Advertisement

ಉದಯವಾಣಿ ಫೋನ್‌ ಇನ್ –ಮೇ 3ರ ಬಳಿಕ ಸಾರ್ವಜನಿಕ ಸಾರಿಗೆ ಅನಿಶ್ಚಿತ: ಉಡುಪಿ ಡಿಸಿ ಜಗದೀಶ್

01:52 AM Apr 22, 2020 | Hari Prasad |

ದಕ್ಷಿಣ ಕನ್ನಡ ಮತ್ತು ಉಡುಪಿಯ ಜನತೆಯೂ ಲಾಕ್‌ಡೌನ್‌ ನಿಯಮ ಪಾಲಿಸುತ್ತಿದ್ದಾರೆ. ಇಂದು, ಎಪ್ರಿಲ್‌ 21ರಂದು ಕೊನೆಗೊಳ್ಳಬೇಕಿದ್ದ ನಿರ್ಬಂಧ ಮೇ 3ರ ವರೆಗೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಇರಬಹುದಾದ ಸಂಶಯ ಮತ್ತು ಸಮಸ್ಯೆಗಳ ಕುರಿತು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದಲೇ ವಿವರಣೆ ಪಡೆಯಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಯಿತು. ಈ ಸಂಬಂಧ ಏರ್ಪಡಿಸಲಾಗಿದ್ದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಎರಡೂ ಜಿಲ್ಲೆಗಳಿಂದ ಬಂದ ಹಲವಾರು ಪ್ರಶ್ನೆಗಳಿಗೆ ಅನುಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಿಂಧೂ ಬಿ. ರೂಪೇಶ್‌ ಮತ್ತು ಉಡುಪಿಯ ಜಿ. ಜಗದೀಶ್‌ ಉತ್ತರಿಸಿದರು.

Advertisement

ಉಡುಪಿ: ಕೋವಿಡ್ 19 ವೈರಸ್ ತೀವ್ರತೆ ಇನ್ನೂ ತಗ್ಗದ ಕಾರಣ ಮೇ 3ರ ಬಳಿಕವೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಆರಂಭ ಕಷ್ಟ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ‘ಉದಯವಾಣಿ’ ಮಣಿಪಾಲ ಕೇಂದ್ರ ಕಚೇರಿಯಲ್ಲಿ ಜಿಲ್ಲೆಯ ನಾಗರಿಕರ ಕರೆಗಳಿಗೆ ಉತ್ತರ ನೀಡುವಾಗ ವಿವರಿಸಿ, ಬಸ್‌, ರೈಲು, ವಿಮಾನಯಾನ ಕೂಡಲೇ ಆರಂಭವಾಗದು. ಬಸ್‌ಗಳಲ್ಲಿ ಪ್ರತಿ ಆಸನದಲ್ಲಿ ಒಬ್ಬೊಬ್ಬರನ್ನು ಕುಳ್ಳಿರಿಸಿದರೂ ಸಾಮಾಜಿಕ ಅಂತರ ಕಾಪಾಡಲಾಗದು ಎಂದರು.

ಆಯಾ ಜಿಲ್ಲೆಯೊಳಗೆ ಕಾರ್ಮಿಕರು ಕೆಲಸ ಮಾಡಲು ಸರಕಾರ ಅನುಮತಿಸಬಹುದು. ನಗರಗಳಿಗಿಂತ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ವಿನಾಯಿತಿ ಸಿಗಬಹುದು. ನಗರಗಳಲ್ಲಿ ಎಲ್ಲ ಒಮ್ಮೆಲೆ ಆರಂಭಿಸಲಾಗದು ಎಂದರು.

ಕೃಷಿ ಚಟುವಟಿಕೆಗೆ ನಿರ್ಬಂಧವಿಲ್ಲ
ಕೃಷಿ ಸಂಬಂಧಿತ ಕೆಲಸಗಳಿಗೆ ಯಾವುದೇ ನಿರ್ಬಂಧ ವಿಲ್ಲ ಮತ್ತು ಇದಕ್ಕೆ ಸಂಬಂಧಿಸಿ ಅಂತರ್ಜಿಲ್ಲಾ ಸಂಚಾರ ನಿರ್ಬಂಧವಿಲ್ಲ ಎಂದು ತಿಳಿಸಿದರು.

Advertisement

ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ಕುರಿತ ಪ್ರಶ್ನೆಗೆ ಉತ್ತರಿಸಿ, ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ನಡೆಯಲೇಬೇಕಲ್ಲ? ಯಾವಾಗ, ಹೇಗೆ ಎಂದು ಹೇಳುವುದು ಕಷ್ಟ ಎಂದರು.

