಟರ್‌)ಗೆ ಕೊಟ್ಟಷ್ಟೇ ಮಹತ್ವವನ್ನು ಶೌಚಾಲಯ(ಟಾಯ್ಲೆಟ್‌)ದ ಶುಚಿತ್ವಕ್ಕೂ ಕೊಟ್ಟಿದ್ದೇನೆ. ಜನ ಮತ್ತು ರೋಗಿಗಗಳ ನಡುವೆ ಓಡಾಡಿದರಷ್ಟೇ ಎಲ್ಲವನ್ನೂ ಅರಿಯಲು ಸಾಧ್ಯ. ಆಸ್ಪತ್ರೆಯ ಆಡಳಿತ ವ್ಯವಸ್ಥೆ ಯಿಂದ ಹಿಡಿದು ವೈದ್ಯಕೀಯ ವ್ಯವಸ್ಥೆವರೆಗೆ ಎಲ್ಲವೂ ಸುಧಾರಿಸಿದೆ.

ನೀವು ನಿರ್ದೇಶಕರಾದಾಗ ಆಸ್ಪತ್ರೆ ಹೇಗಿತ್ತು? ಈಗ ಹೇಗಾಗಿದೆ?

Advertisement

ನಾನು ಅಧಿಕಾರ ವಹಿಸಿಕೊಂಡಾಗ ಆಸ್ಪತ್ರೆಯಲ್ಲಿ ಪ್ರಮುಖವಾಗಿ ಆರ್ಥಿಕ ಮುಗ್ಗಟ್ಟಿತ್ತು. ಒಂದು ದಿನದ ವೇತನ ಬಿಟ್ಟುಕೊಡುವಂತೆ ಸಿಬ್ಬಂದಿಯ ಮನವೊಲಿಸಿದೆ. ನಂತರದಲ್ಲಿ ತಾನಾಗಿಯೇ ದೇಣಿಗೆ ಹರಿದು ಬರಲಾರಂಭಿಸಿತು. ಮೊಟ್ಟ ಮೊದಲಿಗೆ ಶ್ರೀ ಜಯದೇವ ಹೃದ್ರೋಗ ಸಂಸ್ಥೆ ಎನ್ನುವ ನಾಮಫ‌ಲಕವೇ ಹೆದರಿಕೆ ಹುಟ್ಟಿಸುವಂತಿತ್ತು. ಕೆನರಾ ಬ್ಯಾಂಕ್‌ನವರಿಗೆ ಮನವಿ ಮಾಡಿ, ಅದನ್ನು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಎಂದು ಬದಲಿಸಿದೆ. ಆರಂಭದಲ್ಲಿ 300 ಹಾಸಿಗೆ ಸಾಮರ್ಥ್ಯವಿದ್ದ ಆಸ್ಪತ್ರೆ ಇಂದು ಸುಮಾರು 2,000 ಹಾಸಿಗೆ ಸಾಮರ್ಥ್ಯ ಹೊಂದಿದೆ. ಫಾರ್ಮಸಿ ಇರಲಿಲ್ಲ. ಅದನ್ನು ಮಾಡಿದೆವು. ಹೊರರೋಗಿಗಳ ವಿಭಾಗ (ಒಪಿಡಿ) ಸಾಲುತ್ತಿರಲಿಲ್ಲ, ನವೀಕರಿಸಿದೆವು. ಹೆಲ್ಪ್ ಡೆಸ್ಕ್ ಶುರು ಮಾಡಿದೆವು. ಶಸ್ತ್ರ ಚಿಕಿತ್ಸಾ ಕೊಠಡಿ 6 ಇದ್ದದ್ದು ಈಗ 11 ಆಗಿದೆ. 120 ಹೃದ್ರೋಗ ತಜ್ಞರು, 42 ಅನೆಸ್ತೆಟಿಕ್‌ ತಜ್ಞರು ಇದ್ದಾರೆ. ವರ್ಷಕ್ಕೆ ಕನಿಷ್ಠ 300-350 ತಜ್ಞ ವೈದ್ಯರನ್ನು ತರಬೇತುಗೊಳಿಸುತ್ತೇವೆ.

 ಇಷ್ಟೆಲ್ಲಾ ಬದಲಾವಣೆ ಹೇಗೆ ಸಾಧ್ಯ ಆಯಿತು?

