Advertisement
ಬೆಳ್ತಂಗಡಿ: ಆಗಿನ್ನೂ ನನಗೆ ವಯಸ್ಸು 28. ಸೇನೆಗೆ ಸೇರಿ ಹತ್ತು ವರ್ಷಗಳಾಗಿತ್ತು.ಅನುಭವಿಯಾದ ಕಾರಣ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಬೇಕು ಎಂಬ ಕರೆ ಬಂತು. ಯುದ್ಧ ಪ್ರಾರಂಭಗೊಂಡು ಎರಡು ದಿನಗಳಾಗಿದ್ದವು. ಸೇನೆಗೆ ಬೋಫೋರ್ಸ್ ಗನ್‌ಗಳ ಆವಶ್ಯಕತೆ ಇತ್ತು.ಆ ಗನ್ ಗಳನ್ನು ತೆಗೆದುಕೊಂಡು ಹೋಗಬೇಕು ಎಂಬ ಸೂಚನೆ ಮೇರೆಗೆ ನಾವು ಕಾರ್ಗಿಲ್‌ಗೆ ಹೊರಟೆವು. ಅಲ್ಲಿಯವರೆಗೆ ಕಠಿನ ಯುದ್ಧವನ್ನು ನಾನು ಕಂಡಿರಲಿಲ್ಲ. ಕಾರ್ಗಿಲ್ ತಲುಪುತ್ತಿದ್ದಂತೆ ಯುದ್ಧದ ಭೀಕರತೆಯ ಅರಿವಾಯಿತು ಎಂದು ಆ ದಿನಗಳನ್ನು ಸ್ಮರಿಸಿದ್ದಾರೆ ಉದನೇಶ್ವರ ಭಟ್.
ಬೊಫೋರ್ಸ್ ಗನ್ ಗಳ ಜತೆ ಟ್ರಕ್ ನಲ್ಲಿ ಸಾಗುತ್ತಿದ್ದೆವು. ಶ್ರೀನಗರದಿಂದ ಕಾರ್ಗಿಲ್ ಗೆ ನಮ್ಮ ಪಯಣ. ಇನ್ನೇನು ಕಾರ್ಗಿಲ್ ಪ್ರದೇಶ ತಲುಪಿದೆವು ಅನ್ನುವಷ್ಟರಲ್ಲಿ ನಮ್ಮ ಮುಂದೆ ಇದ್ದ ಟ್ರಕ್ ಮೇಲೆ ಬಾಂಬ್ ದಾಳಿಯಾಗಿತ್ತು. ಆ ವಾಹನ 300 ಅಡಿ ಆಳದ ಕಣಿವೆಗೆ ಬಿದ್ದು ಛಿದ್ರವಾಗಿತ್ತು. ಬೆಂಕಿಯ ಕೆನ್ನಾಲಿಗೆಯ ಉರಿ ನಮಗೂ ತಟ್ಟಿತ್ತು. ಕೆಲವು ಯೋಧರು ಹತರಾದರು. ಅದರಲ್ಲಿ ನನ್ನ ಆತ್ಮೀಯ ಗೆಳೆಯ ಜೆ.ಕೆ. ಸಿಂಗ್ ಅವರೂ ಮೃತಪಟ್ಟರು. ಕರ್ತವ್ಯ ನೆನೆದು ಮುಂದೆ ಸಾಗಿ ಕಾರ್ಗಿಲ್ ಯುದ್ಧಭೂಮಿಗೆ ತುಸುದೂರದಲ್ಲಿದ್ದ ನಮ್ಮ ಬೇಸ್ ಕ್ಯಾಂಪ್ ತಲುಪಿದೆವು ಎಂದು ಅವರು ವಿವರಿಸಿದ್ದಾರೆ.