ಎಲೆಕ್ಟ್ರಾನಿಕ್ಸ್‌ ಮಳಿಗೆ – ಸೇವಾ ವಿಭಾಗ ಎಲೆಕ್ಟ್ರಾನಿಕ್ಸ್‌ ಮಳಿಗೆಗಳು ಮತ್ತು ಸೇವಾ ವಿಭಾಗಗಳ ಸೇವೆಯನ್ನು ಬೆಳಗಿನ ಸೀಮಿತ ಅವಧಿಯಲ್ಲೇ ಕಾರ್ಯಾಚರಿಸಲು ಅನುಮತಿಸಲು ಸಾಧ್ಯವೇ ಎಂಬ ಪ್ರಶ್ನೆಗೆ, ಇಲೆಕ್ಟ್ರಾನಿಕ್‌ ಉತ್ಪನ್ನಗಳ, ಮೊಬೈಲ್‌ ಶಾಪ್‌ ಗಳು ಮತ್ತು ಸೇವಾ ವಿಭಾಗದ ಅಗತ್ಯ ತಿಳಿದಿದೆ. ಆದರೆ ರಾಜ್ಯ ಸರಕಾರದ ಆದೇಶ ಒಂದೆರಡು ದಿನಗಳಲ್ಲಿ ಬರಲಿದ್ದು, ಬಳಿಕ ತೀರ್ಮಾನಿಸಲಾಗುವುದು ಎಂದರು.

ನೀವು ಅಲ್ಲೇ ಇರಿ, ಕ್ಷೇಮವಾಗಿರಿ
ಬೆಳಗಾವಿ, ವಿಜಯಪುರ ಜಿಲ್ಲೆಗಳ ಸ್ಥಿತಿ ನೋಡಿ. ಮಹಾರಾಷ್ಟ್ರಕ್ಕೂ ಇಲ್ಲಿನವರಿಗೂ ಬಹಳ ನಿಕಟ ಸಂಬಂಧವಿದೆ. ಹಾಗಾಗಿ ಒಂದು ಜಿಲ್ಲೆಯಿಂದ ಮತ್ತೂಂದು ಜಿಲ್ಲೆಗೆ ಹೋಗದಂತೆ ತಡೆಯುತ್ತಿದ್ದೇವೆ. ಅದೊಂದೇ ಸುರಕ್ಷಿತ ಮಾರ್ಗ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

ಮುಂಬಯಿ – ಪುಣೆಯಲ್ಲಿರುವ ಕರಾವಳಿಗರನ್ನು ಕರೆ ತರುವ ಕುರಿತು ಕೇಳಿದಾಗ, ಪ್ರಸ್ತುತ ಅಂತಾರಾಜ್ಯ ಸಂಚಾರ ನಿರ್ಬಂಧವಿದ್ದು, ಸದ್ಯದ ಸ್ಥಿತಿಯಲ್ಲಿ ಅಸಾಧ್ಯ. ಅವರು ಅಲ್ಲೇ ಇರುವುದು ಅವರ ದೃಷ್ಟಿಯಲ್ಲೂ ಕ್ಷೇಮ, ನಮ್ಮ ದೃಷ್ಟಿಯಲ್ಲೂ ಕ್ಷೇಮ ಎಂದರು.

ಅನೇಕ ಜಿಲ್ಲೆಗಳಲ್ಲಿ ಕೋವಿಡ್ 19 ವೈರಸ್ ಇಲ್ಲ. ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕಲ್ಲವೆ? ಒಂದೊಮ್ಮೆ ಸಾರ್ವಜನಿಕ ಸಾರಿಗೆ ಆರಂಭಿಸಿದರೆ ಇವರನ್ನೂ ಸಂಕಷ್ಟಕ್ಕೆ ದೂಡಿದಂತಾಗುತ್ತದೆ.

ಜನರು ಒಂದೆಡೆ ಯಿಂದ ಮತ್ತೂಂದೆಡೆಗೆ ಸಂಚರಿಸಿದಾಗ ಸಮಸ್ಯೆ ತಲೆದೋರುತ್ತದೆ. ನಾವು ಗಡಿಯನ್ನು ಸಂಪೂರ್ಣ ಸೀಲ್‌ ಮಾಡಿರುವುದು ಇದೇ ಕಾರಣಕ್ಕೆ. ಹೀಗಾಗಿ ನಾನು ಕೆಟ್ಟವನಾಗಿದ್ದೇನೆ ಎಂದರು ಜಿಲ್ಲಾಧಿಕಾರಿಯವರು.

Advertisement

Udayavani is now on Telegram. Click here to join our channel and stay updated with the latest news.

Next