Advertisement
ಆಪರೇಷನ್ ಕಮಲ ಆತಂಕ, ಸರ್ಕಾರದ ಅಸ್ಥಿರತೆ ಪ್ರಯತ್ನ, ಸಮ್ಮಿಶ್ರ ಸರ್ಕಾರದ ಬಜೆಟ್ ಕುರಿತು ‘ಉದಯವಾಣಿ’ಗೆ ಸಂದರ್ಶನ ನೀಡಿದ ಸಿಎಂ ಕುಮಾರಸ್ವಾಮಿ , ಬಿಜೆಪಿ ಭಜನಾ ಮಂಡಳಿ ಏನು ಮಾಡಿದರೂ ಸರ್ಕಾರ ಅಲ್ಲಾಡುವುದಿಲ್ಲ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
Related Articles
Advertisement
ಮುಖ್ಯಮಂತ್ರಿಯಾಗಿ ನಾನು ಬಜೆಟ್ ಮಂಡಿಸುತ್ತೇನೆ. ನನ್ನ ಕಾರ್ಯಕ್ರಮ ಜನರ ಮುಂದಿಡುತ್ತೇನೆ. ಅವರು ಏನಾದರೂ ಮಾಡಿಕೊಳ್ಳಲಿ.
ಸಮ್ಮಿಶ್ರ ಸರ್ಕಾರಕ್ಕೆ ಆತಂಕ ಇದೆಯಾ? ಕಾಂಗ್ರೆಸ್-ಜೆಡಿಎಸ್‌ನ ಶಾಸಕರು ಅಧಿವೇಶನಕ್ಕೆ ಗೈರು ಹಾಜರಾಗಿದ್ದಾರಲ್ಲಾ?
ಯಾವುದೇ ಆತಂಕವೂ ಇಲ್ಲ, ಅತಂತ್ರವೂ ಇಲ್ಲ. ವೈಯಕ್ತಿಕ ಕಾರಣಕ್ಕಾಗಿ ಕೆಲವರು ಬರದಿರಬಹುದು. ಆದರೆ, ಎಲ್ಲರೂ ಸಂಪರ್ಕದಲ್ಲಿದ್ದಾರೆ.
• ಬಿಜೆಪಿ ಸರ್ಕಾರಕ್ಕೆ ಬಹುಮತ ಇಲ್ಲಾ ಎಂದು ಆರೋಪ ಮಾಡಿದೆಯಲ್ಲಾ?
ಹಾಗಿದ್ದರೆ ಅವಿಶ್ವಾಸ ನಿರ್ಣಯ ಮಂಡಿಸಬಹುದಿತ್ತಲ್ಲಾ? ಸದನದಲ್ಲಿ ಸುಮ್ಮನೆ ಕುಳಿತರೆ ನಾನೇ ನನ್ನ ಸರ್ಕಾರಕ್ಕೆ ಇರುವ ಬಹುಮತ ಸಾಬೀತು ಮಾಡಲು ಸಿದ್ಧ. ನಾನೂ ರಾಜಕಾರಣದಲ್ಲಿ ಇಂತದ್ದು ಸಾಕಷ್ಟು ನೋಡಿದ್ದೇನೆ.
• ಉಭಯ ಸದನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಜನತೆಗೆ ತಪ್ಪು ಸಂದೇಶ ಹೋಗುವುದಿಲ್ಲವೇ?
ಅದನ್ನು ಪ್ರತಿಪಕ್ಷ ಬಿಜೆಪಿ ಯೋಚಿಸಲಿ. ”ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ. ಸರ್ಕಾರದ ವೈಫಲ್ಯ ಎತ್ತಿ ತೋರಿಸುತ್ತೇವೆ, ಬರ ಪೀಡಿತ ಪ್ರದೇಶಗಳ ಜನರ ಸಮಸ್ಯೆ ಸರ್ಕಾರದ ಮುಂದಿಡುತ್ತೇವೆ” ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ, ಅವರು ಮಾಡುತ್ತಿರುವುದು ಏನು?
• ಆಟ ಆಡುತ್ತಿರುವವರು ಯಾರು?
