Advertisement

ವಿಎಸ್‌ ಕೆ ವಿವಿಯಲ್ಲಿ ಪದವಿ ಶಿಕ್ಷಣ ಲಭ್ಯ

05:55 PM Sep 04, 2021 | Team Udayavani |

ಬಳ್ಳಾರಿ: ಸ್ನಾತಕೋತ್ತರ (ಪೋಸ್ಟ್‌ ಗ್ರಾಜ್ಯುಯೇಷನ್‌) ಶಿಕ್ಷಣ ನೀಡಲಷ್ಟೇ ಸೀಮಿತವಾಗಿದ್ದ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಆವರಣದಲ್ಲಿ ಇನ್ನು ಮುಂದೆ ಪದವಿ ಶಿಕ್ಷಣವೂ (ಯುಜಿ) ದೊರೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿದ್ಯಾವಿಷಯಕ ಪರಿಷತ್‌, ಸಿಂಡಿಕೇಟ್‌ ಸಭೆಯಲ್ಲಿ ಅನುಮೋದನೆ ಲಭಿಸಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‌ಇಪಿ) ಅನ್ವಯ ಚಾಲನೆ ಪಡೆದುಕೊಳ್ಳಲಿದೆ.

Advertisement

ಈ ಮೂಲಕ ವಿವಿ ಆವರಣದಲ್ಲಿ ಪದವಿ ಪ್ರವೇಶ ಆರಂಭಿಸಿರುವ ರಾಜ್ಯದ ಪ್ರಥಮ ವಿವಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಬಳ್ಳಾರಿಯಲ್ಲಿನ ವಿಎಸ್‌ಕೆ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ವಿಜ್ಞಾನ ನಿಕಾಯದಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ವಿಷಯಗಳ ಬಿಎಸ್ಸಿ ಪದವಿ, ವಾಣಿಜ್ಯ ನಿಕಾಯದಿಂದ ಬಿ.ಕಾಂ ಪದವಿ ಕೋರ್ಸ್‌ಗಳು ಹಾಗೂ ಯಲಬುರ್ಗಾ ಸ್ನಾತಕೋತ್ತರ ಕೇಂದ್ರದಲ್ಲಿ ಸಮಾಜ ವಿಜ್ಞಾನ ನಿಕಾಯದ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯಗಳ ಬಿ.ಎ ಪದವಿ, ವಾಣಿಜ್ಯ ನಿಕಾಯದ ಬಿ.ಕಾಂ ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗುವುದು ಎಂದು ವಿವಿ ಕುಲಪತಿ ಪ್ರೊ| ಸಿದ್ದು ಪಿ.ಅಲಗೂರು ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ, ಕಲ್ಯಾಣ-ಕರ್ನಾಟಕ ಭಾಗದಲ್ಲಿ ಕೈಗೆಟಕುವ ಮತ್ತು ಗುಣಮಟ್ಟದ ಪದವಿ ಕೋರ್ಸ್‌ಗಳನ್ನು ಆರಂಭಿಸುತ್ತಿರುವುದರಿಂದ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ. ವಿಶ್ವವಿದ್ಯಾಲಯದ ವ್ಯಾಪ್ತಿಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ಭವಿಷ್ಯದ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಬೇಕು ಎಂದು ಕುಲಪತಿಗಳು ಹೇಳಿದರು.

ಈ ಭಾಗದ ವಿದ್ಯಾರ್ಥಿಗಳಿಗೆ ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಬದಲಾವಣೆ ಕಾಣಿಸಲಿದೆ. ಈ ನೀತಿಯ ಕೂಲಂಕಷ ಚೌಕಟ್ಟುಗಳ ಕುರಿತು ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಿಗೆ ಜಾಗೃತಿ ಮೂಡಿಸುವ ಕಾರ್ಯವೂ ವಿಶ್ವವಿದ್ಯಾಲಯದ ಪರವಾಗಿ ಈಗಾಗಲೇ ಆರಂಭವಾಗಿದೆ. ಈ ವರ್ಷದಿಂದ ಜಾರಿಗೆ ಬಂದಿರುವ ಹೊಸ ಶಿಕ್ಷಣ ನೀತಿಯ ಸಕಲ ಕಾರ್ಯವೈಖರಿಗಳನ್ನು ಅಳವಡಿಸಿಕೊಂಡು ಮುನ್ನಡೆಯುವತ್ತ ಹೆಜ್ಜೆ ಇರಿಸಿರುವ ವಿಶ್ವವಿದ್ಯಾಲಯದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ಪಡೆದು ಕೋರ್ಸ್‌ಗಳ ಪ್ರಯೋಜನ ಪಡೆದುಕೊಳ್ಳಬಹುದು.

ಈಗಾಗಲೇ ಪ್ರವೇಶ ಅರ್ಜಿಗಳು ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಅಥವಾ ಪೋಷಕರು ವಿಶ್ವವಿದ್ಯಾಲಯಕ್ಕೆ ಖುದ್ದು ಭೇಟಿ ನೀಡಿ ಇಲ್ಲವೇ ವಿಶ್ವವಿದ್ಯಾಲಯದ ವೆಬ್‌ ಸೈಟ್‌ //www.vskub.ac.in/ನಿಂದ ಮಾಹಿತಿ ಪಡೆಯಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next