ಏನು ಪ್ರೇರಣೆ? ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಾಮಾನ್ಯ ಜ್ಞಾನ ಬಳಸುವುದು ಮುಖ್ಯ. ಎಲ್ಲ ರೋಗಕ್ಕೂ ಔಷಧಿ, ಚಿಕಿತ್ಸೆಯೇ ಬೇಕೆಂದೇನೂ ಇರುವುದಿಲ್ಲ. ಸೇವಾ ಮನೋಭಾವ, ಪ್ರೀತಿ, ಕಾಳಜಿಯ ಮಾತುಗಳೂ ಚಿಕಿತ್ಸಕ ಗುಣ ಹೊಂದಿರುತ್ತವೆ. ಅದನ್ನು ಮೊದಲು ಪ್ರಯೋಗಿಸಬೇಕು. ಸಿಬ್ಬಂದಿಗೆ ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ, ಅವರ ಕುಟುಂಬಕ್ಕೆ ಆರೋಗ್ಯ ವಿಮೆ ಇದೆ. ಜತೆಗೆ ಕೆಲಸ ಮಾಡಲು ಉತ್ತಮ ವಾತಾವರಣ ನಿರ್ಮಿಸಿಕೊಟ್ಟಿದ್ದೇವೆ. ಇದಕ್ಕೆ ಧರಂಸಿಂಗ್‌ ಅವರಿಂದ ಹಿಡಿದು ಈಗಿನ ಸಿಎಂ ಸಿದ್ದರಾಮಯ್ಯ ಅವರವರೆಗೆ ಎಲ್ಲರೂ ಸಹಕರಿಸಿದ್ದಾರೆ. ಇದರೊಂದಿಗೆ ಇನ್ಫೋಸಿಸ್‌ನ ನಾರಾಯಣಮೂರ್ತಿ, ಸುಧಾಮೂರ್ತಿ, ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ, ಅದಿಪರಾಶಕ್ತಿ ಟ್ರಸ್ಟ್‌, ರೋಟರಿ, ಲಯನ್ಸ್‌ ಕ್ಲಬ್‌ ನಂತಹ ಅನೇಕ ದಾನಿಗಳು ಇದಕ್ಕೆಲ್ಲಾ ಪ್ರೇರಣೆಯಾಗಿದ್ದಾರೆ.

ಇಷ್ಟು ದಿನ ನಿಮ್ಮೊಂದಿಗಿದ್ದ ತಜ್ಞರು, ವೈದ್ಯರು, ಸಿಬ್ಬಂದಿಗೆ ಏನು ಹೇಳುತ್ತೀರಿ?

ವಿಶ್ವ ದರ್ಜೆಯ ತಜ್ಞರು, ವೈದ್ಯರು, ಸಿಬ್ಬಂದಿ ನಮ್ಮಲ್ಲಿ ಇದ್ದಾರೆ. ಅವರನ್ನು ಮುಂದೆಯೂ ಚೆನ್ನಾಗಿ ಬಳಸಿಕೊಳ್ಳುವ ಕೆಲಸ ಆಗಬೇಕು. ಲಂಚ ಕೊಟ್ಟರೂ ಬೇಡ ಎನ್ನುವ ಸಿಬ್ಬಂದಿ ಇದ್ದಾರೆ ಎಂಬುದನ್ನು ಅನೇಕರು ಬಂದು ನನಗೆ ಹೇಳಿದ್ದಾರೆ. ಸಿಬ್ಬಂದಿ ಬಗ್ಗೆ ಹೆಮ್ಮೆ ಇದೆ. ಟ್ರೀಟೆ¾ಂಟ್‌ ಫ‌ಸ್ಟ್‌, ಪೇಮೆಂಟ್‌ ನೆಕ್ಸ್ಟ್ ಎನ್ನುವ ಧ್ಯೇಯದಲ್ಲಿ ಬದಲಾವಣೆ ಆಗಬಾರದು. ಅದು ಹಾಗೆಯೇ ಮುಂದುವರಿಯಬೇಕು. ಟಾಕ್‌, ಟಚ್‌, ಟ್ರೀಟ್ಮೆಂಟ್‌ ಎನ್ನುವ ಮೂರು ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಬೇಕು.

