Advertisement

ಜಡ ವಿಗ್ರಹಕ್ಕಿಂತ ಇಷ್ಟಲಿಂಗ ಪೂಜೆಯೇ ಶ್ರೇಷ್ಠ

06:47 PM Aug 25, 2021 | Team Udayavani |

ಹೊಸದುರ್ಗ: ಯಾವ ದೇವರೂ ಶಾಪ ಅಥವಾ ವರ ಕೊಡುವುದಿಲ್ಲ. ಏಕೆಂದರೆ ಅವು ಚೈತನ್ಯಹೀನವಾದವು. ಇಂಥ ಜಡ ವಿಗ್ರಹಗಳನ್ನು ಪೂಜಿಸುವ ಬದಲಾಗಿ ವಿಶ್ವವನ್ನೇ ಪ್ರತಿನಿ ಧಿಸುವ ಇಷ್ಟಲಿಂಗವನ್ನು ಪೂಜಿಸುವುದೇ ಶ್ರೇಷ್ಠ ಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಶ್ರೀ ತರಳಬಾಳು ಜಗದ್ಗುರು ಶಾಖಾ ಮಠ ಆಯೋಜಿಸಿರುವ “ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ 24ನೇ ದಿನ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ದೇಹವೇ ತೀರ್ಥಕ್ಷೇತ್ರ ಇದ್ದಂತೆ. ಇಷ್ಟಲಿಂಗವನ್ನು ಪಡೆದುಕೊಂಡವರು ಲಿಂಗವನ್ನಲ್ಲದೆ ಅನ್ಯ ದೈವವನ್ನು ಪೂಜಿಸಬಾರದೆನ್ನುವ ತತ್ವ ಸಿದ್ಧಾಂತಗಳನ್ನು ಮರೆತು ಸ್ಥಾವರ ದೇವರ ಪೂಜಿಸುವವರು ಖೊಟ್ಟಿ ಮೂಳರು ಎಂದು ಅಂಬಿಗರ ಚೌಡಯ್ಯನವರು ಛೇಡಿಸುವರು.

ಕಲ್ಲ ದೇವರ ಪೂಜೆಯ ಮಾಡಿ ಕಲಿಯುಗದ ಕತ್ತೆಗಳಾಗಿ ಹುಟ್ಟಿದರು ಎನ್ನುವ ಅವರ ವಚನದಲ್ಲಿ ಕಲ್ಲು, ಮಣ್ಣು, ಮರಗಳಿಂದ ಸೃಷ್ಟಿಯಾದ ದೇವರು ದೇವರಲ್ಲ, ಅಂಥ ದೇವರಿಗೆ ಹರಕೆ ಕಟ್ಟಿಕೊಳ್ಳುವ ಕರ್ಮಠತನಗಳನ್ನು ಒಪ್ಪುವುದಿಲ್ಲ. ಇಂಥವರನ್ನು ಮಾನಹೀನರು ಎನ್ನುವರು. ದೇವರ ಪೂಜೆಯಿಂದ ಪರಮಾನಂದವುಂಟಾಗಬೇಕು. ಆದರೆ ಇವು ಭಯವನ್ನುಂಟು ಮಾಡುವ ದೇವರುಗಳಾಗಿವೆ. ದೇವರ ಹೆಸರಿನಲ್ಲಿ ಹರಕೆ, ಪಾದಯಾತ್ರೆಯಂಥ ಪದ್ಧತಿಗಳು ಇಂದೂ ಇವೆ. ಇಂಥವರನ್ನು ಪಂಚ ಮಹಾಪಾತಕಿಗಳು ಎಂದು ಹೇಳಿದ್ದರು ಎಂದರು.

