Advertisement

Uchila ದಸರಾ: ಪಾರ್ಕಿಂಗ್‌, ಟ್ರಾಫಿಕ್‌ ವ್ಯವಸ್ಥೆ ಸಿದ್ಧತೆ ಪೂರ್ಣ

05:35 PM Oct 11, 2024 | Team Udayavani |

ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗು ತ್ತಿರುವ ಉಡುಪಿ ಉಚ್ಚಿಲ ದಸರಾ- 2024ರ ವೈಭವದ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಯಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆ ಗಳನ್ನು ನಡೆಸಲಾಗುತ್ತಿದೆ. ರಾ.ಹೆ. ಹೆದ್ದಾರಿ 66 ಮತ್ತು ಕಾಪು ಬೀಚ್‌ ರಸ್ತೆಯಲ್ಲಿ 18-20 ಕಿ. ಮೀ. ಉದ್ದದವರೆಗೆ ಸಾಗ ಲಿರುವ ಶೋಭಾ ಯಾತ್ರೆಯಲ್ಲಿ ನೂರಾರು ಟ್ಯಾಬ್ಲೋ, ಭಜನಾ ತಂಡಗಳು, ವಾದ್ಯ ಮೇಳಗಳು ಭಾಗವಹಿಸಿ ವಿಶೇಷ ರಂಗು ತರಲಿವೆ.

Advertisement

ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಮರಳಿ ದೇವಸ್ಥಾನ ಅಥವಾ ಪಾರ್ಕಿಂಗ್‌ ಪ್ರದೇಶಗಳಿಗೆ ತೆರಳಲು ವಿಶೇಷ ಸಾರಿಗೆ ವ್ಯವಸ್ಥೆ ಇದೆ. ಎಲ್ಲಿಯೂ ಲೋಪದೋಷಗಳಾಗದಂತೆ ತಡೆಯಲು ಮತ್ತು ಟ್ರಾಫಿಕ್‌ ನಿಯಮ ಉಲ್ಲಂಘನೆ ಯಾಗದಂತೆ ನೋಡಿಕೊಳ್ಳಲು ಪೊಲೀಸ್‌ ಇಲಾಖೆಯ ಜತೆಗೆ ನೂರಾರು ಮಂದಿ ಸ್ವಯಂ ಸೇವಕರು ಇರುತ್ತಾರೆ. ಮೊಗವೀರ ಯುವ ಸಂಘಟನೆ, ವಿವಿಧ ಜವಾಬ್ದಾರಿ ಹೊತ್ತುಕೊಂಡಿರುವ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮೆರವಣಿಗೆ ಯುದ್ದಕ್ಕೂ ಮಾನವ ಸರಪಳಿ ರಚಿಸಿ ಶೋಭಾಯಾತ್ರೆಗೆ ವಿಶೇಷ ಭದ್ರತೆ ನೀಡಲಿದ್ದಾರೆ ಎಂದು ಉಚ್ಚಿಲ ದಸರಾ ರೂವಾರಿ ನಾಡೋಜ ಡಾ| ಜಿ. ಶಂಕರ್‌ ತಿಳಿಸಿದ್ದಾರೆ.

ಹೆದ್ದಾರಿಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ವೈಯಕ್ತಿಕ ಕಾರ್‌, ಬೈಕ್‌ಗಳ ಬದಲು ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಸರಕಾರಿ ಬಸ್‌, ರಿಕ್ಷಾಗಳನ್ನು ಆಶ್ರಯಿಸಿದರೆ ಉತ್ತಮ ಎಂದು ಎಸ್‌ಐ ಪ್ರಸನ್ನ ಕುಮಾರ್‌ ತಿಳಿಸಿದ್ದಾರೆ.

