ಕಾಪು: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗುತ್ತಿರುವ ಉಚ್ಚಿಲ ದಸರಾ 2023ರ ವೈಭವದ ಶೋಭಾಯಾತ್ರೆಯ ಯುಶಸ್ವಿಗಾಗಿ ದಸರಾ ಉತ್ಸವ ಸಮಿತಿ, ಪೊಲೀಸ್ ಇಲಾಖೆ ಮತ್ತು ಸ್ವಯಂ ಸೇವಕರ ಸಮಿತಿಗಳನ್ನೊಳಗೊಂಡು ವಿವಿಧ ಸಮಿತಿಗಳ ಸರಣಿ ಸಭೆ ರವಿವಾರ ನಡೆಯಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಉಚ್ಚಿಲ ದಸ ರಾದ ಶೋಭಾಯಾತ್ರೆ ಸುಸೂತ್ರವಾಗಿ ನಡೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಕಳೆದ ವರ್ಷ ಶೋಭಾಯಾತ್ರೆ ಸಾಗುವ ಹಾದಿ ಯಲ್ಲಿ ಉಂಟಾಗಿರುವ ಅಸ್ತವ್ಯಸ್ತತೆ ಮತ್ತು ಸಂಚಾರ ದಟ್ಟಣೆಯಲ್ಲಿನ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಶೋಭಾಯಾತ್ರೆಗೆ ಸಿದ್ಧತೆ ನಡೆಸಲಾಗಿದೆ ಎಂದರು.
ಶಾಂತಿಯುತ ಶೋಭಾಯತ್ರೆಗೆ ಪೂರಕ ವಾಗಿ ಪೊಲೀಸ್ ಇಲಾಖೆ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಶೋಭಾಯಾತ್ರೆ ಸಾಗುವ ಉದ್ದಕ್ಕೂ ಸರ್ವೀಸ್ ರಸ್ತೆಗಳಲ್ಲಿ ವಾಹನ ನಿಲುಗಡೆ ಸಂಪೂರ್ಣವಾಗಿ ನಿಷೇಧಿಸಲಾಗುವುದು. ಶಾಂತಿಯುತ ಮೆರವಣಿಗೆಯ ಉದ್ದೇಶದಿಂದ 200 ಮಮಂದಿ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಎರ್ಮಾಳು, ಮೂಳೂರು, ಕಾಪುವಿನಲ್ಲಿ ಮೂರು ಸೆಕ್ಟರ್ ಗಳನ್ನು ರಚಿಸಿ ಟ್ರಾಫಿಕ್ ನಿರ್ವಹಣೆಗೆ ಕ್ರಮ ವಹಿಸಲಾಗುವುದು ಎಂದು ಕಾರ್ಕಳ ಡಿವೈಎಸ್ಪಿ ಅರವಿಂದ ಕುಲಗಜ್ಜಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ| ಜಿ. ಶಂಕರ್ ಮಾತನಾಡಿ, ಶೋಭಾಯಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಶೋಭಾಯಾತ್ರೆಯ ಯಶಸ್ಸಿಗಾಗಿ ಸಾಗುವ ರಸ್ತೆ ಮತ್ತು ನಕ್ಷೆ ಸಮಿತಿ, ಸ್ವಯಂಸೇವಕರ ನಿರ್ವಹಣೆ ಸಮಿತಿ, ಟ್ಯಾಬ್ಲೋ ನಿರ್ವಹಣೆ ಸಮಿತಿ, ಪುರ ಶೃಂಗಾರ ಸಮಿತಿ, ಶೋಭಯಾತ್ರೆ ಜವಾಬ್ದಾರಿ ಮತ್ತು ವಿಗ್ರಹ ಜಲಸ್ತಂಭನಾ ಸಮಿತಿ ರಚಿಸಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಶೋಭಾಯಾತ್ರೆ ನಡೆಯಬೇಕಿದ್ದು ಅದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ಕೈಗೆತ್ತಿಕೊಳ್ಳುವ ನಿರ್ಣಯಗಳಿಗೆ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾಣೆ, ಪಡುಬಿದ್ರಿ ಎಸ್ಸೈ ಪ್ರಸನ್ನ ಎಂ.ಎಸ್., ಕಾಪು ಎಸ್ಸೆ$ç ಅಬ್ದುಲ್ ಖಾದರ್, ಕ್ರೈಂ ಎಸ್ಸೈ ಸುದರ್ಶನ್ ದೊಡ್ಡಮನಿ, ವಿವಿಧ ಸಮಿತಿಗಳ ಸಂಚಾಲಕರಾದ ಹರಿಯಪ್ಪ ಕೋಟ್ಯಾನ್, ಶಿವ ಕುಮಾರ್ ಮೆಂಡನ್, ಸರ್ವೋತ್ತಮ ಕುಂದರ್, ದಿನೇಶ್ ಎರ್ಮಾಳು, ವಿಶ್ವಾಸ್ ಅಮೀನ್, ಶರಣ್ ಕುಮಾರ್ ಮಟ್ಟು, ಸತೀಶ್ ಅಮೀನ್ ಪಡುಕೆರೆ, ಮನೋಜ್ ಕಾಂಚನ್, ಸುಜಿತ್ ಕುಮಾರ್, ರವೀಂದ್ರ ಶ್ರೀಯಾನ್ ಮೊದಲಾದವರು ಉಪಸ್ಥಿತರಿದ್ದರು.
ಮೊಗವೀರ ಮಹಾಜನ ಸಂಘದ ಜಯ ಸಿ. ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು. ಪ್ರಬಂಧಕ ಸತೀಶ್ ಅಮೀನ್ ಕಾರ್ಯಕಮ ನಿರೂಪಿಸಿದರು.
ಪಿಲಿ ನಲಿಕೆ ಸ್ಪರ್ಧೆಯಲ್ಲಿ ಭಾರೀ ಉತ್ಸಾಹ
ಕಾಪು: ಮಹಾಲಕ್ಷ್ಮೀ ಕೋ. ಆಪರೇಟಿವ್ ಬ್ಯಾಂಕ್ ಲಿ. ಪ್ರಾಯೋಜಕತ್ವದಲ್ಲಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆದ ಮಹಿಳೆಯರ ಪಿಲಿ ನಲಿಕೆ ಸ್ಪರ್ಧೆಯು ಹಲವಾರು ವಿಶೇಷತೆಗಳಿಗೆ ಕಾರಣವಾಯಿತು.
ತಾಸೆದ ಪೆಟ್ಟು, ವಾದ್ಯ ಮತ್ತು ಬ್ಯಾಂಡ್ ವಾದನಕ್ಕೆ ಹುಲಿ ವೇಷ ಕುಣಿದ 7 ವರ್ಷದ ಬಾಲೆ ಆಧ್ಯಾ ಮತ್ತು 72 ವರ್ಷ ಪ್ರಾಯದ ಸವಿತಾ ನಾಯಕ್ ಅವರನ್ನು ಡಾ|ಜಿ. ಶಂಕರ್ ದಂಪತಿ, ಶಾಸಕ ಯಶ್‌ಪಾಲ್ ಸುವರ್ಣ ಸಹಿತ ಗಣ್ಯರು ವೇದಿಕೆ ಏರಿ ಗೌರವಿಸಿದರು. ಪ್ರಥಮ ಬಾರಿಗೆ ವೇಷವಿಲ್ಲದೆ ನಡೆದ ಗುಂಪು ಸ್ಪರ್ಧೆಯಲ್ಲಿ 15 ಗುಂಪುಗಳು, ವೈಯಕ್ತಿಕ ಸೀರೆ ವಿಭಾಗದಲ್ಲಿ 20 ಸ್ಪರ್ಧಿಗಳು ಭಾಗವಹಿಸಿದ್ದರು. ಇದನ್ನು ನೋಡಲು ಹದಿನೈದು ಸಾವಿರಕ್ಕೂ ಅಧಿಕ ಮಂದಿ ಸಭಾಂಗಣದ ಒಳಗೆ ಮತ್ತು ಹೊರಗೆ ನೆರೆದಿದ್ದರು.