ದಾಂಡೇಲಿ : ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಲಿರುವ ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ 2021 ನ್ನು ವಿರೋಧಿಸುವ ಸಲುವಾಗಿ, ಅಖಿಲ ಭಾರತ ವಿದ್ಯುತ್ ನೌಕರರ ಒಕ್ಕೂಟದ ನಿರ್ದೇಶನದಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳನ್ನೊಳಗೊಡು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ದಿನಾಂಕ:10.08.2021 ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಶಾಖಾ ಕಛೇರಿ, ಉಪ ವಿಭಾಗ, ವಿಭಾಗ, ವಲಯ, ವೃತ್ತ ಮತ್ತು ಕಂಪನಿಗಳ ಮಟ್ಟದಲ್ಲಿ ಆ: 10 ರಂದು ಸಾಂಕೇತಿಕವಾಗಿ ಒಂದು ದಿನದ ಕೆಲಸ ಬಹಿಷ್ಕಾರಹೋರಾಟ ನಡೆಯಲಿದೆ. ಈ ಹೋರಾಟದಲ್ಲಿ ಕ.ವಿ.ಪ್ರ.ನಿಗಮದ ನೌಕರರ ಎಲ್ಲಾ ಸಂಘ ಸಂಸ್ಥೆಗಳ ಒಕ್ಕೂಟದವರೆಲ್ಲರೂ ಒಗ್ಗಟ್ಟಿನಿಂದ ಪಾಲ್ಗೊಳುತ್ತಿರುವುದಲ್ಲದೇ ಈ ಪ್ರತಿಭಟನೆಗೆ ರೈತ ಸಂಘಟನೆಗಳು, ವಿವಿಧ ಕಾರ್ಮಿಕ ಸಂಘಟನೆಗಳು, ಅಭಿವೃದ್ದಿಪರ ಸಂಘಟನೆಗಳು ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳು ಸಹ ಕೈಜೋಡಿಸಲಿವೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಾಣೇಶ.ಆರ್.ಮುಗಳಿಹಾಳ ತಿಳಿಸಿದ್ದಾರೆ.
ಇದನ್ನೂ ಓದಿ : ಗೋವಾ ವಾಸ್ಕೊ ವಿಮಾನ ನಿಲ್ದಾಣದಿಂದ ಯುಎಇ ವಿಮಾನ ಹಾರಾಟ ಆರಂಭ
ಅವರು ಭಾನುವಾರ ನಗರದ ಹೆಸ್ಕಾಂ ಕಚೇರಿ ಆವರಣದಲ್ಲಿ ಇರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ಸ್ಥಳೀಯ ಘಟಕದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು. ನಿಗಮದ ನೌಕರರು ಮತ್ತು ಸಾರ್ವಜನಿಕರ ವಿರೋಧದ ನಡುವೆಯೂ ಕೇಂದ್ರ ಸರಕಾರ ವಿದ್ಯುತ್ ಕಾಯಿದೆ-2003 ಕ್ಕೆ ತಿದ್ದುಪಡಿ ತಂದಿದ್ದೇ ಆದರೆ ರೈತರಿಗೆ ಹಾಗೂ ಬಡವರಿಗೆ ನೀಡುತ್ತಿರುವ ಭಾಗ್ಯಜ್ಯೋತಿ ಉಚಿತ ವಿದ್ಯುತ್ ಸ್ಥಗಿತಗೊಳ್ಳಲಿದೆ. ವಿದ್ಯುತ್ ದರ ಏರಿಕೆಯಿಂದ ಜನ ತತ್ತರಿಸಲಿದ್ದಾರೆ.
ಈ ಉದ್ಯಮವನ್ನೇ ನಂಬಿರುವ ವಿದ್ಯಾವಂತ ಯುವಕ, ಯುವತಿಯರು ಅಧಿಕ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗುವ ಆತಂಕ ಎದುರಾಗಲಿದೆ. ವಿದ್ಯುತ್ ಸೌಲಭ್ಯ ಬಂಡವಾಳ ಶಾಹಿಗಳ ಅಧೀನಕ್ಕೆ ಒಳಪಟ್ಟರೆ ಅವರು ನಿಗಧಿ ಪಡಿಸುವ ದರವನ್ನೇ ಒಪ್ಪಿಕೊಳ್ಳುವುದು ಆನಿವಾರ್ಯವಾಗಲಿದೆ. ಖಾಸಗೀಕರಣದಿಂದ ಎಲ್ಲಾ ಜಕಾತಿಯ ಸ್ಥಾವರಗಳಿಗೆ ಪ್ರಿಪೇಡ್ ಮೀಟರ್ ಗಳನ್ನು ಅಳವಡಿಸುವುದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಲಿದೆ. ಕೇಂದ್ರ ಸರಕಾರ ಖಾಸಗೀಕರಣ ಕುರಿತು ಸಂಸತ್ ಆಧೀವೇಶನದಲ್ಲಿ ಮಂಡಿಸಲಿರುವ ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ 2021 ನ್ನು ಕೈಬಿಡಬೇಕು. ಈ ಮನವಿಗೆ ಮನ್ನಣೆ ದೊರಕದಿದ್ದ ಪಕ್ಷದಲ್ಲಿ ನಿಗಮದ ನೌಕರರು ಹಾಗೂ ರೈತರು ರಾಷ್ಟ್ರವ್ಯಾಪಿ ಹೋರಾಟ ಮುಂದುವರಿಸುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಕೂಡಲೆ ಮನವಿಗೆ ಸ್ಪಂದಿಸಬೇಕೆಂದು ಪ್ರಾಣೇಶ.ಆರ್.ಮುಗಳಿಹಾಳ ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ನಿಗಮದ ನಿವೃತ್ತ ಪಿಂಚಣಿದಾರರ ಸಂಘದ ಕೇಂದ್ರ ಸಮಿತಿ ಸದಸ್ಯರಾದ ಗುರುರಾಜ ಪುರೋಹಿತ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ಸ್ಥಳೀಯ ಸಮಿತಿ ಅಧ್ಯಕ್ಷ ಮಾರತಿ ಎಪ್ ನಾಯ್ಕ, ಸ್ಥಳೀಯ ಸಮಿತಿಯ ಪ್ರಮುಖರುಗಳಾದ ವಿಶ್ವನಾಥ ಗಾಂಜಿ, ಸುದೇಶ ಕುದಳೆ, ಕುಮಾರ ಕರಗಯ್ಯಾ, ಜೆ.ಐ.ರೋಣ, ಸುಭಾಷ ಗೌಡಾ, ಮಂಜುನಾಥ ನಾಯ್ಕ, ವೀರಭದ್ರ ಗೌಡಾ, ಉಮೇಶ ಚಕಡಿ, ಹೆಸ್ಕಾಂ ಸಹಾಯಕ ಅಭಿಯಂತರ ವೇಂಕಟೇಶ ತಳೇಕರ, ಶಾಖಾಧಿಕಾರಿ ಪರಶುರಾಮ ಉಪ್ಪಾರ, ಸಹಾಯಕ ಲೆಕ್ಕಾಧಿಕಾರಿ ಸಚಿನ್ ನಾಡಕರ್ಣಿ, ನಿವೃತ್ತ ನೌಕರ ಛಾಯಪ್ಪಾ ಹಾಗೂ ನಿಗಮದ ನೌಕರರ ಹಳಿಯಾಳ ಪ್ರಾಥಮಿಕ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಕಾಲು ಜಾರಿ ಬಿದ್ದ ಹಿರಿಯ ನಟಿ ಲೀಲಾವತಿ : ಸೊಂಟ ಹಾಗೂ ಕಾಲಿಗೆ ಪೆಟ್ಟು