ಕುಂದಾಪುರ : ಪದವಿ ಪರೀಕ್ಷೆ ಬರೆಯಲು ತೆರಳುತ್ತಿದ್ದಾಗ ಬೈಕ್ ಗಳೆರಡರ ಮಧ್ಯೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಗಾಯಗೊಂಡು ಆ್ಯಂಬುಲೆನ್ಸ್ ಮೂಲಕವೇ ಪರೀಕ್ಷೆ ಬರೆಯಲು ಕಾಲೇಜಿಗೆ ಆಗಮಿಸಿದ ಘಟನೆ ಇಂದು(ಗುರುವಾರ, ಆಗಸ್ಟ್ 19) ಬೆಳಿಗ್ಗೆ ನಡೆದಿದೆ.
ಇಲ್ಲಿನ ಕಾಲೇಜು ವಿದ್ಯಾರ್ಥಿಗಳಾದ ಶಿರೂರು ನಿವಾಸಿ ಮಸಾಯಿದ್ ಮತ್ತು ಗಂಗೊಳ್ಳಿ ನಿವಾಸಿ ವಾಜಿದ್ ಗಾಯಗೊಂಡು ಆಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳು.
ಇದನ್ನೂ ಓದಿ : ತಾಲಿಬಾನ್ ಪಿಶಾಚಿಗಳಿಂದ ತಪ್ಪಿಸಿಕೊಳ್ಳಲು ಹೆತ್ತ ಮಕ್ಕಳನ್ನು ಸೇನಾ ಸಿಬ್ಬಂದಿಗಳ ಕೈಗೆಸೆದರು.!
ಜಿಲ್ಲೆಯ ಗಡಿಭಾಗವಾದ ಶಿರೂರಿನಿಂದ ಪ್ರಥಮ ವರ್ಷದ ಪದವಿ ಪರೀಕ್ಷೆಗಾಗಿ ಬೈಕ್ ನಲ್ಲಿ ಬಂದಿದ್ದ ಮಸಾಯಿದ್ ಗಂಗೊಳ್ಳಿಗೆ ತೆರಳಿ ತಮ್ಮ ಸ್ನೇಹಿತ ವಾಜಿದ್ ನನ್ನು ಕರೆದುಕೊಂಡು ಕಾಲೇಜಿಗೆ ಸಾಗುತ್ತಿದ್ದಾಗ ಈ ಅವಘಡ ನಡೆದಿದೆ.
ಬೈಕ್ ಗಂಗೊಳ್ಳಿ-ತ್ರಾಸಿ ಮಾರ್ಗದ ಕೊಡಪಾಡಿ ಸಮೀಪಿಸುತ್ತಿದ್ದಂತೆಯೇ ಎದುರು ಬದಿಯಿಂದ ಬರುತ್ತಿದ್ದ ಇನ್ನೊಂದು ಬೈಕ್ ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ವಿದ್ಯಾರ್ಥಿಗಳನ್ನು ಗಂಗೊಳ್ಳಿಯ ಆಪತ್ಬಾಂಧವ ಆ್ಯಂಬುಲೆನ್ಸ್ ನ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ ಮತ್ತು ತಂಡ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾಗಿದ್ದಾರೆ.
ತೀವ್ರ ಸ್ವರೂಪದ ಗಾಯಗಳಾದರೂ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳು:
ಅಪಘಾತದಲ್ಲಿ ತೀವ್ರ ಸ್ವರೂಪದ ಗಾಯಗಳಾದರೂ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಆಂಬುಲೆನ್ಸ್ ಮೂಲಕವೇ ವಿದ್ಯಾರ್ಥಿಗಳಿಬ್ಬರೂ ಭಂಡಾರ್ಕಾರ್ಸ್ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ. ಪರೀಕ್ಷೆ ಬರೆದ ಬಳಿಕ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಚಿಕಿತ್ಸೆ ಪಡೆಯಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿ : ಸರ್ಕಾರದ ಆಫರ್ ಬೇಡವೆಂದು ಪಿಯುಸಿ ಪರೀಕ್ಷೆ ಬರೆಯಲು ಮುಂದಾದ ವಿದ್ಯಾರ್ಥಿನಿ