Advertisement
ದಾವಣಗೆರೆ : ಪ್ರಾದೇಶಿಕ ಸಾರಿಗೆ ಪ್ರಾಧಿ ಕಾರ ಸೆ. 1ರ ಒಳಗೆ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿರುವುದು ಸಾರ್ವಜನಿಕ ಮತ್ತು ಆಟೋರಿಕ್ಷಾ ಚಾಲಕರು, ಮಾಲೀಕ ವರ್ಗದಲ್ಲಿ ಜಿಜ್ಞಾಸೆ, ಗೊಂದಲಕ್ಕೆ ಕಾರಣವಾಗುತ್ತಿದೆ. ಕಳೆದ ಆ. 30 ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಪರಿಷ್ಕರಣೆ ಜೊತೆಗೆ ಎಲ್ಲ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಸೆ. 1ರ ಒಳಗೆ ಮೀಟರ್ ಅಳವಡಿಸಲೇಬೇಕು ಎಂದು ಆದೇಶಿಸಿರುವುದನ್ನ ಕೆಲವರು ಸ್ವಾಗತಿಸಿದರೆ, ಇನ್ನು ಕೆಲವರು ಗೊಂದಲಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇನ್ನೊಮ್ಮೆ ಸಾರ್ವಜನಿಕರು, ಆಟೋರಿಕ್ಷಾ ಚಾಲಕರು, ಮಾಲಿಕರೊಡನೆ ಕೂಲಂಕುಷವಾಗಿ ಚರ್ಚಿಸಿದ ನಂತರವೇ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Related Articles
Advertisement
ಸಾರ್ವಜನಿಕರು, ಆಟೋರಿಕ್ಷಾ ಚಾಲಕರು, ಮಾಲೀಕರ ವರ್ಗದಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ.ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಏರಿಳಿತ ಆಗುತ್ತಿರುತ್ತದೆ. ಯಾವ ದರದ ಆಧಾರದಲ್ಲಿ ಆಟೋರಿಕ್ಷಾ ಬಾಡಿಗೆ ದರ ಪರಿಷ್ಕರಣೆ ಮಾಡಲಾಗುತ್ತದೆ. ಇಂದಿನ ರೇಟ್ ಆಧಾರದಲ್ಲಿ ಬಾಡಿಗೆ ಫಿಕ್ಸ್ ಮಾಡಿದರೆ ನಾಳೆ ಏಕಾಏಕಿ ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಹೆಚ್ಚಾದರೆ ಆಟೋದವರಿಗೆ ಕಷ್ಟವಾಗುತ್ತದೆ ಎನ್ನುತ್ತಾರೆ ಕೆಲವು ಆಟೋರಿಕ್ಷಾ ಚಾಲಕರು ಮತ್ತು ಮಾಲೀಕರು.
ಹಾಗಾಗಿ ಸಂಬಂಧಪಟ್ಟವರು ಆಟೋರಿಕ್ಷಾಗಳಲ್ಲಿ ಮೀಟರ್ ಅಳವಡಿಕೆ, ದರ ಪರಿಷ್ಕರಣೆ ಕುರಿತಂತೆ ಮತೊಮ್ಮೆ ಗಮನ ಹರಿಸಬೇಕು ಎಂಬ ಒತ್ತಾಯ ಸಾರ್ವಜನಿಕ, ಆಟೋರಿಕ್ಷಾ ವಲಯದಿಂದ ಕೇಳಿ ಬರುತ್ತಿದೆ.
ದಾವಣಗೆರೆ : ಆಟೋರಿಕ್ಷಾಗಳಲ್ಲಿ ಮೀಟರ್ ಅಳವಡಿಸಲಾಗುವುದು ಎಂಬ ಆದೇಶ ಇದೇ ಮೊದಲೇನಲ್ಲ 1997-98 ರಲ್ಲಿ 5 ರೂಪಾಯಿ ಬಾಡಿಗೆ ಇದ್ದ ಸಂದರ್ಭದಲ್ಲೇ ಆಟೋರಿಕ್ಷಾಗಳಲ್ಲಿ 7 ರೂಪಾಯಿ ಕನಿಷ್ಟ ಬಾಡಿಗೆ ನಿರ್ಧರಿಸಿ ಮೀಟರ್ ಅಳವಡಿಕೆ ಮಾಡಲಾಗಿತ್ತು. ಆದರೆ ಹೆಚ್ಚು ದಿನ ಮೀಟರ್ ಬಾಡಿಗೆ ಪ್ರಕ್ರಿಯೆ ಮುಂದುವರೆಯಲೇ ಇಲ್ಲ. 2019 ರ ನ. 29 ರಂದು ಅಂದಿನ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನ. 1 ರಿಂದಲೇ ಮೀಟರ್ ಕಡ್ಡಾಯಗೊಳಿಸಲು ತೀರ್ಮಾನ ಕೈಗೊಳ್ಳಲಾಗಿತ್ತು.
ಆದರೆ ದಾವಣಗೆರೆಯ ಹಲವಾರು ಭಾಗದಲ್ಲಿ ರಸ್ತೆಗಳೇ ಸರಿ ಇಲ್ಲ, ಮೀಟರ್ ಜಂಪಿಂಗ್ ಆಗುತ್ತದೆ, ಜನರು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಮೀಟರ್ ಅಳವಡಿಕೆ ಮರೀಚಿಕೆಯಾಗಿತ್ತು. ಈಗ ಮತ್ತೆ ಆಟೋರಿಕ್ಷಾಗಳಲ್ಲಿ ಸೆ.1 ರ ಒಳಗೆ ಮೀಟರ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಕೊರೊನಾ ಸಂಕಷ್ಟದಲ್ಲಿ ಆಟೋರಿಕ್ಷಾ ಚಾಲಕರು, ಮಾಲೀಕರು ಮಾತ್ರವಲ್ಲ ಸಾರ್ವಜನಿಕರು ಜೀವನ ನಡೆಸುವುದು ಕಷ್ಟವಾಗಿದೆ. ಸಂಕಷ್ಟದ ಸಮಯದಲ್ಲಿ ಮೀಟರ್ ಅಳವಡಿಕೆ ಸರಿಯೇ ಎಂಬುದು ಸಾರ್ವಜನಿಕರು, ಆಟೋರಿಕ್ಷಾ ಚಾಲಕರು, ಮಾಲೀಕರ ಆಕ್ಷೇಪ.