ರಾಜ್ಯದ ಜನತೆಗೆ ಗೊತ್ತಿದೆ. ಮುಂಬೈನಲ್ಲಿ ಶಾಸಕರನ್ನು ಗುಡ್ಡೆ ಹಾಕಿಕೊಂಡಿರುವವರು ಯಾರು? ಕಾಂಗ್ರೆಸ್-ಜೆಡಿಎಸ್ ಶಾಸಕರ ಮನೆಗಳಿಗೆ ಹಣದ ಬ್ಯಾಗ್ ತೆಗೆದುಕೊಂಡು ಹೋಗಿ ಆಮಿಷ ಒಡುತ್ತಿರುವುದು ಯಾರು ಎಂಬುದೆಲ್ಲಾ ನನಗೆ ಗೊತ್ತಿದೆ. ಸಮಯ ಬಂದಾಗ ಗೊತ್ತಾಗಲಿದೆ. ನಾನು ಸುಮ್ಮನೆ ಕುಳಿತಿಲ್ಲ ಎಂಬುದು ಅವರೂ ಅರ್ಥ ಮಾಡಿಕೊಳ್ಳಲಿ.
• ಬಿಜೆಪಿ ಮ್ಯಾಜಿಕ್ ನಂಬರ್ ತಲುಪುತ್ತಾ?
ಅವರ ಬಳಿ ಬೇಸಿಕ್ ನಂಬರ್ರೇ ಇಲ್ಲ. ಇನ್ನು ಮ್ಯಾಜಿಕ್ ನಂಬರ್ ತಲುಪುವುದು ಹೇಗೆ. ಮಾಧ್ಯಮಗಳನ್ನೂ ದಿಕ್ಕು ತಪ್ಪಿಸಲಾಗುತ್ತಿದೆ.
ಅರ್ಥಮಾಡಿಕೊಳ್ಳಿ …
ನಾನು ಸಮಾಧಾನವಾಗಿಯೇ ಒಂದು ಮಾತು ಹೇಳಲು ಬಯಸುತ್ತೇನೆ. ರಾಜ್ಯ ವಿಧಾನಮಂಡಲಕ್ಕೆ ತನ್ನದೇ ಆದ ಪರಂಪರೆ ಇದೆ. ಸಭಾಧ್ಯಕ್ಷರಿಗೂ ಮಾತನಾಡಲು ಅವಕಾಶ ಕೊಡದೆ ಅಗೌರವ ತರುವುದು ನಮಗ್ಯಾರಿಗೂ ಗೌರವ ತರುವಂತದ್ದಲ್ಲ. ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಇಂತಹ ವಿದ್ಯಮಾನ ನನಗೋ, ಯಡಿಯೂರಪ್ಪನವರಿಗೋ ಕಳಂಕವಲ್ಲ. ವಿಧಾನಮಂಡಲ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ. ಹೀಗಾಗಿ, ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ವಿಷಯವೇ ಇಲ್ಲದೆ ಸದನದಲ್ಲಿ ಪ್ರತಿಭಟನೆ ಮಾಡಿ ಗದ್ದಲ ಎಬ್ಬಿಸುವುದು ಎಷ್ಟರ ಮಟ್ಟಿಗೆ ಸರಿ. ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ತೋರದೆ ಸದನ ಸುಗಮವಾಗಿ ನಡೆಯಲು ಅವಕಾಶ ಕೊಟ್ಟು ಯಾವುದೇ ವಿಷಯದ ಬಗ್ಗೆ ಪ್ರಸ್ತಾಪಿಸಿದರೂ ನಾನು ಚರ್ಚೆಗೆ ಸಿದ್ಧನಿದ್ದೇನೆ.
ಸರ್ಕಾರ ಇರುತ್ತಾ ಉರುಳುತ್ತಾ?
ಸರ್ಕಾರ ಶೇ.100ಕ್ಕೆ 100ರಷ್ಟು ಗಟ್ಟಿಯಾಗಿದೆ. ಸದನದ ಬಾವಿಗಿಳಿದು ಪ್ರತಿಭಟನೆ ಮಾಡುವ ಬಿಜೆಪಿಯ ಸಾಕಷ್ಟು ಶಾಸಕರು ನಂತರ ತಮ್ಮ ಬಳಿ ಬಂದು ಬೇಸರ ವ್ಯಕ್ತಪಡಿಸುತ್ತಾರೆ. ಬಿಜೆಪಿಯ ಬಹುತೇಕ ಶಾಸಕರಿಗೂ ನನ್ನ ಸರ್ಕಾರ ಉರುಳಿಸುವುದು ಇಷ್ಟವಿಲ್ಲ. ಕೆಲವು ನಾಯಕರಷ್ಟೇ ತೆರೆಮರೆಯ ಆಟ ಆಡುತ್ತಿದ್ದಾರೆ.
ಎಸ್. ಲಕ್ಷ್ಮಿನಾರಾಯಣ