Advertisement

Udayavani ಅಭಿಯಾನ: ನೈಸರ್ಗಿಕ ಆರಾಧನೆಗೆ ಸಕಾಲ

08:47 AM Sep 06, 2024 | Team Udayavani |

ಗಣಪತಿ ವಿಗ್ರಹವನ್ನು ಮಣ್ಣಿನಿಂದ ಮಾಡುವುದು ಕ್ರಮ. ಪುರಾಣಗಳ ಕಥೆಯಲ್ಲಿಯೂ ಹೀಗೆಯೇ ಇದೆ. ಭಾದ್ರಪದ ಮಾಸದ ಚತುರ್ಥಿ ದಿನವೇ ಮಣ್ಣು ತಂದು ವಿಗ್ರಹವನ್ನು ತಯಾರಿಸಿ ಪೂಜಿಸುವ ಕ್ರಮವಿತ್ತು. ಸಾರ್ವಜನಿಕ ಸ್ವರೂಪ ಬರುವ ಮುನ್ನ ಅದೇ ದಿನ ನೀರಿನಲ್ಲಿ ವಿಗ್ರಹವನ್ನು ವಿಸರ್ಜಿಸುತ್ತಿದ್ದರು. ಒಂದರ್ಥದಲ್ಲಿ ಪೂಜೆಯಲ್ಲಿಯೂ ತಾಜಾ ತನದ ಪರಾಕಾಷ್ಠೆ ಇದೆನ್ನಬಹುದು.

Advertisement

ಕಾಲಕ್ರಮೇಣ ಪೂಜಾಕ್ರಮದಲ್ಲಿಯೂ ಬದಲಾವಣೆಗಳಾದವು. ಅಂದಚಂದದ ಕಲ್ಪನೆ ಬಂದಂತೆ ಮಣ್ಣಿನ ವಿಗ್ರಹಕ್ಕೂ ಪ್ರಸಾಧನದ ಅಗತ್ಯ ಕಂಡುಬಂತು. ಇದು ವಿಪರೀತವಾದ ಕಾರಣ ಸರಕಾರವೂ ನೈಸರ್ಗಿಕ ಬಣ್ಣವನ್ನೇ ಬಳಸಿ ಎಂದು ಸುತ್ತೋಲೆ ಹೊರಡಿಸುವಂತಾಯಿತು. ನೈಸರ್ಗಿಕ ಬಣ್ಣವನ್ನು ಮಾರುಕಟ್ಟೆಗೆ ಪೂರೈಸದಿದ್ದರೂ ಸುತ್ತೋಲೆ, ಮಾರ್ಗದರ್ಶನ, ಹುಕುಂ, ಆದೇಶವನ್ನು ಸರಕಾರ ಹೊರಡಿಸದೆ ಇನ್ನಾರು ಹೊರಡಿಸುವುದು? ವರ್ಷವರ್ಷ ಹೊಸ ಹೊಸ ಹುಕುಂ ಹೊರಡಿಸುವುದು ಪದ್ಧತಿಯೂ ಆಗಿಬಿಟ್ಟಿದೆ.

ಕಾಸ್ಮೆಟಿಕ್ಸ್ ಬಳಕೆಯಿಂದ ರೋಗಗಳು ಬರುತ್ತವೆ ಎಂದು ವೈದ್ಯಜಗತ್ತು ಎಚ್ಚರಿಸುತ್ತಲೇ ಇರುತ್ತವೆ. ಆದರೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಆದರೆ ಧಾರ್ಮಿಕ ವಿಚಾರದಲ್ಲಿ ಒಂದೊಂದು ವರ್ಗ ಒಂದೊಂದು ಬಗೆಯಾಗಿ ದೇಶ-ಕಾಲ-ವಸ್ತು ಆಧರಿಸಿ ವಿಮರ್ಶೆ ನಡೆಸುತ್ತದೆ. ಇದರಿಂದ ಸಾಮಾಜಿಕ ಹಾನಿಯೂ ಉಂಟಾಗುತ್ತದೆ.

