ಕಾಪು: ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ, ಬ್ರಹ್ಮವಾಹಕ, ಉದ್ಯಮಿ ಯು. ಸೀತಾರಾಮ ಭಟ್ ಉಚ್ಚಿಲ (58) ಅವರು ಎ. 10ರಂದು ಅಸೌಖ್ಯದಿಂದಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ಅವರು ಉತ್ಸವ ಕಾಲದಲ್ಲಿ ದೇವರನ್ನು ಹೊರುವ ಬ್ರಹ್ಮವಾಹಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು.
ಉಚ್ಚಿಲದಲ್ಲಿ ಕಳೆದ 35-40 ವರ್ಷಗಳಿಂದ ಶ್ರೀ ರಾಮ್ ಎಂಟರ್‌ಪ್ರೈಸಸ್ ಮತ್ತು ಮಹೇಶ್ ಸ್ಟೋರ್ಸ್ ನ ಮಾಲಕರಾಗಿದ್ದ ಅವರು, ದಾನ, ಧರ್ಮ, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗಳ ಮೂಲಕವಾಗಿ ಪ್ರಸಿದ್ಧರಾಗಿದ್ದರು.
ಉಚ್ಚಿಲ ಸರಸ್ವತಿ ಮಂದಿರ ಹಿರಿಯ ಪ್ರಾಥಮಿಕ ಶಾಲೆ, ಸರಸ್ವತಿ ಮಂದಿರ ಪ್ರೌಢಶಾಲೆ, ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಮಂಡಳಿ, ಜವನೆರ್ ಉಚ್ಚಿಲ, ನಟೇಶ ನೃತ್ಯ ನಿಕೇತನ ಸಹಿತ ವಿವಿಧ ಸಂಘ-ಸಂಸ್ಥೆಗಳ ಪೋಷಕರಾಗಿಯೂ ಗುರುತಿಸಲ್ಪಟ್ಟಿದ್ದರು.
ಸಂತಾಪ: ಯು. ಸೀತಾರಾಮ ಭಟ್ ಅವರ ನಿಧನಕ್ಕೆ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಗಣ್ಯರಾದ ಅಶೋಕ್‌ರಾಜ್ ಬೀಡು, ವೇ| ಮೂ| ಕೇಂಜ ಶ್ರೀಧರ ತಂತ್ರಿ, ಗುರ್ಮೆ ಸುರೇಶ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಗಂಗಾಧರ ಸುವರ್ಣ, ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಚಂದ್ರಶೇಖರ ಶೆಟ್ಟಿ, ದ್ಯುಮಣಿ ಆರ್. ಭಟ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.