Advertisement

ರಾಜಕೀಯ ಬಲವಿಲ್ಲ, ಅಸ್ತಿತ್ವ ಮಾಸಿಲ್ಲ; ಉದಯವಾಣಿ ಜತೆ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್‌

04:50 PM Jul 20, 2021 | Team Udayavani |

ಹುಬ್ಬಳ್ಳಿ: “ನಿಜ, ಸದ್ಯ ರಾಜ್ಯದಲ್ಲಿ ನಮಗೆ ರಾಜಕೀಯ ಬಲ ಇಲ್ಲದಿರಬಹುದು. ಆದರೆ, ಪಕ್ಷದ ಅಸ್ತಿತ್ವ ಮಾಸಿಲ್ಲ. ಭವಿಷ್ಯ ಖಂಡಿತವಾಗಿಯೂ ಇದೆ. ಗ್ರಾಮ ಸ್ವರಾಜ್‌, ಪರಿಸರ ಸ್ನೇಹಿ ಕೃಷಿ ಜಾಗೃತಿಯೊಂದಿಗೆ ಪಕ್ಷ ಕಟ್ಟಲು ಮುಂದಾಗಿದ್ದೇನೆ. ನಮ್ಮ ಚಿಂತನೆಗಳಿಗೆ ಸಹಮತವಿರುವ ಪಕ್ಷಗಳೊಂದಿಗೆ ಹೊಂದಾಣಿಕೆಗೆ ಮುಕ್ತವಾಗಿದ್ದೇವೆ. ಜಿಪಂ-ತಾಪಂ ಚುನಾವಣೆಗೆ ಸ್ಪರ್ಧಿಸುತ್ತೇವೆ’ -ಹೀಗೆಂದವರು ಸಂಯುಕ್ತ ಜನತಾ ದಳ(ಜೆಡಿಯು)ರಾಜ್ಯಾಧ್ಯಕ್ಷ ಮಹಿಮಾ ಪಟೇಲ್‌.

Advertisement

ಜೆಡಿಯು ಪಕ್ಷದ ಚಿಂತನೆ, ಗ್ರಾಮ ಸ್ವರಾಜ್‌ ಮೂಲಕ ಪಕ್ಷ ಸಂಘಟನೆ ಇನ್ನಿತರೆ ವಿಷಯಗಳ ಕುರಿತು “ಉದಯವಾಣಿ’ ಜತೆ ಅವರು ಮಾತನಾಡಿದರು. ಕೇವಲ ಅಧಿಕಾರ ಲಾಲಸೆಗಾಗಿ ಪಕ್ಷಕ್ಕೆ ಬರುವ ನೂರು ಜನರಿಗಿಂತ, ನಮ್ಮ ಚಿಂತನೆ-ತತ್ವಗಳನ್ನು ಅರ್ಥೈಯಿಸಿಕೊಂಡು, ಅಳವಡಿಸಿಕೊಳ್ಳುವ ಹತ್ತೇ ಜನ ಇದ್ದರೆ ಸಾಕು. ಪರಿವರ್ತನೆ, ಸಾಮೂಹಿಕ ಅಭಿವೃದ್ಧಿ ಚಿಂತನೆ ಬಲಗೊಳ್ಳುತ್ತದೆ. ಜನರಿಗೆ ಪಕ್ಷ ಅರ್ಥವಾಗುತ್ತದೆ. ಅಧಿಕಾರ, ಸ್ಥಾನ ಗಳಿಸುವಿಕೆ ದೃಷ್ಟಿಯಿಂದಲ್ಲ ಜನರ ಮನಸ್ಸಿನ ದೃಷ್ಟಿಯಿಂದ ನೋಡಿದರೆ ಜೆಡಿಯುಗೆ ರಾಜ್ಯದಲ್ಲಿ ಅಸ್ತಿತ್ವ ಇದೆ. ಜನತಾ ಪರಿವಾರ ಸರಕಾರ ನೀಡಿದ ಅಭಿವೃದ್ಧಿ ಪರ, ಜನಸ್ನೇಹಿತ ಆಡಳಿತ ನೆನಪುಗಳು ಜನರ ಮನದೊಳಗಿವೆ. ಹೊಸ ತಲೆಮಾರಿಗೆ ಅದನ್ನು ಪರಿಚಯಿಸಬೇಕಿದೆ.

