Advertisement

Udayavani Campaign-ನಮಗೆ ಬಸ್ ಬೇಕೇ ಬೇಕು:ದಯವಿಟ್ಟು ಈ ಹೆಣ್ಮಕ್ಕಳ ಸಮಸ್ಯೆ ಕೇಳಿ…

04:46 PM Jun 17, 2024 | Team Udayavani |

ಕುಂದಾಪುರ: ಸರಿಯಾದ ಬಸ್‌ ವ್ಯವಸ್ಥೆ ಇಲ್ಲದೆ ಇದ್ದರೆ ವಿದ್ಯಾರ್ಥಿ ಸಮುದಾಯ ದೊಡ್ಡ ಮಟ್ಟದ ತೊಂದರೆ ಅನುಭವಿಸುತ್ತದೆ. ಅದೆಷ್ಟೋ ಮಂದಿ ಬಸ್ಸಿಲ್ಲ ಎಂಬ ಕಾರಣಕ್ಕೆ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗಂತೂ ಕಾಲೇಜಿಗೆ ಹೋಗುವುದೇ ಬೇಡ ಎಂದು ಹೇಳುವ ಹೆತ್ತವರೂ ಇದ್ದಾರೆ. ಒಂದೊಮ್ಮೆ ಕಾಡಿಬೇಡಿ
ಕಾಲೇಜಿಗೆ ಹೋಗುವುದಕ್ಕೆ ಅವಕಾಶ ಸಿಕ್ಕಿದರೂ ನಿರ್ಜನ ಪ್ರದೇಶದ ನಡಿಗೆ, ಬಸ್ಸಿಗಾಗಿ ಕಾಯು ವಿಕೆ, ತುಂಬಿ ತುಳುಕುವ ಬಸ್ಸಿನಲ್ಲಿ ಎದುರಾಗುವ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಲೇ ಅವರು ಶಿಕ್ಷಣ ಪಡೆಯಬೇಕು. ಹೀಗೆ ಹಲವು ಸಮಸ್ಯೆಗಳ ಸುಳಿಯಲ್ಲಿರುವ ವಿದ್ಯಾ ರ್ಥಿನಿಯರ ಪೈಕಿ ಕೆಲವರು ತಾವು ಎದುರಿಸುತ್ತಿರುವ ಬಸ್‌ ಸಂಕಷ್ಟವನ್ನು ಉದಯವಾಣಿ ಜತೆ ಹಂಚಿಕೊಂಡಿದ್ದಾರೆ.

Advertisement

ಕಾಂತಾರದ ಕೆರಾಡಿಯ ಸ್ಟೋರಿ
ಇವರ ಹೆಸರು ದೀಕ್ಷಿತಾ. ಕಾಂತಾರ ಸಿನಿಮಾ ಚಿತ್ರೀಕರಣ ಆದ ಕೆರಾಡಿಯ ಮೂಡುಗಲ್ಲಿನವರು. ಅವರು ಬಸ್ಸಿನ ಕಥೆ  ವಿವರಿಸುವುದು ಹೀಗೆ; ಕೆರಾಡಿಯಿಂದ ಬೆಳಗ್ಗೆ 8.10ಕ್ಕೆ ಹೊರಡುವ ಬಸ್‌ ತುಂಬಿ ತುಳುಕುತ್ತದೆ. ಕುಂದಾಪುರ ತಲುಪುವಾಗ ಹರೋಹರ. ಸಂಜೆಯೂ ಅದೇ ವ್ಯಥೆ. ಬೆಳ್ಳಾಲ ಮೂಲಕ ಕೆರಾಡಿಯಿಂದ ಬರುವ ಬಸ್‌ ಬೆಳಗ್ಗೆ 6.30ಕ್ಕೆ ಹೊರಡುತ್ತದೆ. ಈ ಬಸ್ಸು ಹೊರಡುವ ಸಮಯ ದಿನಕ್ಕೊಂದು. ಹೀಗಾಗಿ ಹಲವರಿಗೆ ಈ ಬಸ್‌ ತಪ್ಪುತ್ತದೆ.

