ಕಾಪು : ಉಚ್ಚಿಲ ನಿವಾಸಿ ಮುಮ್ತಾಜ್ ಅವರಿಗೆ ಅವರ ಪರಿಚಯದವನಾದ ಆರೋಪಿ ಅನ್ವರ್ ಸಾಲ ಕೊಡಿಸುವುದಾಗಿ ಭರವಸೆ ನೀಡಿ, ವಿವಿಧ ದಾಖಲೆಗಳನ್ನು ಪಡೆದು, ಹಣವನ್ನೂ ಪಡೆದು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮುಮ್ತಾಜ್ ಅವರು ಅನ್ವರ್ ಬಳಿ ಸಾಲ ಕೇಳಲು ಕಾಪು ಹಳೆ ಪೊಲೀಸ್ ಠಾಣೆಯ ಬಳಿ ಇರುವ ಕಚೇರಿಯಲ್ಲಿ ಭೇಟಿಯಾಗಿ ಅದಕ್ಕೆ ಬೇಕಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಗುರುತಿನ ಚೀಟಿ, 6 ಫೋಟೋ ನೀಡಿದ್ದರು. ಆರೋಪಿಯು ಕೆಲವೊಂದು ದಾಖಲೆಗಳಿಗೆ ಸಹಿ ಪಡೆದುಕೊಂಡು ಸಾಲ ಮಾಡಿಸಿಕೊಡಲು 35,000 ರೂ. ಕೊಡಬೇಕಾಗಿ ತಿಳಿಸಿದ್ದು, ಅದರಲ್ಲಿ 20,000 ರೂ. ಅನ್ನು ನೀಡಿದ್ದರು.
ಆರೋಪಿ ಅನ್ವರ್ ಉಡುಪಿ ಉಜ್ವನ್ ಬ್ಯಾಂಕ್‌ನಲ್ಲಿ ಮುಮ್ತಾಜ್ ಅವರ ಬ್ಯಾಂಕ್ ಖಾತೆಯನ್ನು ತೆರೆಸಿದ್ದು, ಮೊದಲೇ ತಿಳಿಸಿದ್ದಂತೆ 15,000 ರೂ. ಶುಲ್ಕ, ಸಾಲದ ಹಣ ಹಾಗೂ ದಾಖಲೆಗಳ ತಯಾರಿಕೆ ವೆಚ್ಚವನ್ನು ನೀಡಿದ್ದರು. ಎಲ್ಲ ಹಣವನ್ನು ನೀಡಿ ಒಂದು ವಾರ ಆದರೂ ಮುಮ್ತಾಜ್ ಅವರ ಬ್ಯಾಂಕ್ ಖಾತೆಗೆ ಹಣ ನೀಡದೆ ಮೂರು ತಿಂಗಳವರೆಗೂ ಹೀಗೆನೇ ಸತಾಯಿಸಿದ್ದರು.
ಆರೋಪಿ ಒಂದಲ್ಲ ಒಂದು ಕಾರಣ ಹೇಳಿ ಸಾಲ ನೀಡಲು ದಿನ ದೂಡುತ್ತಿದ್ದು, ಉಚ್ಚಿಲದ ಬಳಿ ಸಿಕ್ಕಿದಾಗ ಸಾಲದ ಹಣದ ಚೆಕ್ ನನ್ನ ಬಳಿ ಇದೆ. ಆದರೆ ಈಗ ಬೇರೊಬ್ಬರ ಬಳಿ ಇದೆ ಎನ್ನುವ ಸಬೂಬು ನೀಡಿ, ಮತ್ತೆ 50 ಸಾವಿರ ರೂ. ನೀಡಿದಲ್ಲಿ ಸಾಲದ ಹಣ ಮತ್ತು ಚೆಕ್‌ಗಳನ್ನು ನೀಡುವುದಾಗಿ ತಿಳಿಸಿದ್ದನು.
ಮುಮ್ತಾಜ್ ಅವರು ತಾನು ಈಗಾಗಲೇ ನೀಡಿರುವ 35,000 ರೂ. ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದು ಆತ ಚೆಕ್ ಮತ್ತು ಹಣವನ್ನು ನೀಡಿರುವುದಿಲ್ಲ. ಅದೇ ವಿಚಾರಕ್ಕೆ ಸಂಬಂಧಿಸಿ 2 ನೇ ಆರೋಪಿ ಮಿನಾಜ್ ಹಾಗೂ 1 ನೇ ಆರೋಪಿ ಅನ್ವರ್‌ನ ಅಣ್ಣನ ಹೆಂಡತಿ, ಮುಮ್ತಾಜ್ ಅವರ ತಾಯಿಯ ಮನೆಯಾದ ಕೊಪ್ಪಲಂಗಡಿಗೆ ಹೋಗಿ ಅಲ್ಲಿ ಬೆದರಿಕೆಯೊಡ್ಡಿದ್ದು, ಚೆಕ್ ಬೇಕಾದಲ್ಲಿ 45,000 ರೂ. ನೀಡಬೇಕು ಎಂದು ಬೆದರಿಕೆ ಹಾಕಿದ್ದರು.
ಇದನ್ನೂ ಓದಿ : ಫೇಸ್‌ಬುಕ್‌ನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಪೋಸ್ಟ್: ಆರೋಪಿ ಬಂಧನ
ಈ ಬಗ್ಗೆ ಮುಮ್ತಾಜ್ ಅವರು ಅನ್ವರ್ ಮತ್ತು ಆತನ ಜತೆಗಿದ್ದವರು ತಮ್ಮ ಚೆಕ್ ಅನ್ನು ಹಿಡಿದು ದುರ್ಬಳಕೆ ಮಾಡಿ, ಮೋಸ ಮಾಡಿರುವುದಾಗಿ ನ್ಯಾಯಾಲಯದ ಮೂಲಕ ಕಾಪು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.