ತತ್ವಗಳು ತಂತ್ರಗಾರಿಕೆ ಆಗಬೇಕೆ ವಿನಃ ತಂತ್ರಗಾರಿಕೆಯೇ ತತ್ವಗಳಾಗಬಾರದು ಎಂಬ ಚಿಂತನೆಯಡಿ ಸಾಗುತ್ತೇವೆ. ಗ್ರಾಮ ಸ್ವರಾಜ್‌, ಅರಣ್ಯೀಕರಣ, ಜಲಾನಯನ ಅಭಿವೃದ್ಧಿ, ಗುಡಿ ಕೈಗಾರಿಕೆ, ಹಳ್ಳಿ ಜೀವನವೇ ಅತ್ಯುತ್ತಮ ಎಂಬ ವಾತಾವರಣ ಸೃಷ್ಟಿಯಂತಹ ಚಿಂತನೆಗಳೊಂದಿಗೆ ಸಾಗುತ್ತೇವೆ. ವಿಶೇಷವಾಗಿ ಯುವಜನರ ಮನದೊಳಗಿನ ತುಮುಲ, ಗೊಂದಲಗಳಿಗೆ ಪರಿಹಾರ, ಮನವರಿಕೆಗೆ ಮುಂದಾಗುತ್ತೇವೆ.

ಬಲದ ಕೊರತೆ: ಸದ್ಯದ ಸ್ಥಿತಿಯಲ್ಲಿ ರಾಜ್ಯದಲ್ಲಿ ಜೆಡಿಯುಗೆ ರಾಜಕೀಯ-ಸಂಘಟನಾತ್ಮಕ ಬಲದ ಕೊರತೆ ಇರಬಹುದು. ಆದರೆ, ದೃಷ್ಟಿಕೋನ ಸ್ಪಷ್ಟವಾಗಿದೆ. ಕೈ-ಕಾಲುಗಳಲ್ಲಿ ಬಲವಿರುವ ಪಕ್ಷಗಳೊಂದಿಗೆ ಅದರಲ್ಲೂ ನಮ್ಮ ಚಿಂತನೆಗೆ ಸಹಮತ ಹೊಂದಿರುವ ಪಕ್ಷದೊಂದಿಗೆ ಕೈ ಸೇರಿಸಲು ಸಿದ್ಧರಿದ್ದೇವೆ. ನಮ್ಮ ದೃಷ್ಟಿಕೋನ, ಅವರ ಕೈ-ಕಾಲುಗಳ ಬಲ ಸಮ್ಮಿಳಿತವಾದರೆ ಜನ-ನಾಡಿನ ಹಿತ, ಸಾಮೂಹಿಕ ಉನ್ನತಿ, ಸಮೃದ್ಧಿ ಸಾಧ್ಯವಾಗಲಿದೆ.

ರೈತಸಂಘದ ನಾಯಕ ಲಕ್ಷ್ಮೀನಾರಾಯಣಗೌಡ ಅವರು ಜೆಡಿಯು ಜತೆ ಸಹಮತದೊಂದಿಗೆ ಕಾರ್ಯನಿರ್ವಹಿಸಲು ಮುಂದಾಗಿರುವುದು ಆನೆ ಬಲ ತಂದಂತಾಗಿದೆ. ಪರಸ್ಪರರು ಸೇರಿ ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದನೆ, ನಾಡಿನ ಹಿತದೃಷ್ಟಿಯಿಂದ ಮುನ್ನಡೆಯುತ್ತೇವೆ. ರಾಜಕೀಯದಲ್ಲಿರುವ ಅನೇಕ ಹಿತಚಿಂತಕರು, ಸ್ನೇಹಿತರೊಂದಿಗೆ ಚರ್ಚಿಸಿದ್ದೇನೆ. ಪಕ್ಷ ಸಂಘಟನೆಗೆ ಹೊರರೂಪ ನೀಡುವ ಯತ್ನಕ್ಕೆ ಮುಂದಾಗಿದ್ದೇನೆ. ಗ್ರಾಮ ಸ್ವರಾಜ್‌, ಶೇ.33ಕ್ಕೆ ಅರಣ್ಯ ಹೆಚ್ಚಳ, ರೈತರಲ್ಲಿ ಜಾಗೃತಿ, ಜಲಾನಯನ ಪ್ರದೇಶ ಅಭಿವೃದ್ಧಿ, ಬೀಜ ಸ್ವಾವಲಂಬನೆ, ವಿಷಮುಕ್ತ ಕೃಷಿ ನಿಟ್ಟಿನಲ್ಲಿ ಸಾಗುತ್ತೇವೆ.