ಒಟ್ಟಾರೆಯಾಗಿ ಜಗತ್ತಿನಲ್ಲಿ ನಡೆಯುತ್ತಿರುವ ಮಾಲಿನ್ಯಕ್ಕೆ ಹೋಲಿಸಿದರೆ ಗಣೇಶನ ವಿಗ್ರಹಕ್ಕೆ ಹಾಕಿದ ಬಣ್ಣದಿಂದ ಆಗುವ ಮಾಲಿನ್ಯ ತಿಲಮಾತ್ರದಷ್ಟೂ ಅಲ್ಲ. ಆದರೂ ಬೇರೆ ಯಾವ ಮಾಲಿನ್ಯವನ್ನೂ ತಡೆಗಟ್ಟಲು ಆಗದಿದ್ದರೂ ಧಾರ್ಮಿಕ ವಿಚಾರದ ಮಾಲಿನ್ಯದ ಬಗ್ಗೆ ದೊಡ್ಡ ಬೊಬ್ಬೆ ಹೊಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದಕ್ಕೆ ಪೂರಕವಾಗಿ ನೈಸರ್ಗಿಕ ಬಣ್ಣದಿಂದಲೇ ತೃಪ್ತಿಗೊಂಡು ಗಣೇಶನ ವಿಗ್ರಹವನ್ನು ಮನೆಮನೆಗಳಲ್ಲಿ ಪೂಜಿಸುತ್ತಿರುವುದು ಉತ್ತಮ ವಿಚಾರ. ಕನಿಷ್ಠ ಪ್ರಮಾಣದ ಬಣ್ಣಗಳು ಬೇಕಿದ್ದರೆ ಅರಶಿನ, ಕುಂಕುಮ, ಹಸುರು ಎಲೆಗಳ ಪುಡಿ, ಕಾಡಿಗೆಯಂತಹ ನೈಸರ್ಗಿಕ ಬಣ್ಣಗಳನ್ನು ಬಳಸಬಹುದು. “ಉದಯವಾಣಿ’ ಪತ್ರಿಕೆ ಹಲವು ವರ್ಷಗಳಿಂದ ಇದರ ಬಗ್ಗೆ ಜನಜಾಗೃತಿ ಮೂಡಿಸುತ್ತಿದೆ. ಇದರ ಪರಿಣಾಮವಾಗಿ ವರ್ಷವರ್ಷದಿಂದ ವರ್ಷಕ್ಕೆ ರಾಸಾಯನಿಕ ಬಣ್ಣರಹಿತ ಗಣಪತಿ ವಿಗ್ರಹಗಳನ್ನು ತಯಾರಿಸುವ ಕಲಾವಿದರ ಸಂಖ್ಯೆ ಹೆಚ್ಚುತ್ತಿದೆ.

ಮನೆಗಳಲ್ಲಿ ಗಣಪತಿ ಪೂಜೆ ಮಾಡುವವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾವೇ ಅದೇ ದಿನ ಗದ್ದೆಯಿಂದ ಮಣ್ಣು ತಂದು ಸಾಮಾನ್ಯ ರೀತಿಯಲ್ಲಿ ವಿಗ್ರಹ ತಯಾರಿಸಿ ಪೂಜಿಸಿದರೆ ಬಹಳ ಪ್ರಾಚೀನ ಜನಜೀವನಕ್ರಮಕ್ಕೆ ಹೋದಂತಾಗುತ್ತದೆ. ಬಹಳ ಕಡಿಮೆ ಸಂಖ್ಯೆಯಲ್ಲಾದರೂ ಇಂತಹ ವಿಧಾನ ಆರಂಭವಾದರೆ ಅದನ್ನು ಸಾಮಾನ್ಯ ಎಂದು ಹೇಳಲಾಗದು. ಆದರೆ ಈಗ ಭತ್ತ ಬೆಳೆಯಲೂ ಗದ್ದೆಗಳು ಇಲ್ಲದಿರುವಾಗ (ಪಾಳು ಬಿದ್ದಿರುವಾಗ) ಭೂಮಿಯ ಸ್ಥಿತಿ ಹೇಗಿರಬಹುದು ಎಂದು ಯೋಚಿಸಬಹುದು. ಇವೆಲ್ಲವೂ ಮುಂಬರುವ ದಿನಗಳ ಕರಾಳಮುಖವನ್ನು ಮುನ್ಸೂಚಿಸುತ್ತದೆ. ಆ ದಿನಗಳು ಬರದೆ ಇರುವಂತಾಗಲೆಂದು ಗಣೇಶ ಚತುರ್ಥಿಯ ಶುಭವಸರದಲ್ಲಿ ವಿಘ್ನನಿವಾರಕನಲ್ಲಿ ಬೇಡಿಕೊಳ್ಳದೆ ಬೇರೆ ದಾರಿ ಇಲ್ಲ.

Advertisement

-ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next