ಪಾರ್ಕಿಂಗ್‌ ವ್ಯವಸ್ಥೆ ಹೀಗಿರಲಿದೆ

  • ಮಂಗಳೂರು ಕಡೆಯಿಂದ ಬರುವವರಿಗೆ ಉಚ್ಚಿಲ ಸರಸ್ವತಿ ಮಂದಿರ ಶಾಲೆ, ಎರ್ಮಾಳು ಜನಾರ್ದನ ದೇವಸ್ಥಾನದ ಬಳಿ
  • ಉಡುಪಿ ಕಡೆಯಿಂದ ಬರುವವರಿಗೆ ಮಹಾಲಕ್ಮೀ ಶಾಲಾ ಮೈದಾನ, ಮೊಗವೀರ ಭವನ ಬಳಿ, ದೇವಸ್ಥಾನದ ಪರಿಸರ, ಎರ್ಮಾಳು ಜನಾರ್ದನ ದೇವಸ್ಥಾನದ ಬಳಿ
  • ಕಾಪು ಬೀಚ್‌ನಲ್ಲಿ ನಡೆಯುವ ಜಲಸ್ತಂಭನದಲ್ಲಿ ಪಾಲ್ಗೊಳಲು ಮಂಗಳೂರು ಕಡೆಯಿಂದ ಬರುವವರಿಗೆ ಮೂಳೂರು ಸಾಯಿರಾಧಾ ರೆಸಾರ್ಟ್‌ ಬಳಿ, ಉಡುಪಿ – ಮಲ್ಪೆ – ಪಡುಕೆರೆಯಿಂದ ಬರುವವರಿಗೆ ಪೊಲಿಪು ಶಾಲಾ ಮೈದಾನ, ಕೈಪುಂಜಾಲು ಶಾಲಾ ಮೈದಾನ, ಕಾಪು ಬೀಚ್‌ ಪಾರ್ಕಿಂಗ್‌, ಕೋಟ್ಯಾನ್‌ಕಾರ್‌ ಮೂಲಸ್ಥಾನದ ಬಳಿ ವಾಹನ ಪಾರ್ಕಿಂಗ್‌ಗೆ ಅವಕಾಶ.

ಶೋಭಾಯಾತ್ರೆ ಸಾಗುವ ಮಾರ್ಗ ಇದು
ದೇವಸ್ಥಾನದಿಂದ 3 ಗಂಟೆಗೆ ಹೊರಡುವ ಶೋಭಾಯಾತ್ರೆಯು ಉಡುಪಿ – ಮಂಗಳೂರು ರಸ್ತೆಯಲ್ಲಿ ಎರ್ಮಾಳಿನವರೆಗೆ ಸಾಗಿ, ಅಲ್ಲಿಂದ ತಿರುಗಿ ಮಂಗಳೂರು – ಉಡುಪಿ ರಸ್ತೆ ಮೂಲಕ ಉಚ್ಚಿಲ – ಮೂಳೂರು ಮಾರ್ಗವಾಗಿ ಕೊಪ್ಪಲಂಗಡಿಗೆ ಬರಲಿದೆ. ಅಲ್ಲಿಂದ ಕಾಪು ಬೀಚ್‌ ರಸ್ತೆಯಲ್ಲಿ ಸಂಚರಿಸಿ ರಾತ್ರಿ 10.30ಕ್ಕೆ ಕಾಪು ಲೈಟ್‌ ಹೌಸ್‌ ಬಳಿಯ ಜಲಸ್ತಂಭನ ಪ್ರದೇಶಕ್ಕೆ ತಲುಪಲಿದೆ. ಸಾಮೂಹಿಕ ಮಂಗಳಾರತಿ, ಗಂಗಾರತಿಯ ಬಳಿಕ ಸಮುದ್ರ ಮಧ್ಯಕ್ಕೆ ಕೊಂಡೊಯ್ದು 11 ಗಂಟೆಯ ವೇಳೆಗೆ ಜಲಸ್ತಂಭನ.

Advertisement
Advertisement

Udayavani is now on Telegram. Click here to join our channel and stay updated with the latest news.

Next