ಶಿವಮೊಗ್ಗ: ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ ಸಮಸ್ಯೆ ಪರಿಹರಿಸಲು, ವಿವಿಧ ಸೌಲಭ್ಯಕ್ಕಾಗಿ ಸಲ್ಲಿಸಿದಅರ್ಜಿಗಳನ್ನು ತ್ವರಿತವಾಗಿವಿಲೇವಾರಿ ಮಾಡಲು ಜಿಲ್ಲಾದ್ಯಂತ ಕಾರ್ಮಿಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಮುಸ್ತಫಾ ಹುಸೇನ್ ಎಸ್.ಎ. ಹೇಳಿದರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಮಿಕ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾರ್ಮಿಕ ಅದಾಲತ್‌ನಿಂದ ಅನೇಕ ಪ್ರಯೋಜನ ಆಗಲಿದೆ. ಕೋವಿಡ್ ಪರಿಹಾರಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸಹಕಾರಿಯಾಗಲಿದೆ. ಕಾರ್ಮಿಕರು ಈ ಅದಾಲತ್‌ನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್ ಮಾತನಾಡಿ, ಕಾರ್ಮಿಕ ಇಲಾಖೆ ಮತ್ತು ಕಟ್ಟಡ ಹಾಗೂ ಇತರ ನಿರ್ಮಾಣಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದಕಾರ್ಮಿಕರಿಗೆ ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ ಸೌಲಭ್ಯ, ಕಾರ್ಮಿಕ ಗೃಹ ಭಾಗ್ಯದಡಿಯಲ್ಲಿ ವಸತಿ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ ಸೇರಿದಂತೆ, ಫಲಾನುಭವಿಗಳ ವಿದ್ಯಾಭ್ಯಾಸಕಾಗಿ ಸಹಾಯಧನ, ಮದುವೆ ಸಹಾಯಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ಒದಗಿಸುವ ಮೂಲಕ ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಸೆ.16ರವರೆಗೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಕಾರ್ಮಿಕ ಅದಾಲತ್ ನಡೆಯಲಿದ್ದು, ಕಾರ್ಮಿಕರು ಸೂಕ್ತ ದಾಖಲೆಗಳೊಂದಿಗೆ ಮತ್ತು ಸ್ವೀಕೃತಿ ಪತ್ರದೊಂದಿಗೆ ಮತ್ತು ತಮ್ಮ ಹೊಸ ಬ್ಯಾಂಕ್ ಖಾತೆ ವಿವರಗಳೊಂದಿಗೆ ಹತ್ತಿರದ ಕಾರ್ಮಿಕ ಇಲಾಖೆಯ ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಗಳಿಗ ಅಥವಾ ಜಿಲ್ಲಾ ಕಾರ್ಮಿಕರ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಇದರ ಸದುಪಯೋಗ ಪಡೆಯಬೇಕು ಎಂದರು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾ ಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಸಿಬ್ಬಂದಿ, ಸದಸ್ಯರು, ಕಾರ್ಮಿಕರು ಉಪಸ್ಥಿತರಿದ್ದರು.