ಇನ್ನೂ ಸುಧಾರಣೆ ಆಗಬೇಕಿರುವುದೇನು? ಸರ್ಕಾರಕ್ಕೇನಾದರೂ ಸಲಹೆ ಕೊಡುವಿರಾ?

ಬೆಂಗಳೂರಿನ ನಾಲ್ಕು ದಿಕ್ಕಿನಲ್ಲೂ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು. ಆಯುಷ್ಮಾನ್‌ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸಾಕಷ್ಟು ಪರಿಷ್ಕರಣೆ ಆಗಬೇಕಿದೆ. ಆಯುಷ್ಮಾನ್‌ ಭಾರತ್‌ ಕಾರ್ಡ್‌ ಇರುವ ಕುಟುಂಬ ಸದಸ್ಯರು ಗರಿಷ್ಟ 5 ಲಕ್ಷ ರೂ.ವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ಆದರೆ, ಎಷ್ಟೋ ಜನರಿಗೆ ಈ ವಿಷಯವೇ ಗೊತ್ತಿಲ್ಲ. ಕುಟುಂಬದ ಪ್ರತಿ ಸದಸ್ಯರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ದೊರೆಯುತ್ತದೆ ಎಂದುಕೊಂಡು ಗಲಾಟೆಗಳಾಗುತ್ತಿವೆ. ಈ ಬಗ್ಗೆ ಸರ್ಕಾರ ಸ್ಪಷ್ಟತೆ ಕೊಡಬೇಕು. ಆಯುಷ್ಮಾನ್‌ ಭಾರತ್‌ ಅಡಿ ಇನ್ನಷ್ಟು ವೈದ್ಯಕೀಯ ಸೇವೆಗಳನ್ನು ಸೇರ್ಪಡೆಗೊಳಿಸಬೇಕು. ಅವುಗಳನ್ನು ಕೋಡಿಂಗ್‌ ಮಾಡಿಕೊಡಬೇಕು. ಇದರಿಂದ ಬಿಪಿಎಲ್‌ ಕುಟುಂಬಗಳಿಗೆ ಸಾಕಷ್ಟು ಸಹಾಯ ಆಗಲಿದೆ.

ನೀವು ಮಾಡದೆ ಉಳಿದ ಕೆಲಸಗಳೇನು?

ಮುಂದಿನ ನಿರ್ದೇಶಕರಿಗೆ ಏನು ಹೇಳಲು ಬಯಸುತ್ತೀರಿ? ಇಲ್ಲಿನ ಆಸ್ಪತ್ರೆಯಲ್ಲಿ ಶೇ.500 ರಷ್ಟು ವೈದ್ಯಕೀಯ ಸವಲತ್ತುಗಳಿವೆ. ಇರುವ ವ್ಯವಸ್ಥೆ ಯನ್ನು ಸುಸ್ಥಿರವಾಗಿ ಮುನ್ನಡೆಸಿಕೊಂಡು ಹೋಗಬೇಕಷ್ಟೇ. ಬರಾಕ್‌ ಒಬಾಮಾ ಹೆಲ್ತ್‌ ಕೇರ್‌ನಲ್ಲೂ ನಮ್ಮಲ್ಲಿನ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ದೆಹಲಿಯ ಏಮ್ಸ್‌ನಲ್ಲಿ ಸಹ ಜಯದೇವ (ಡಾ.ಮಂಜುನಾಥ್‌) ಮಾದರಿ ಅಳವಡಿಸಿಕೊಳ್ಳಬೇಕೆಂದು ಅಖೀಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿಫಾರಸು ಮಾಡಿದೆ. ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ರೋಗಿಗಳನ್ನು ಥರ್ಡ್‌ ಪಾರ್ಟಿ ಏಜೆನ್ಸಿ ಭೇಟಿ ಮಾಡಿ ಸಮೀಕ್ಷೆಗಳನ್ನು ಮಾಡಿದೆ. ಅಲ್ಲಿಂದ ಬಂದಂತಹ ಪ್ರತ್ಯುತ್ತರಗಳ ವರದಿಯನ್ನು ಆಧರಿಸಿ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ.

ಉದಯವಾಣಿ ಸಮಾಚಾರ

ಶೇಷಾದ್ರಿ ಸಾಮಗ

Advertisement

Udayavani is now on Telegram. Click here to join our channel and stay updated with the latest news.

Next