Advertisement

ಆತ್ಮ ನಿರ್ಭರ ಭಾರತ ಕಟ್ಟೋಣ : ಆರಗ

04:13 PM Aug 16, 2021 | Team Udayavani |

ಚಿಕ್ಕಮಗಳೂರು: ನಾವೆಲ್ಲರೂ ಸ್ವಾವಲಂಬಿ, ಆತ್ಮನಿರ್ಭರ ಭಾರತವನ್ನು ಕಟ್ಟಲು ಶ್ರಮಿಸೋಣ. ಪ್ರತಿಯೊಬ್ಬರೂ ಸ್ವಾಭಿಮಾನ ಮತ್ತು ಆತ್ಮಗೌರವದಿಂದ ಬದುಕೋಣ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಭಾನುವಾರ ನಗರದ ಸುಭಾಷ ಚಂದ್ರಬೋಸ್‌ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ದೇಶ ಇಂದು ವಿಶ್ವಮಟ್ಟದಲ್ಲಿ ದಾಖಲೆ ಬರೆಯುತ್ತಿದೆ. ಇತ್ತೀಚೆಗೆ ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್‌ ನಲ್ಲಿ ಹಾಕಿಯಲ್ಲಿ ಕಂಚಿನ ಪದಕವನ್ನು ಪಡೆದ ಮಹಿಳಾ ಹಾಕಿ ತಂಡ ನಾಲ್ಕನೇ ಸ್ಥಾನ ಪಡೆದು ಕೊಂಡಿದೆ. ನೀರಜ್‌ ಚೋಪ್ರ ಜಾವೆಲಿನ್‌ ಎಸೆತದಲ್ಲಿ ಬಂಗಾರದ ಪದಕವನ್ನು ಕೊರಳಿ ಗೇರಿಸಿಕೊಂಡಿದ್ದಾರೆ.

ಮೀರಾಬಾಯಿಚಾನು, ರವಿಕುಮಾರ್‌ ದಹಿಯಾ ಬೆಳ್ಳಿಪದಕ, ಪಿ.ವಿ. ಸಿಂಧೂ, ಲವ್ಲಿನಾ ಬೊರ್ಗೊಹೈನ್‌, ಬಜರಂಗ್‌ ಪೂನಿಯ ಕಂಚಿನ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕವು ಮಹತ್ವದ ಪಾತ್ರ ವಹಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 1912ರಲ್ಲಿ ಪ್ರಜಾಪ್ರತಿನಿ ಧಿ ಸಭೆಯ ಸದಸ್ಯರಾಗಿ ಹೊಸಕೊಪ್ಪ ಕೃಷ್ಣರಾಯರು ಜಿಲ್ಲೆಯ ಜನತೆಯಲ್ಲಿ ಸ್ವಾತಂತ್ರ್ಯ ಹೋರಾಟದ ಜಾಗೃತಿ ಮೂಡಿಸಿದರು. 1927ರಲ್ಲಿ ಮಹಾತ್ಮ ಗಾಂಧೀಜಿಯವರು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಜನತೆಯಲ್ಲಿ ಸ್ವಾತಂತ್ರ್ಯ ದ ಕಿಚ್ಚು ಹತ್ತಿಸಿದ್ದು, ನಾವಿಂದು ನೆನೆಯಬೇಕು ಎಂದರು.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿ ಕಾರ ವಹಿಸಿಕೊಂಡು ಕೆಲವೇ ದಿನಗಳು ಕಳೆದಿದ್ದು, ರಾಜ್ಯದಲ್ಲಿ ನೈಸರ್ಗಿಕ, ರಾಜಕೀಯ, ಆರ್ಥಿಕ, ಆರೋಗ್ಯದಂತಹ ದೊಡ್ಡ ಸವಾಲುಗಳನ್ನು ಎದುರಿಸಬೇಕಿದೆ. ಈ ಎಲ್ಲಾ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವುದಾಗಿ ಹೇಳಿದರು. ರಾಜ್ಯ ಸರ್ಕಾರದಲ್ಲಿ ಗೃಹಖಾತೆ ಮತ್ತು ಜಿಲ್ಲಾ ಉಸ್ತುವಾರಿ ನನ್ನ ಹೆಗಲ ಮೇಲಿದ್ದು, ಗೃಹ ಇಲಾಖೆ ಮತ್ತು ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ. ಗ್ರಾಪಂ ಮಟ್ಟದಿಂದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿ ಮಹಾತ್ಮ ಗಾಂಧೀಜಿಯವರ ಗ್ರಾಮಸ್ವರಾಜ್‌ ಕನಸು ಸಾಕಾರಗೊಳಿಸಲಾಗುವುದು ಎಂದರು. ಸದ್ಯ ದೇಶ ಮತ್ತು ರಾಜ್ಯದಲ್ಲಿ ಕೋವಿಡ್‌ ಸೋಂಕಿನಿಂದ ಜನತೆ ತಲ್ಲಣಗೊಂಡಿದ್ದು, ರೋಗವನ್ನು ಸಮರ್ಥವಾಗಿ ನಿಭಾಯಿಸಲು ಆಡಳಿತಾತ್ಮಕ ಮತ್ತು ಸಂರಕ್ಷಣಾತ್ಮಕ ಕ್ರಮಗಳನ್ನು ಸಕಾಲದಲ್ಲಿ ಕೈಗೊಂಡ ಪರಿಣಾಮ ಸೋಂಕು ನಿಯಂತ್ರಿಸಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಡಳಿತ ಮತ್ತು ಇತರೆ ಇಲಾಖೆ ಸಹಕಾರದಿಂದ ಕೋವಿಡ್‌ ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ ಎಂದರು.