Advertisement

ನಾನು-ನನ್ನ ಹಳ್ಳಿಯಿಂದಲೇ
ಬದಲಾವಣೆ ಶುರುವಾಗಲಿ ಬದಲಾವಣೆ ಎಲ್ಲಿಂದಲೋ ಬರುತ್ತದೆ ಎಂದು ಕಾಯುವುದಾಗಲಿ, ಯಾರಿಂದಲೋ ನಿರೀಕ್ಷಿಸುವುದಾಗಲಿ ಅಲ್ಲ. ನನ್ನಿಂದಲೇ ಮೊದಲು ಬದಲಾವಣೆ ಆರಂಭವಾಗಬೇಕು. ನನ್ನ ಮನೆ, ನನ್ನ ಹಳ್ಳಿ, ತಾಲೂಕು, ಜಿಲ್ಲೆ, ನಾಡಿಗೆ ಹಬ್ಬಬೇಕು. ಸಾವಯವ-ನೈಸರ್ಗಿಕ ಪದ್ಧತಿಯ ಕೃಷಿಯನ್ನು ನಾನು ಆರಂಭಿಸಿದೆ. ರೈತರಿಗೆ ಮನವರಿಕೆಗೆ ಮುಂದಾದೆ. ಇದೀಗ ನನ್ನೂರು ಕಾರಿಗನೂರಿನಲ್ಲಿ ಸುಮಾರು 60ಕ್ಕೂ ಹೆಚ್ಚು ರೈತರು ಸಾವಯವ ಕೃಷಿಗೆ ವಾಲಿದ್ದಾರೆ.

ಇದೇ ಮಾದರಿಯನ್ನು ಹೋಬಳಿ, ತಾಲೂಕು, ಜಿಲ್ಲೆ, ನಾಡಿಗೆ ಹಬ್ಬಿಸುವ ಚಿಂತನೆ ಇದೆ. ಕೃಷಿಯಲ್ಲಿ ಆರೋಗ್ಯ, ಭಾವನಾತ್ಮಕ ಸಂಬಂಧಗಳು, ಒಳ್ಳೆ ಚಿಂತನೆಗಳಿಗೆ ಮೊದಲ ಆದ್ಯತೆ. ನಂತರದಲ್ಲಿಯೇ ಹಣ ಸ್ಥಾನ ಪಡೆಯಬೇಕೆಂಬುದನ್ನು ಮನವರಿಕೆ ಮಾಡುತ್ತೇವೆ. ನನ್ನ ಐದು ಎಕರೆ ಜಮೀನಿನಲ್ಲಿ ಬೆಳೆದ ಮಾವು ಮಾರಾಟ ಮಾಡದೆ ಇಡೀ ಗ್ರಾಮದ ಜನರಿಗೆ ತಿನ್ನಲು ನೀಡಿದ್ದೇನೆ. ರಾಜ್ಯದಲ್ಲಿ ಪರ್ಯಟನೆ ಮಾಡಿ ಸುಮಾರು 10 ಸಾವಿರ ಸಾವಯವ ರೈತರನ್ನು ಜೋಡಿಸುವ ಚಿಂತನೆ ಹೊಂದಿದ್ದೇನೆ. ವಿಶೇಷವಾಗಿ ಗುಡಿ ಕೈಗಾರಿಕೆ, ಕರಕುಶಲತೆ ಬಲವರ್ಧನೆಯೊಂದಿಗೆ, ನಗರಕ್ಕಿಂತಲೂ ಹಳ್ಳಿ ವಾಸ ಉತ್ತಮ-ಯೋಗ್ಯ ಎನ್ನುವ ಭಾವನೆಯ ಪುನರುತ್ಥಾನಕ್ಕೆ ಶಕ್ತಿ ಮೀರಿ ಯತ್ನಿಸುತ್ತೇನೆ ಎನ್ನುತ್ತಾರೆ ಮಹಿಮಾ ಪಟೇಲ್‌.

Advertisement

Udayavani is now on Telegram. Click here to join our channel and stay updated with the latest news.

Next