Advertisement

ಆದಯ್ಯರ ವಚನದಲ್ಲಿ ಸಪ್ತ ಸೂತ್ರವೇ ಪ್ರಧಾನ

03:16 PM Aug 30, 2021 | Team Udayavani |

ಹೊಸದುರ್ಗ: ಮಾನವ ಮತ್ತು ದೇವರು ಇಬ್ಬರೂ ಒಂದೇ. ಆದರೆ ಮಾನವ ಅಜ್ಞಾನದಿಂದ ತಾನೇ ಬೇರೆ, ದೇವರೇ ಬೇರೆ ಎಂದು ಭಾವಿಸಿದ್ದಾನೆ. ಇದು ಸರಿಯಲ್ಲವೆಂದು ಆದಯ್ಯನವರು ತಮ್ಮ ವಚನಗಳ ಮೂಲಕ ಪ್ರತಿಪಾದಿಸಿದ್ದಾರೆ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಆಯೋಜಿಸಿರುವ “ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ 29ನೇ ದಿನ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಮಾನವನ ಭಾವನೆ ಬದಲಾಗಿ ಮಾನವ ಮತ್ತು ದೇವರು ಒಂದೇ ಆಗಬೇಕಾದಲ್ಲಿ ಮಾನವನ ವರ್ತನೆಗಳು ಹೇಗಿರಬೇಕು ಎನ್ನುವುದಕ್ಕೆ ಆದಯ್ಯನವರು “ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ, ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ, ಜ್ಞಾನದಲ್ಲಿ ಪರಮಾನಂದ’ ಹೊಂದುವ ಸಪ್ತ ಸೂತ್ರಗಳನ್ನು ಹೇಳಿದ್ದಾರೆ ಎಂದರು.

ಆದಯ್ಯನವರು ಕರ್ನಾಟಕದವರಲ್ಲ, ಸೌರಾಷ್ಟ್ರದವರು. ಅವರ ವೃತ್ತಿ ವ್ಯಾಪಾರ. ವ್ಯಾಪಾರಕ್ಕಾಗಿ ಪುಲಿಗೆರೆಗೆ (ಇಂದಿನ ಲಕ್ಷೆಶ್ವರ) ಬಂದು ಜೈನ ಕನ್ಯೆ ಪದ್ಮಾವತಿಯನ್ನು ಮದುವೆಯಾಗುತ್ತಾರೆ. ಅಳಿಯ ಮತ್ತು ಮಾವನ ನಡುವೆ ದೇವರ ವಿಚಾರವಾಗಿ ಘರ್ಷಣೆಯಾಗಿ ಸೌರಾಷ್ಟ್ರದಿಂದಸೋಮೇಶ್ವರನನ್ನುಕರೆತಂದು ಪುಲಿಗೆರೆಯ ಸುರಹೊನ್ನೆ ಬಸದಿಯಲ್ಲಿ ಪ್ರತಿಷ್ಠಾಪಿಸಿದರೆಂಬ ಪ್ರತೀತಿ ಇದೆ.

ಆದಯ್ಯನವರು ನಿಷ್ಠಾವಂತ ಶಿವಭಕ್ತರು. ಕಲ್ಯಾಣದ ಶರಣರ ಪ್ರಭಾವದಿಂದ ತಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಿಕೊಂಡ ಶರಣರು. ತಾವು ಸೌರಾಷ್ಟ್ರದವರು ಮತ್ತು ಸೋಮೇಶ್ವರನ ಭಕ್ತರು ಎನ್ನುವುದಕ್ಕೆ ಸಾಕ್ಷಿ ಎಂಬಂತೆ ತಮ್ಮ ವಚನಗಳಿಗೆ “ಸೌರಾಷ್ಟ್ರ ಸೋಮೇಶ್ವರ’ ಎನ್ನುವ ಅಂಕಿತ ಬಳಸಿದ್ದಾರೆ.

ಈ ಅಂಕಿತದಲ್ಲಿ 403 ವಚನಗಳು ದೊರೆತಿವೆ. ಇವರ ವಚನಗಳಲ್ಲಿ ಅರಿವು, ಲಿಂಗದ ಮಹತ್ವ, ವೇದಗಳ ನಿರಾಕರಣೆ ಇತ್ಯಾದಿ ವಿಚಾರಗಳು ಉಲ್ಲೇಖೀತವಾಗಿವೆ. “ನಾಲ್ಕು ವೇದ, ಹದಿನಾರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟು ಆಗಮ, ಮೂವತ್ತೆರಡು ಉಪನಿಷತ್ತುಗಳೆಲ್ಲವೂ ಪಂಚಾಕ್ಷರದ ಸ್ವರೂಪವನರಿಯದೆ ನಿಂದವು’ ಎನ್ನುತ್ತ ಪಂಚಾಕ್ಷರ ಮಂತ್ರದ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ.