ತಳ ಸಮುದಾಯದಿಂದ ಬಂದ ಕಾಯಕ ಜೀವಿಗಳಲ್ಲಿ ಅಂಬಿಗರ ಚೌಡಯ್ಯನವರು ಅಗ್ರಗಣ್ಯರು. ಇವರು ನೇರ ನಡೆ-ನುಡಿಯನ್ನು ಮೈಗೂಡಿಸಿಕೊಂಡು ಕ್ರಾಂತಿಕಾರಿ ಎನ್ನಿಸಿಕೊಂಡರು. ಇವರದು ದೋಣಿ ನಡೆಸುವ ಕಾಯಕ. ಜನ್ಮಸ್ಥಳ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಚೌಡದಾನಪುರ. ತಂದೆ ವಿರೂಪಾಕ್ಷ, ತಾಯಿ ಪಂಪಾದೇವಿ. ನಿಜ ಶರಣ ಅಂಬಿಗರ ಚೌಡಯ್ಯ ವಚನಾಂಕಿತ. ಇವರ 278 ವಚನಗಳು ಲಭ್ಯವಾಗಿವೆ. ಈ ವಚನಗಳು ಗಣಾಚಾರ ತತ್ವವನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ಬಂಡಾಯ ಪ್ರಜ್ಞೆ ಪ್ರಧಾನವಾಗಿದೆಯಲ್ಲದೆ ಲೌಕಿಕ ಮತ್ತು ಪಾರಮಾರ್ಥಿಕ ಎತ್ತರವನ್ನೂ ಕಾಣಬಹುದು ಎಂದು ತಿಳಿಸಿದರು.

ಉಪನ್ಯಾಸ ಮಾಲಿಕೆಯಲ್ಲಿ “ಅಂಬಿಗರ ಚೌಡಯ್ಯ’ ಕುರಿತಂತೆ ಸಂಘಟಕ, ತರಬೇತುದಾರ ಮಂಗಳೂರಿನ ಉಮರ್‌ ಯು.ಎಚ್‌ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಆಹಾರದ ಜೊತೆಗೆ ಮಾನಸಿಕ ಆರೋಗ್ಯವೂ ಮುಖ್ಯ. ದೇಹದಲ್ಲಿರುವ ಜೀವಕೋಶಗಳು ಸದಾ ಪರಸ್ಪರ ಪ್ರೀತಿಸುತ್ತವೆ. ನಾವು ಇನ್ನೊಬ್ಬರನ್ನು ದ್ವೇಷಿಸಲು ಶುರು ಮಾಡಿದಾಗ ನಮ್ಮಲ್ಲಿನ ಜೀವಕೋಶಗಳು ಗೊಂದಲಕ್ಕೆ, ಘರ್ಷಣೆಗೆ ಒಳಗಾಗುತ್ತವೆ. ಇದರಿಂದಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಬ್ರೈನ್‌ಸ್ಟ್ರೋಕ್‌, ಬ್ರೈನ್‌ ಹ್ಯಾಮರೇಜ್‌, ಹೃದಯಾಘಾತ ಆಗುತ್ತದೆ.

Advertisement

ಇದು ಕಟ್ಟು ಕತೆಯಲ್ಲ, ವೈದ್ಯ ವಿಜ್ಞಾನ ಹೇಳುವ ಸತ್ಯ. ಇದಕ್ಕೆ ಪರಿಹಾರದ ಬಗ್ಗೆ ಯಾವ ವಿಶ್ವವಿದ್ಯಾಲಯಗಳಲ್ಲೂ ಕಲಿಕೆಗಳಿಲ್ಲ. ವೇದ, ಕುರಾನ್‌, ಬೈಬಲ್‌, ವಚನಕಾರರು, ದಾರ್ಶನಿಕರು, ಧರ್ಮ ಮತ್ತು ಆಧ್ಯಾತ್ಮ ಕಲಿಸುವ ಉದಾತ್ತ ಮಾನವೀಯ ಮೌಲ್ಯಗಳಿಂದ ಮಾತ್ರ ಪರಿಹಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಅಧ್ಯಾಪಕಿ ಎಚ್‌.ಆರ್‌. ಕಾವ್ಯ ಸ್ವಾಗತಿಸಿದರು. ಶಿವಸಂಚಾರದ ಕೆ. ಜ್ಯೋತಿ, ಎಚ್‌. ಎಸ್‌. ನಾಗರಾಜ್‌ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ಮತ್ತು ಸಾಣೇಹಳ್ಳಿಯ ವಿದ್ಯಾರ್ಥಿಗಳಾದ ಡಿ.ಎಸ್‌. ಸುಪ್ರಭೆ ಮತ್ತು ಡಿ.ಜೆ. ಮುಕ್ತಾ ವಚನ ನೃತ್ಯ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next