ಬಸ್‌ ಕುಂದಾಪುರ ತಲುಪುವಾಗ 9.30 ಆಗುವ ಕಾರಣ ಕೆಲ ಮಕ್ಕಳಿಗೆ ಬೇರೆ ಬೇರೆ ಕಾಲೇಜುಗಳ ಮೊದಲ ತರಗತಿಗೆ ಪ್ರವೇಶವೇ ಸಿಗುವುದಿಲ್ಲ. ನಮಗೆ ಕೆರಾಡಿಯಲ್ಲಿ ಇಳಿದು ಸುಮಾರು 3.5 ಕಿ.ಮೀ. ನಡೆಯಬೇಕು. ಕುಂದಾಪುರದಿಂದ ಕೆರಾ ಡಿ ಗೆ ಮಧ್ಯಾಹ್ನ 2.30ಕ್ಕೆ ಖಾಸಗಿ ಬಸ್‌ ಇದೆ. ಅದು ತಪ್ಪಿದರೆ 4.15ಕ್ಕೆ ಸರಕಾರಿ ಬಸ್‌. ಅವರ ಜತೆಗೆ ಧ್ವನಿಗೂಡಿಸುವ ಕೆರಾಡಿ ಕಾಲೇಜು ಬಳಿಯ ಐಶ್ವರ್ಯ. ಕೆರಾಡಿ ದೀಟಿ ಎಂಬಲ್ಲಿನ ಪ್ರಗತಿ, ಶ್ರೀಲತಾ, ಅರ್ಪಿತಾ ಅವರಿಗೂ ಬಸ್ಸಿಳಿದು ಅರ್ಧ ಗಂಟೆ ನಡೆಯಲು ಇದೆ. ಆದ್ದರಿಂದ ಈ ಭಾಗಕ್ಕೆ ಹೆಚ್ಚುವರಿ ಬಸ್‌ ಬೇಕೆನ್ನುತ್ತಾರೆ.

ಅರೆದಿನವಾದರೂ ಯರುಕೋಣೆಗೆ ಸಂಜೆಯೇ ಹೋಗಬೇಕು

ಶಾಲೆ, ಕಾಲೇಜು ಅರ್ಧ ದಿನವೇ ಆದರೂ ಯರುಕೋಣೆಗೆ ಹೋಗಬೇಕಾದರೆ ಸಂಜೆವರೆಗೆ ಕಾಯಬೇಕು. ಮಧ್ಯಾಹ್ನ ವೇಳೆ ಬಸ್ಸೇ ಇಲ್ಲ. ಹೀಗಂತ ಬಸ್ಸಿನ ಕುರಿತಾದ ದೂರು ಬಿಚ್ಚಿಡುತ್ತಾರೆ ಹೊಸಾಡುವಿನ ಪಲ್ಲವಿ, ಯರುಕೋಣೆಯ ಮುಡ್ಲಿಗೇರಿಯ ಕೀರ್ತನಾ, ಯರುಕೋಣೆಯ ಅನನ್ಯಾ. ಇಲ್ಲಿನ ಸರಕಾರಿ ಜೂನಿಯರ್‌ ಕಾಲೇಜಿಗೆ ನಿತ್ಯ ಊರಿಂದ ಬರುವ ಇವರಿಗೆ ಒಂದು ಬಸ್‌ ದಿನದಲ್ಲಿ 3 ಓಡಾಟ ನಡೆಸುತ್ತದೆ. ಸಂಜೆ 4 ಗಂಟೆಗೆ ಕುಂದಾಪುರದಿಂದ ಹೊರಡುತ್ತದೆ. ಜೋರು ಮಳೆ ಬಂದರೆ ಕೂಡಾ ಕೆಲವೊಮ್ಮೆ
ಬಸ್‌ ಸಂಚಾರ ಸದ್ದಿಲ್ಲದೇ ರದ್ದಾಗಿರುತ್ತದೆ. ಬಸ್ಸು ಬರುವುದಿಲ್ಲ ಎಂದು ಗೊತ್ತಾಗುವುದೂ ಇಲ್ಲ. ಶನಿವಾರ ಅಥವಾ ಇನ್ನಾವುದೇ
ದಿನ ಮಧ್ಯಾಹ್ನವೇ ಕಾಲೇಜು ಬಿಟ್ಟರೆ ಈ ಭಾಗದ ಮಕ್ಕಳು ಸಂಜೆ 4 ಗಂಟೆವರೆಗೆ ಕಾಯಲೇಬೇಕು. ಹಾಗಾಗಿ ಶನಿವಾರ ಬರದೇ ಇರಲಿ, ಇಡೀ ದಿನ ಕಾಲೇಜಿರಲಿ ಎಂದೇ ಈ ಮಕ್ಕಳು ಪ್ರಾರ್ಥಿಸಬೇಕು.