Advertisement

“ವೇದಗಳ ಹಿಂದೆ ಹರಿಯದಿರು, ಶಾಸ್ತ್ರಗಳ ಹಿಂದೆ ಸುಳಿಯದಿರು, ಪುರಾಣಗಳ ಹಿಂದೆ ಬಳಸದಿರು, ಆಗಮಂಗಳ ಹಿಂದೆ ತೊಳಲದಿರು’ ಎಂದು ಹೇಳುತ್ತ ಇವೆಲ್ಲವೂ “ಶಬ್ದಜಾಲ’ ಎಂದು ನಿಷ್ಠುರವಾಗಿ ಹೇಳಿದ್ದಾರೆ. ಶ್ರೀಗುರುವಿನ ಪಾದತೀರ್ಥಕ್ಕಿಂತ ಮಿಗಿಲಾದ ತೀರ್ಥ ಮತ್ತೂಂದಿಲ್ಲ ಎಂದು ಹೇಳಿದ್ದಾರೆಂದರು.

ಉಪನ್ಯಾಸ ಮಾಲಿಕೆಯಲ್ಲಿ “ಆದಯ್ಯ’ ಕುರಿತಂತೆ ಜಾಗತಿಕ ಬಸವ ಶಾಂತಿ ಸಂಸ್ಥೆಯ ಅಧ್ಯಕ್ಷ, ಕತಾರ್‌ನ ಶಶಿಧರ ಹೆಬ್ಟಾಳ ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳವಳಿಯ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ಬಂದ ಕನ್ನಡೇತರ ಶರಣರಲ್ಲಿ ಆದಯ್ಯ ಕೂಡ ಒಬ್ಬರು. ಇವರು ಮೂಲತಃ ಸೌರಾಷ್ಟ್ರ ಅಂದರೆ ಈಗಿನ ಗುಜರಾತಿನವರು. ವ್ಯಾಪಾರ ಮಾಡುವುದು ಇವರ ಕಾಯಕವಾಗಿತ್ತು. ಪುಲಿಗೆರೆಗೆ ಬಂದು ವ್ಯಾಪಾರ ಮಾಡುತ್ತಿರುವಾಗ ಪದ್ಮಾವತಿ ಎನ್ನುವ ಜೈನ ಕನ್ಯೆಯ ಪರಿಚಯವಾಗುತ್ತದೆ. ಪರಿಚಯ ಪ್ರೀತಿಗೆ ತಿರುಗಿ ಆಕೆಯನ್ನು ಮದುವೆಯಾಗಲು ಮುಂದಾಗುತ್ತಾರೆ. ಆದರೆ ಪದ್ಮಾವತಿಯ ತಂದೆ ಶಿವಭಕ್ತರಿಗಲ್ಲದೆ ಅನ್ಯರಿಗೆ ಮಗಳನ್ನು ಕೊಡಲಾಗದು ಎನ್ನುವರು. ಹಠಕ್ಕೆ ಬಿದ್ದ ಆದಯ್ಯ ವಾದಕ್ಕೆ ನಿಂತು ಸೌರಾಷ್ಟ್ರದಿಂದ ಸೋಮೇಶ್ವರನನ್ನು ತಂದು ಲಕ್ಷೇಶ್ವರದ ಸುರಹೊನ್ನೆಯ ಬಸದಿಯಲ್ಲಿ ಸ್ಥಾಪಿಸಿ ನಿಜ ಶಿವಭಕ್ತರೆಂದು ಸಾಬೀತು ಪಡಿಸುತ್ತಾರೆ ಎನ್ನವ ಪವಾಡ ಸದೃಶ ಕತೆಯೊಂದನ್ನು ಹರಿಹರ, ರಾಘವಾಂಕರು ಉಲ್ಲೇಖೀಸಿದ್ದಾರೆ ಎಂದು ಹೇಳಿದರು.

ಶ್ರೀಮಠದ ವಿದ್ಯಾರ್ಥಿ ಸಚಿನ್‌ಪಿ.ಜಿ. ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಕೆ. ದಾಯಣಿ, ಎಚ್‌.ಎಸ್‌. ನಾಗರಾಜ್‌ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next