Advertisement

“ಉದಯವಾಣಿ’ ವರದಿಗೆ ಸಹೃದಯಿಗಳ ವ್ಯಾಪಕ ಸ್ಪಂದನೆ ; ಧನ್ಯಾ ಕಲಿಕೆಗೆ ದಾನಿಗಳ ನೆರವು

11:54 PM May 14, 2024 | Team Udayavani |

ಕುಂದಾಪುರ: ಹಕ್ಲಾಡಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಧನ್ಯಾ ಅವರ ಉನ್ನತ ಶಿಕ್ಷಣಕ್ಕೆ ಹಲವೆಡೆಗಳಿಂದ ಸಹೃದಯಿ ದಾನಿಗಳು ಸಹಾಯಹಸ್ತ ಚಾಚಲು ಮುಂದೆ ಬಂದಿದ್ದಾರೆ.

Advertisement

“ಉದಯವಾಣಿ’ಯ ಮೇ 12ರಂದು “ಕಲಿಕಾ ಯಶೋಗಾಥೆ’ ಅಂಕಣದಲ್ಲಿ “ಬಡತನದಲ್ಲೇ ಅರಳಿದ ಬಹುಮುಖ ಪ್ರತಿಭೆ, ಕಷ್ಟ- ಕಾರ್ಪಣ್ಯಗಳ ನಡುವೆ ಧನ್ಯಾ ಸಾಧನೆ’ ಎನ್ನುವ ವರದಿ ಪ್ರಕಟಿಸಿ, ಆಕೆಯ ಉನ್ನತ ಕಲಿಕೆಯ ಕನಸು, ಅದಕ್ಕಿರುವ ಅಡ್ಡಿಗಳ ಕುರಿತಂತೆ ಬೆಳಕು ಚೆಲ್ಲಿತ್ತು.

ಜನಸೇವಾ ಅಸೋಸಿಯೇಶನ್‌ ನೆರವು
ನಾಗರಾಜ ಉಪ್ಪಂಗಳ ಅಧ್ಯಕ್ಷತೆಯ ಬೆಂಗಳೂರಿನ ಜನಸೇವಾ ಚಾರಿಟೆಬಲ್‌ ಅಸೋಸಿಯೇಶನ್‌ ಮೂಲಕ ಅದರ ಸದಸ್ಯಹಾಗೂ ಐ ವ್ಯಾಲ್ಯೂ ಇನ್ಫೋ ಸೋಲ್ಯೂಶನ್‌ ಸಂಸ್ಥೆಯ ಮಾಲಕ ಕೃಷ್ಣರಾಜ ಶರ್ಮಾ ಅವರು ಸಿಎಸ್‌ ಆರ್‌ಅನುದಾನದಡಿ ಆಕೆಯ ಮುಂದಿನ 2 ವರ್ಷದ ವಿದ್ಯಾಭ್ಯಾಸದ ಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಮೊದಲ ಕಂತಿನ ರೂಪದಲ್ಲಿ 33,800 ರೂ.ಗಳನ್ನು ಆಕೆ ಸೇರಲಿಚ್ಛಿಸಿದ ಹೆಮ್ಮಾಡಿಯ ಜನತಾ ಪ.ಪೂ. ಕಾಲೇಜಿಗೆ ಬ್ಯಾಂಕ್‌ ಖಾತೆಗೆ ಮಂಗಳವಾರ ಹಸ್ತಾಂತರ ಮಾಡಲಾಯಿತು.

ಈ ವರದಿಗೆ ಇನ್ನಷ್ಟು ಮಂದಿ ಸ್ಪಂದಿಸಿದ್ದು, ನೆರವು ನೀಡುವುದಾಗಿ ಹೇಳಿದ್ದಾರೆ. ಆದರೆ ಆಕೆ ತನಗೆ ಈಗಾಗಲೇ ಒಂದು ಸಂಸ್ಥೆ ನೆರವು ನೀಡುವುದಾಗಿ ಹೇಳಿದ್ದು, ನೀವು ಬೇರೆ ಯಾರಾದರೂ ಬಡ ವಿದ್ಯಾರ್ಥಿಗಳಿಗೆ ನನಗೆ ಕೊಡಲಿಚ್ಛಿಸುವ ನೆರವನ್ನು ನೀಡಿ ಎಂದು ಹೇಳುವ ಮೂಲಕ ಧನ್ಯಾ ಪ್ರಾಮಾಣಿಕತೆ ಮೆರೆದಿದ್ದಾರೆ.

ಗ್ರಾಮೀಣ ಭಾಗದ ಬಡ ಕುಟುಂಬದಲ್ಲಿ ಜನಿಸಿರುವ ಈಕೆ ಪ್ರತೀ ದಿನ 4 ಕಿ.ಮೀ. ನಡೆದುಕೊಂಡು ಹೋಗಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನೇಕ ಕಷ್ಟ- ಕಾರ್ಪಣ್ಯಗಳು ಇದ್ದರೂ ಸಹ 594 ಅಂಕಗಳನ್ನು ತೆಗೆದು ಸಾಧನೆ ಮಾಡಿದ್ದಳು.

Advertisement

ನಿಮ್ಮಿಂದ ತುಂಬಾ ಸಹಾಯವಾಯಿತು. ಉದಯವಾಣಿಗೆ ತುಂಬಾ ಥ್ಯಾಂಕ್ಸ್‌. ಜನಸೇವಾ ಚಾರಿಟೆಬಲ್‌ ಅಸೋಸಿಯೇಶನ್‌ ಕಲಿಕೆಗೆ ನೆರವು ನೀಡಲಿದ್ದು, ಬ್ಯಾಂಕ್‌ ಖಾತೆಗೂ ಹಣ ಜಮೆಯಾಗಿದೆ. ಇದಲ್ಲದೆ ಅನೇಕ ಮಂದಿ ಕರೆ ಮಾಡಿ, ನೆರವು ನೀಡುವುದಾಗಿ ಹೇಳಿದ್ದಾರೆ.
– ಧನ್ಯಾ ಬಗ್ವಾಡಿ, ವಿದ್ಯಾರ್ಥಿನಿ

ಧನ್ಯಾ ಬಹುಮುಖ ಪ್ರತಿಭೆ. ಉನ್ನತ ವ್ಯಾಸಂಗ ಮಾಡಬೇಕು ಅನ್ನುವುದು ಆಕೆಯ ಕನಸು. ಉದಯವಾಣಿಯು ಆಕೆಯ ಬಗ್ಗೆ ವರದಿ ಪ್ರಕಟಿಸಿ ದಾನಿಗಳಿಂದ ನೆರವು ಸಿಗುವಂತೆ ಮಾಡಿರುವುದು ಮಾದರಿ ಕಾರ್ಯ.
– ಕಿಶೋರ್‌ ಕುಮಾರ್‌ ಶೆಟ್ಟಿ,
ಹಕ್ಲಾಡಿ ಸರಕಾರಿ ಪ್ರೌಢಶಾಲೆಯ ಶಿಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next