Advertisement

ಆಜ್ರಿಯಿಂದ ಬರುವವರ ಗೋಳು
ಈಕೆಯದ್ದು ಇನ್ನೊಂದು ಊರು ಇನ್ನೊಂದು ಕಥೆ. ಇಲ್ಲಿನ ಜೂನಿಯರ್‌ ಕಾಲೇಜಿಗೆ ದ್ವಿ.ಪಿಯುಸಿಗೆ ಬರುವ ಆಜ್ರಿ ರಾಮನಕೊಡ್ಲುವಿನ ದೀಪಿಕಾ ಹಾಗೂ ಐಶ್ವರ್ಯಾ ಅವರಿಗೆ ಬಸ್ಸೇರಲು ಮನೆಯಿಂದ ಮುಕ್ಕಾಲು ಗಂಟೆಯ ನಡಿಗೆ. ಬೆಳಗ್ಗೆ 8.10ಕ್ಕೆ ಸಿದ್ದಾಪುರದಿಂದ ಬರುವ ಬಸ್ಸು 9 ಗಂಟೆಗೆ ಕುಂದಾಪುರ ತಲುಪುತ್ತದೆ. ಈ ಬಸ್‌ ತಪ್ಪಿದರೆ ನಂತರದ ಬಸ್‌ ಇರುವುದು ಮಧ್ಯಾಹ್ನ 1.45ಕ್ಕೆ. ಖಾಸಗಿ ಬಸ್ಸೊಂದು 8.45ಕ್ಕೆ ಇದ್ದರೂ ಕುಂದಾಪುರ ತಲುಪುವಾಗ ಗಂಟೆ 10 ಆಗಿರುತ್ತದೆ. ಮರಳಿ ಹೋಗಲು ಕುಂದಾಪುರದಿಂದ 3.45 ಹಾಗೂ 4.45ಕ್ಕೆ ಬಸ್ಸುಗಳಿವೆ. ಇವೆರಡು ಬಸ್ಸು ತಪ್ಪಿದರೆ ಸರಕಾರಿ ಬಸ್ಸೇ ಇಲ್ಲ. ಶನಿವಾರ ಮಧ್ಯಾಹ್ನ ಕಾಲೇಜು ಬಿಟ್ಟರೆ 3.45ರ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯಬೇಕು.

ಸಂಜೆ ವೇಳೆ ನೇರ ಬಸ್ಸೇ ಇಲ್ಲ
ಉಳ್ಳೂರು 74ರ ಸಂಗೀತಾ ಅವರಿಗೆ ಬೆಳಗ್ಗೆ 7.30ಕ್ಕೆ ಬಸ್‌. ಅದಕ್ಕಿಂತ ಮೊದಲು ಐರಬೈಲಿನಿಂದ ಉಳ್ಳೂರು 74ರವರೆಗೆ ಒಂದೂ ಮುಕ್ಕಾಲು ಗಂಟೆ ನಡೆದೇ ಬರಬೇಕು. 7.30ಕ್ಕೆ ಹೊರಟ ಬಸ್‌ ಕುಂದಾಪುರ ತಲುಪುವುದು 9.15ಕ್ಕೆ. ಸಂಜೆ ಉಳ್ಳೂರು 74ಕ್ಕೆ ಸರಕಾರಿ ಬಸ್ಸೇ ಇಲ್ಲ. ಸಿದ್ದಾಪುರಕ್ಕೆ ಹೋಗಿ ಅಲ್ಲಿಂದ ಐರಬೈಲಿಗೆ ಹೋಗಬೇಕು. ಊರು ತಲುಪುವಾಗ 6.30. ಕಾಡು ದಾರಿ. ನಿರ್ಜನ ಪ್ರದೇಶ. ಹಾಗಿದ್ದರೂ ಶಿಕ್ಷಣದ ಸಲುವಾಗಿ ನಿತ್ಯ ಪ್ರಯಾಣ ಅನಿವಾರ್ಯ.

