ನೀವು ಇದನ್ನು ಗಮನಿಸಿದ್ದೀರಾ? ಜಾದೂಗಾರ ವೇದಿಕೆ ಮೇಲೆ ಬಂದು ಒಂದು ಟಿಶ್ಯೂ ಕಾಗದವನ್ನು ತೋರಿಸುತ್ತಾನೆ. ಅದನ್ನು ಹರಿದು, ಉಂಡೆಯ ಥರ ಮಾಡಿ ಎಡಗೈಯಲ್ಲಿ ಹಿಡಿದುಕೊಂಡಿರುತ್ತಾನೆ. ನಂತರ ಪೆನ್ನನ್ನು ತೆಗೆದು ಆ ಕಾಗದದ ಉಂಡೆಯ ಮೇಲೆ ಒಂದೆರಡು ಸಲ ಮೆಲ್ಲಗೆ ಹೊಡೆದಂತೆ ನಟಿಸುತ್ತಾನೆ. ಈಗ ಉಂಡೆಯನ್ನು ಬಿಡಿಸಿ ತೋರಿಸಿದರೆ ಟಿಶ್ಯೂ ಕಾಗದ ಮೊದಲಿದ್ದಂತೆ ಜೋಡಿಸಲ್ಪಟ್ಟಿರುತ್ತದೆ! ಇದರ ಹಿಂದೆ ಜೋರಾದ ಚಪ್ಪಾಳೆಗಳು ಬೀಳುತ್ತದೆ. ಹಾಗಾದರೆ ಜಾದೂಗಾರನಿಗೆ ಇದು ಹೇಗೆ ಸಾಧ್ಯ ಆಯಿತು?
ರಹಸ್ಯ
ಪೆನ್ನನ್ನು ನಿಮ್ಮ ಪ್ಯಾಂಟಿನ ಬಲ ಭಾಗದ ಜೇಬಿನಲ್ಲಿ ಮೊದಲೇ ಇಟ್ಟುಕೊಂಡಿರಬೇಕು. ನೀವು ಪ್ರದರ್ಶನಕ್ಕೆ ಮೊದಲು ಇಡೀ ಟಿಶ್ಯೂ ಪೇಪರಿನ ಉಂಡೆಯನ್ನು ಮಾಡಿ ತನ್ನ ಬಲಗೈಯಲ್ಲಿ ಬೆರಳುಗಳ ಮರೆಯಲ್ಲಿ ಹಿಡಿದುಕೊಂಡಿರಬೇಕು. ನಂತರ ಜೇಬಿನಿಂದ ಒಂದು ಟಿಶ್ಯೂ ಪೇಪರನ್ನು ತೆಗೆದು, ಬಿಡಿಸಿ ತೋರಿಸಿ, ಹರಿದು ಉಂಡೆ ಮಾಡಿ. ಇದನ್ನು ಮಾಡುತ್ತಿರಬೇಕಾದರೆ ಬಲಗೈಯಲ್ಲಿ ಮರೆ ಮಾಡಿದ ಪೇಪರ್ ಉಂಡೆ ಪ್ರೇಕ್ಷಕರಿಗೆ ಕಾಣಬಾರದು; ಗೊತ್ತಿರಲಿ. ಹಾಗೇನೆ, ನಿಮ್ಮ ಕೈಯ ಚಲನೆ ಸಹಜವಾಗಿರಬೇಕು. ಹರಿದ ಟಿಶ್ಯೂ ಉಂಡೆಯನ್ನು ಬಲಗೈಯ ಬೆರಳುಗಳ ತುದಿಯಲ್ಲಿ ಹಿಡಿದು ಪ್ರೇಕ್ಷಕರಿಗೆ ತೋರಿಸಿ.
ಇಲ್ಲಿಂದ ಮುಂದಕ್ಕೆ ನೀವು ಕೈಚಳಕವನ್ನು ಬಹಳ ಚಾತುರ್ಯದಿಂದ ನಿಭಾಯಿಸಬೇಕಾಗುತ್ತದೆ. ಹರಿದ ಉಂಡೆಯನ್ನು ಬಲಗೈಯ ಬೆರಳುಗಳ ಮರೆಯಲ್ಲಿ ಹಿಡಿದು ಇಡೀ ಟಿಶ್ಯೂನ ಉಂಡೆಯನ್ನು ಎಡಗೈಗೆ ವರ್ಗಾಯಿಸಬೇಕು. ಇಷ್ಟು ಮಾಡಿದರೆ ಮುಂದಿನ ಕೆಲಸ ಸಲೀಸು. ಪೆನ್ನನ್ನು ತೆಗೆಯುವ ನೆಪದಲ್ಲಿ ಜೇಬಿಗೆ ಕೈ ಹಾಕುವಾಗ ಬಲಗೈಯಲ್ಲಿರುವ ಹರಿದ ಪೇಪರ್ ಉಂಡೆಯನ್ನು ಜೇಬಲ್ಲೇ ಬಿಟ್ಟು ಪೆನ್ನನ್ನು ಹೊರ ತೆಗೆಯಿರಿ. ಪೆನ್ನನ್ನು ಎಡಗೈಯಲ್ಲಿರುವ ಪೇಪರ್ ಉಂಡೆಯ ಮೇಲೆ ಹೊಡೆಯಿರಿ. ಉಂಡೆ ಪೇಪರನ್ನು ಬಿಡಿಸಿದರೆ ಇಡೀ ಪೇಪರ್?
ಉದಯ್ ಜಾದೂಗಾರ್