ಗಾಯಾಳು ಯೋಧರನ್ನು ಬೇಸ್ ಕ್ಯಾಂಪ್ ಗೆ ತರುವ ಜವಾಬ್ದಾರಿ ನಮ್ಮದು ಎಲೆಕ್ಟ್ರಾನಿಕ್ ಮೆಕ್ಯಾನಿಕಲ್ ಎಂಜಿನಿಯರ್ ಟೀಂ. ಯುದ್ಧ ಸಲಕರಣೆಗಳ ಜವಾಬ್ದಾರಿ ನಮ್ಮದು. ಹೆಚ್ಚಾಗಿ ಬೇಸ್ ಕ್ಯಾಂಪ್ ನಲ್ಲಿ ಕೆಲಸ. ಟ್ಯಾಂಕರ್, ರೈಫಲ್ಸ್ ಮುಂತಾದ ಸಲಕರಣೆಗಳ ದುರಸ್ತಿಯನ್ನು ಯುದ್ಧ ಸ್ಥಳಕ್ಕೇ ತೆರಳಿ ಮಾಡುತ್ತಿದ್ದೆವು. ಶಸ್ತ್ರಸಜ್ಜಿತವಾಗಿ ಎದುರಾಳಿ ದಾಳಿಗೆ ಪ್ರತಿದಾಳಿ ನಡೆಸಿದ್ದೇವೆ. ನೇರವಾಗಿ ಭಾಗಿಯಾಗದಿದ್ದರೂ ಯುದ್ಧ ಮಾಡಿದ ಅನುಭವ ನಮ್ಮದು. ಗಾಯಾಳು ಹಾಗೂ ಅಸುನೀಗಿದ ಯೋಧರನ್ನು ಯುದ್ಧಭೂಮಿಯಿಂದ ಬೇಸ್ ಕ್ಯಾಂಪ್ ಗೆ ತರುವ ಜವಾಬ್ದಾರಿಯೂ ಇತ್ತು. 25-30 ಯೋಧರನ್ನು ಹೊತ್ತು ತಂದಿದ್ದೇನೆ. ಆಹಾರಕ್ಕೆ ಟೈಮಿಂಗ್ ಇಲ್ಲ. ಒಂದು ಹೊತ್ತು ಊಟ. ವಾರಕ್ಕೊಮ್ಮೆ ಸ್ನಾನ. ನಿದ್ದೆ ಮಾಡದೆ ವಾರ ಕಳೆದಿದ್ದಿದೆ ಎನ್ನುತ್ತಾರೆ ಭಟ್ಟರು.
Related Articles
ಪಿಯುಸಿ ಮುಗಿಸಿ ಸೇನೆಗೆ ಸೇರಬೇಕೆಂಬ ಉತ್ಕಟ ಆಸೆಯೊಂದಿಗೆ ಆಯ್ಕೆಯಾಗಿ ಸೇನೆ ತರಬೇತಿ ಶಾಲೆಗೆ ಉದನೇಶ್ವರ ಭಟ್ ಸೇರ್ಪಡೆಗೊಂಡರು. 1993ರಲ್ಲಿ ಸಿಕಂದರಬಾದ್‌ನಲ್ಲಿ ಪ್ರಾಥಮಿಕ ತರಬೇತಿ. ಬಳಿಕ ಹೈದರಾಬಾದ್ ನಲ್ಲಿ ತಾಂತ್ರಿಕ ತರಬೇತಿ. ಮತ್ತೆ ಹರಿಯಾಣದಲ್ಲಿ ಪೋಸ್ಟಿಂಗ್ ಆಯಿತು. ಮುಂದೆ ಹಿಮಾಚಲ ಪ್ರದೇಶದಲ್ಲಿ. ಬಳಿಕ ಜಮ್ಮು ಕಾಶ್ಮೀರ ರಜೋರಿ ಸೆಕ್ಟರ್ ನಲ್ಲಿ. ಬಳಿಕ ಕಾರ್ಗಿಲ್ ಯುದ್ಧ, ಮತ್ತೆ ಜಾನ್ಸಿಯಲ್ಲಿ. ಬಳಿಕ ಕುಪ್ವಾಡ ಸೆಕ್ಟರ್ ನಲ್ಲಿ ನಾಲ್ಕೂವರೆ ವರ್ಷ.ಒಟ್ಟು ಸೇನೆಯಲ್ಲಿ 18 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ತೃಪ್ತಿ ಅವರಲ್ಲಿದೆ. ತನ್ನ ದೇಶ ಸೇವೆಗೆ ತಂದೆ ಸುಬ್ರಹ್ಮಣ್ಯ ಭಟ್ಟರ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ. ಮಗಳು ಉಮಾಮಹೇಶ್ವರಿ, ಮಗ ಮುರಳಿ ಕಾರ್ತಿಕ್, ಪತ್ನಿ ಮಮತಾ ಜತೆಗೂಡಿ ಜೀವನ ನಡೆಸುತ್ತಿದ್ದಾರೆ.
Advertisement
— ಚಂದ್ರಶೇಖರ್ ಎಸ್. ಅಂತರ