ಕೋವಿಡ್‌ ನಿಯಂತ್ರಣ ಸಲುವಾಗಿ ಸರ್ಕಾರ ವಿ ಧಿಸಿದ್ದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಬಡ ಮತ್ತು ಮದ್ಯಮ ವರ್ಗದ ಜನರಿಗೆ ಸಹಾಯಧನ ನೀಡಲಾಗಿದೆ. ಜಿಲ್ಲೆಯ 1,19,941 ರೈತರಿಗೆ 8 ಕಂತುಗಳಲ್ಲಿ 156.74 ಕೋಟಿ ರೂ. ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ವರ್ಷ ಉಂಟಾದ ಅತಿವೃಷ್ಟಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಜನರ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಸಕಾಲದಲ್ಲಿ ಸ್ಪಂದಿಸಿದೆ. ಈ ಬಾರಿಯ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿಯಾಗಿದ್ದು ಸರ್ಕಾರ ಜನರ ನೆರವಿಗೆ ನಿಂತಿದೆ ಎಂದು ಹೇಳಿದರು.

ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ರಾಜ್ಯದಲ್ಲಿ 17ನೇ ಸ್ಥಾನ ಪಡೆದಿದೆ. 7 ಜನ ವಿದ್ಯಾರ್ಥಿಗಳು ಪೂರ್ಣಾಂಕ ಪಡೆದುಕೊಳ್ಳುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ ಎಂದ ಅವರು, ಗೃಹ ಇಲಾಖೆಯನ್ನು ಇನ್ನಷ್ಟು ಆತ್ಯಾಧುನೀಕರಣಗೊಳಿಸಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಶ್ರಮಿಸುವುದಾಗಿ ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸಿಂಥೆಟಿಕ್‌ ಟ್ರ್ಯಾಕ್‌ ಮತ್ತು ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಡೂರು ತಾಲೂಕಿನ ಅಯ್ಯನಕೆರೆಯಲ್ಲಿ ಸುಸಜ್ಜಿತವಾಗಿ ಜಲಸಾಹಸ ಕ್ರೀಡಾ ತರಬೇತಿ ಚಟುವಟಿಕೆ ಚಾಲನೆಗೆ ರೂ. 4.7ಕೋಟಿ ಅನುದಾನ ಕಾಯ್ದಿರಿಸಲಾಗಿದ್ದು, ರಾಜ್ಯ ವಿಪತ್ತು ನಿರ್ವಹಣೆಗೆ ಒಂದು ಸುಸಜ್ಜಿತ ರಕ್ಷಣಾ ತಂಡವನ್ನು ತಯಾರಿಸುವ ಕಾರ್ಯಕ್ರಮ ಆರಂಭಗೊಂಡಿದೆ. ಇದಕ್ಕೆ ಅಗತ್ಯವಿರುವ 30 ಎಕರೆ ನಿವೇಶನವನ್ನು ಅಯ್ಯನಕೆರೆ ಸಮೀಪದಲ್ಲಿ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದರು.

ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ. ಪ್ರಾಣೇಶ್‌, ಶಾಸಕ ಸಿ.ಟಿ. ರವಿ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಸಿ.ಡಿಎ ಅಧ್ಯಕ್ಷ ಸಿ. ಆನಂದ, ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಎಚ್‌. ಅಕ್ಷಯ್‌, ಜಿಪಂ ಸಿಇಒ ಜಿ. ಪ್ರಭು, ಅಪರ ಜಿಲ್ಲಾಧಿ  ಕಾರಿ ಬಿ.ಸಿ. ರೂಪ, ಉಪವಿಭಾಗಾ ಧಿಕಾರಿ ಡಾ| ಎಚ್‌.ಎಲ್‌.ನಾಗರಾಜ, ತಹಶೀಲ್ದಾರ್‌ ಡಾ| ಕೆ.ಜೆ. ಕಾಂತರಾಜ್‌, ಎಎಸ್‌ಪಿ ಶೃತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next