ಅರೆಹೊಳೆ ಕ್ರಾಸ್‌ ನಲ್ಲಿ ಕುಳಿತು ಹಾಕಿದ ಕಣ್ಣೀರಿಗೆ ಲೆಕ್ಕವೇ ಇಲ್ಲ
ಬೈಂದೂರು ತಾಲೂಕಿನ ಎಲ್ಲೂರು, ಬ್ಯಾಟ್ಯಾಣಿ, ಕಾಲ್ತೋಡಿನಿಂದ ಬೆಳಗ್ಗೆ ಕುಂದಾಪುರಕ್ಕೆ ಹೋಗಲು ಒಂದು ಸರಕಾರಿ ಬಸ್‌ ಮಾತ್ರ ಇದೆ. ಆ ಹೊತ್ತಿನಲ್ಲಿ ಖಾಸಗಿ ಬಸ್‌ ಕೂಡಾ ಇಲ್ಲ. ಆ ಭಾಗದ 200ಕ್ಕೂ ಅಧಿಕ ವಿದ್ಯಾರ್ಥಿಗಳು ಬೈಂದೂರು, ಖಂಬದಕೋಣೆ, ನಾವುಂದ, ಹೆಮ್ಮಾಡಿ, ಕುಂದಾಪುರದ ಬೇರೆ ಬೇರೆ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಅವರಿಗೆಲ್ಲ ಬಸ್‌ ಸಮಸ್ಯೆ ಕಾಡುತ್ತಿದೆ. 50 ಸೀಟ್‌ ಹಾಕುವ ಒಂದು ಬಸ್ಸಿನಲ್ಲಿ ನೂರಾರು ಜನರನ್ನು ಜಾನುವಾರುಗಳ ರೀತಿ ತುಂಬ  ಬೇಕಾದ ಅನಿವಾರ್ಯತೆ ಇದೆ. ಪರಿಸ್ಥಿತಿ ಹೇಗಿದೆ ಎಂದ ರೆ ಯರುಕೋಣೆ ನಂತರ ಬರುವ ಎಲ್ಲಾ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಬಿಟ್ಟೇ ಬರಬೇಕಾಗುತ್ತದೆ. ಅಷ್ಟಾದರೂ ಸಮಯ ಪಾಲನೆ ಮಾಡಲಾಗದೆ ಹೆಚ್ಚಿನವರಿಗೆ ಮೊದಲ ಅವಧಿ ಮಿಸ್‌ ಆಗುತ್ತದೆ.

ಇದು ಬೆಳಗ್ಗಿನ ಕಥೆಯಾದರೆ ಸಂಜೆಯದು ಇನ್ನಷ್ಟು ಭೀಕರ. ಸಂಜೆ ಕಾಲೇಜಿನಿಂದ ಹೊರಟು ಓಡೋಡಿ ಬಂದರೂ ಸಂಗಮ್‌
ಬಸ್ಸು ನಿಲ್ದಾಣ ತಲುಪಲು ಕೇವಲ ಒಂದು ನಿಮಿಷ ತಡವಾದರೂ ಕಣ್ಣೆದುರೇ ಬಸ್‌ ಹಾದು ಹೋದದ್ದಿದೆ. ಇನ್ನು ಬಸ್‌ ಸಿಕ್ಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅರೆ ಹೊಳೆ ಕ್ರಾಸಿನಲ್ಲಿ ನಾನು ಇಳಿದರೂ ಮನೆಗೆ ಹೋಗಲು ಮತ್ತೆ 16 ಕಿ.ಮೀ ಪ್ರಯಾಣಿಸಬೇಕು. ನನ್ನನ್ನು ಕರೆದು ಕೊಂಡು ಹೋಗಲು ಮನೆಯಿಂದ ಯಾರಾ ದರೂ ಬರಬೇಕು. ಅದೆಷ್ಟೋ ಸಲ ಅರೆಹೊಳೆ ಕ್ರಾಸ್‌ನಲ್ಲಿ 7 ಗಂಟೆಯವರೆಗೆ ಮನೆಯವರಿಗಾಗಿ ಕಾದಿದ್ದೂ ಇದೆ. ಯಾರೂ ಗೊತ್ತಿಲ್ಲದ ಜಾಗದಲ್ಲಿ ಏನಾದೀತೋ ಎಂಬ ಭಯದಲ್ಲಿ ಕಾಲೇಜು ಆರಂಭದ ದಿನಗಳಲ್ಲಿ ಕಣ್ಣೀರು ಹಾಕಿದ್ದಕ್ಕೆ ಲೆಕ್ಕವೇ ಇಲ್ಲ. ಬೆಳಗ್ಗೆಯಿಂದ ಸಂಜೆಯವರೆಗಿನ ಈ ಬಸ್ಸಿನ ಜಂಜಾಟದಿಂದ ಮಾನಸಿಕ ಹಿಂಸೆಯಾಗಿದ್ದು, ತರಗತಿಯಲ್ಲೂ ಸರಿಯಾಗಿ ಪಾಠ ಕೇಳಲು ಆಗುವುದಿಲ್ಲ. ನಮ್ಮ ಸಮಸ್ಯೆ ಇವರಿಗೆ ಅರ್ಥವಾಗಿ ಯಾವಾಗ ಹೆಚ್ಚು ವರಿ ಬಸ್‌ ವ್ಯವಸ್ಥೆ ಮಾಡುತ್ತಾರೋ? ಎಂದು ಕುಂದಾಪುರದ ಡಾ| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ರಶ್ಮಿತಾ ಜೈನ್‌ ಅಳಲು ತೋಡಿಕೊಂಡಿದ್ದಾರೆ.

*ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next