Advertisement

ಇಂದಿನಿಂದ ಉಚ್ಚಂಗೆಮ್ಮದೇವಿ ಜಾತ್ರೋತ್ಸವ

01:18 PM Mar 27, 2017 | |

ಹರಪನಹಳ್ಳಿ: ಮಧ್ಯ ಕರ್ನಾಟಕದ ಇತಿಹಾಸಿಕ ಪ್ರಸಿದ್ಧಿಯ ಶಕ್ತಿ ದೇವತೆಯ ಕೇಂದ್ರವಾಗಿರುವ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಉಚ್ಚೆಂಗೆಮ್ಮದೇವಿ ಜಾತ್ರೋತ್ಸವ ಮಾ.27ರಿಂದ ಆರಂಭಗೊಂಡು 5 ದಿನಗಳ ಕಾಲ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ನೆರವೇರಲಿದೆ. 

Advertisement

ಮಾ.27ರಂದು ಮಹಾಚತುರ್ದಶಿ ಹಾಗೂ ಓಕಳಿ ಗುಣಿ ಪೂಜೆ (ಮಹಾ ಪೂಜೆ), 28ರಂದು ಯುಗಾದಿ ಅಮವಾಸ್ಯೆ ಶ್ರೀದೇವಿಯ ಮಹಾ ಪೂಜೆ, 29ರಂದು ಶ್ರೀಹೇವಿಳಂಬಿನಾಮ ಸಂವತ್ಸರ ಆರಂಭ, ಯುಗಾದಿ ಪಾಡ್ಯ ಓಕುಳಿ ಉತ್ಸವ ಪಾದಗಟ್ಟಿ ಹತ್ತಿರ ಹಾಗೂ ಚಂದ್ರ ದರ್ಶನ,

30ರಂದು ಶ್ರೀ ಉತ್ಸಾಂಭದೇವಿಯ ಆನೆಹೊಂಡದ ಉತ್ಸವ, 31ರಂದು ಮಹಾಪೂಜೆ ಹಾಗೂ ಭಕ್ತಾದಿಗಳಿಂದ ವಿವಿಧ ಸೇವಾ ಸತ್ಕಾರ ನಡೆದು ದೇವಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ. ದಾವಣಗೆರೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲದೇ ನೆರೆಯ ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ,

ಗದಗ ಹಾಗೂ ಹಾವೇರಿ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ದಶ-ದಿಕ್ಕುಗಳಿಂದಲೂ ಸಾಗರೋಪಾದಿಯಲ್ಲಿ ಭಕ್ತಸಮೂಹ ಹರಿದು ಬಂದು ಉತ್ಸವಾಂಬೆಯ ಬೆಟ್ಟದ ಹಿಂಭಾಗದಲ್ಲಿನ ವಿಶಾಲವಾದ ಹಾಲಮ್ಮನ ತೋಪಿನಲ್ಲಿ ಸಮಾಗಮಗೊಳ್ಳುತ್ತಾರೆ. ದೈವ ಸ್ವರೂಪಿಣಿಯಾಗಿರುವ ದೇವಿಯ ಕೃಪೆಗೆ ಪಾತ್ರರಾಗಲು ಭಕ್ತಗಣ ಶ್ರದ್ಧಾಭಕ್ತಿಯ ಮೂಲಕ ವಿವಿಧ ಹರಕೆ ತೀರಿಸಿ ಭಕ್ತಿ ಸಮರ್ಪಿಸುತ್ತಾರೆ.

ಭಕ್ತರ ಹರಕೆ ಈಡೇರಿಸುವ ಶಕ್ತಿ ಮಾತೆಯಾಗಿರುವ ಆರಾಧ್ಯ ದೈವ ಜಾತ್ರೆಯ ಅಂಗವಾಗಿ ಹಾಲಮ್ಮನ ತೋಪಿನಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಜನಪದಿಯರಲ್ಲಿ ಹಾಸು ಹೊಕ್ಕಿದೆ. ಹೀಗಾಗಿ ಹಾಲಮ್ಮನ ತೋಪಿನಲ್ಲಿ ನಿರ್ಮಿಸಿಕೊಂಡಿರುವ ತಾತ್ಕಾಲಿಕ ಟೆಂಟ್‌ಗಳಲ್ಲಿ ಭಕ್ತರು ಬೀಡು ಬಿಡುತ್ತಾರೆ.

Advertisement

ತಾಲೂಕು ಆಡಳಿತ ಪ್ರಾಣಿ ಬಲಿಯನ್ನು ನಿಷೇಧಿಸಿದ್ದರೂ ಸಹ, ಪೊಲೀಸರ ಕಟ್ಟೆಚ್ಚರದ ನಡುವೆಯೂ ಸಹಸ್ರಾರು ಕುರಿ-ಕೋಳಿಗಳು ಭಕ್ತರ ಭಕ್ತಿ ಪರಾಕಾಷ್ಠೆಯ ಉನ್ಮಾನದಲ್ಲಿ ದೇವಿಗೆ ಹರಕೆ ನೀಡುತ್ತಾರೆ. ಜತೆಗೆ, ಬೇವಿನುಡುಗೆ, ಪಡ್ಲಿಗಿ ತುಂಬಿಸುವುದು, ದೀಡ ನಮಸ್ಕಾರ ಸೇರಿದಂತೆ ವಿವಿಧ ಬಗೆಯ ಹರಕೆ ತೀರಿಸುವ ಮೂಲಕ ಭಕ್ತರು ಭಕ್ತಿಯ ಭಾವ ಸಂಗಮದಲ್ಲಿ ಮಿಂದೆಳುತ್ತಾರೆ.

ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತರಿಗೆ ತೆರೆಯುವ ಅಂಗಡಿ, ವಾಹನಗಳು ಸೇರಿದಂತೆ ಇನ್ನಿತರ ಸೌಕರ್ಯಗಳಿಂದ ಅಂದಾಜು 3 ಲಕ್ಷರೂ ಆದಾಯ ಬರಲಿದೆ. ನಿತ್ಯ 20 ಟ್ಯಾಂಕರ್‌ ನೀರು ಪೂರೈಕೆಗೆ ಈ ಹಣವನ್ನು ವೆಚ್ಚ ಮಾಡಲಾಗುತ್ತದೆ. ಭಕ್ತರ ಕಸ, ಬೇವಿನ ಉಡಿಗೆ ಸೇರಿದಂತೆ ಇತರೆ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕದೇ ಸ್ವತ್ಛತೆ ಕಾಪಾಡಬೇಕು ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಟಿ.ಅಂಜಿನಪ್ಪ ಕೋರಿದ್ದಾರೆ.

ದೇವಿಯ ಹೆಸರಿನಲ್ಲಿ ಸಾಮಾಜಿಕ ಅನಿಷ್ಟ ದೇವದಾಸಿ ಪದ್ಧತಿ ಉಚ್ಚೆಂಗೆಮ್ಮದೇವಿಯ ಸನ್ನಿಧಿಯಲ್ಲಿ ತಲತಲಾಂತರದಿಂದಲೂ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಪದ್ಧತಿಗೆ ತಡೆ ನೀಡಲು ತಾಲೂಕು ಆಡಳಿತದಿಂದ ಕಠಿಣ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಜನ ಜಾಗೃತಿ ಮೂಡಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್‌, ತಹಶೀಲ್ದಾರ್‌ ಕೆ.ಗುರುಬಸವರಾಜ್‌ ತಿಳಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next