ಪಡುಬಿದ್ರಿ: ಉಚ್ಚಿಲ ಬಡಾ ಗ್ರಾ. ಪಂ. ವ್ಯಾಪ್ತಿಯ ಭಾಸ್ಕರ ನಗರದಲ್ಲಿ ವಾಸದ ಮನೆಯೊಂದು ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದು ಸುಮಾರು 2.5 ಲಕ್ಷ ರೂ. ನಷ್ಟ ಸಂಭವಿಸಿದೆ.
ಉಚ್ಚಿಲ ಭಾಸ್ಕರ ನಗರದ ನಿವಾಸಿಯಾಗಿರುವ ನಫೀಸಾ ಅವರು ತಮ್ಮ ಮಕ್ಕಳೊಂದಿಗೆ ರಾತ್ರಿ ಮಲಗಿದ್ದಾಗ ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಮನೆಯ ಮಾಡು ಹಾಗೂ ಮಣ್ಣಿನ ಗೋಡೆ ಕುಸಿದು ಬಿದ್ದಿದೆ.
ಮನೆಯಲ್ಲಿದ್ದ ಬೈಕು ಹಾಗೂ ಮನೆಯ ಎಲ್ಲ ಗೃಹೋಪಯೋಗಿ ವಸ್ತುಗಳು ಮಣ್ಣಿನಡಿಯಲ್ಲಿ ಬಿದ್ದಿದ್ದು ಉಪಯೋಗಕ್ಕೆ ಯೋಗ್ಯವಿಲ್ಲದಂತಾಗಿದೆ.
ಈ ಸಂದರ್ಭ ಮನೆಯೊಡತಿ ನಫೀಸಾ ಅವರು ಕುಸಿತದಿಂದಾಗಿ ಕಂಗಾಲಾಗಿದ್ದು ಈ ಕುಟುಂಬಕ್ಕೆ ಸಾರ್ವಜನಿಕರ ಮತ್ತು ಜಿಲ್ಲಾಡಳಿತದ ಸಹಕಾರದ ಅಗತ್ಯ ಇದೆ.
ಬಡಾ ಗ್ರಾ. ಪಂಚಾಯತ್ ಅಧ್ಯಕ್ಷೆ ಶರ್ಮಿಳಾ ಸಾಲ್ಯಾನ್ ಮಾತನಾಡಿ, ಗ್ರಾಮ ಪಂಚಾಯತ್ ವತಿಯಿಂದ ಸಿಗುವ ಎಲ್ಲಾ ಸೌಲಭ್ಯವನ್ನು ನೀಡುತ್ತೇವೆ. ನೂತನ ಮನೆ ನಿರ್ಮಾಣ ಮಾಡಲು ಬಸವ ಕಲ್ಯಾಣ ಯೋಜನೆಯಿಂದ ಹಣ ಮಂಜೂರು ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳೆಗೆ ಸೂಚಿಸುತ್ತೇವೆ ಎಂದರು.
ಘಟನಾ ಸ್ಥಳಕ್ಕೆ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಗ್ರಾಮ ಕರಣಿಕ ಜಗದೀಶ್ ಭೇಟಿಯಿತ್ತು ನಷ್ಟದ ಅಂದಾಜುಪಟ್ಟಿಯನ್ನು ತಯಾರಿಸಿ ಜಿಲ್ಲಾಡಳಿತ ಹಾಗೂ ಕಾಪು ತಾಲೂಕು ಕಚೇರಿಗೆ ರವಾನಿಸಿದ್ದಾರೆ. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕುಶಾಲಿನಿ, ಸಿಬಂದಿ ಶಶಿಕಾಂತ್ ಪೂಜಾರಿ, ಪಡುಬಿದ್ರಿ ಪಿಎಸ್‌ಐ ಸುಬ್ಬಣ್ಣ, ಎಎಸ್‌ಐ ಸುರೇಶ ಭಟ್, ಪಿಸಿ ಯೋಗೀಶ ಭೇಟಿ ನೀಡಿದ್ದಾರೆ.