Advertisement

UCC: ರಾಜಕೀಯ ದಾಳ ಉರುಳಿಸಿತೇ ಕೇಂದ್ರ ಸರಕಾರ?

11:13 PM Jun 15, 2023 | Team Udayavani |

ದೇಶದಲ್ಲಿ ಕಳೆದೊಂದು ದಶಕದಿಂದೀಚೆಗೆ ತೀವ್ರ ಚರ್ಚೆಗೀಡಾಗಿರುವ ಸಮಾನ ನಾಗರಿಕ ಸಂಹಿತೆ(ಯುಸಿಸಿ) ಜಾರಿ ವಿಷಯ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕೇಂದ್ರದಲ್ಲಿನ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ನೇತೃತ್ವ ವಹಿಸಿರುವ ಬಿಜೆಪಿ ಯುಸಿಸಿ ಜಾರಿಗೆ ಈ ಹಿಂದಿನಿಂದಲೂ ಒಲವು ತೋರುತ್ತಲೇ ಬಂದಿದೆ. ಬಿಜೆಪಿ ತನ್ನ ಚುನಾವಣ ಪ್ರಣಾಳಿಕೆಗಳಲ್ಲಿ ಯುಸಿಸಿ ಜಾರಿಯನ್ನು ಪ್ರಸ್ತಾವಿಸುತ್ತಲೇ ಬಂದಿದೆ. ಕಳೆದೆರಡೂ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಬಹುಮತ ಗಳಿಸಿ ಮೈತ್ರಿ ಸರಕಾರದ ನೇತೃತ್ವ ವಹಿಸಿರುವುದರಿಂದ ಯುಸಿಸಿ ಜಾರಿಯ ಪರವಾಗಿರುವವರು ಸರಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿರುವ ಹೊರತಾಗಿಯೂ ಕೇಂದ್ರ ಸರಕಾರ ಹೆಚ್ಚಿನ ಆತುರ ತೋರದೆ ಭಾರೀ ಎಚ್ಚರಿಕೆಯ ನಡೆಯನ್ನು ಅನುಸರಿಸುತ್ತ ಬಂದಿದೆ.

Advertisement

ಯುಸಿಸಿ ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕಳೆದ ವರ್ಷ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಸಂಬಂಧ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ದೇಶದಲ್ಲಿರುವ ಬೇರೆ ಬೇರೆ ಧರ್ಮ, ಪಂಗಡಗಳಿಗೆ ಸೇರಿದ ಜನರು ಆಸ್ತಿ, ವಿವಾಹಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾನೂನುಗಳನ್ನು ಅನುಸರಿಸುವುದು ದೇಶದ ಏಕತೆಗೆ ಅವಮಾನ ಮಾಡಿದಂತೆ ಎಂದು ಪ್ರತಿಪಾದಿಸಿತ್ತು. ಯುಸಿಸಿಗೆ ಸಂಬಂಧಿಸಿದ ಸಂವಿಧಾನದ 44ನೇ ವಿಧಿಯು ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯದ ಅಶಯಕ್ಕೆ ಬಲ ತುಂಬುತ್ತದೆ. ಕೆಲವೊಂದು ವಿಚಾರಗಳಿಗೆ ಸಂಬಂಧಪಟ್ಟಂತೆ ವೈಯಕ್ತಿಕ ಕಾನೂನುಗಳಿವೆ. ಇಂಥ ವಿಭಿನ್ನ ಕಾನೂನುಗಳನ್ನು ಪಾಲಿಸುತ್ತಿರುವವರನ್ನು ಒಂದೇ ವೇದಿಕೆಗೆ ಕರೆತರುವಲ್ಲಿ ಯುಸಿಸಿ ಪ್ರಧಾನ ಪಾತ್ರ ವಹಿಸಲಿದೆ ಎಂದು ಕೇಂದ್ರದ ಕಾನೂನು ಸಚಿವಾಲಯ ತನ್ನ ಪ್ರಮಾಣಪತ್ರದಲ್ಲಿ ವಿವರಿಸಿತ್ತು. ಆ ಮೂಲಕ ಯುಸಿಸಿ ಜಾರಿ ಸಂಬಂಧ ತನ್ನ ಒಲವನ್ನು ವ್ಯಕ್ತಪಡಿಸಿತ್ತು.

ಆದರೆ ಯುಸಿಸಿ ಜಾರಿ ಅತ್ಯಂತ ಸೂಕ್ಷ್ಮ ಮತ್ತು ಮಹತ್ವದ ವಿಷಯವಾಗಿರುವುದರಿಂದ ಈ ಸಂಬಂಧ ಕಾನೂನು ರಚನೆ ಮತ್ತು ಜಾರಿಯ ಕುರಿತಂತೆ ಯಾವುದೇ ಬಾಹ್ಯ ಪ್ರಾಧಿಕಾರ, ಸಂಸ್ಥೆ ಅಥವಾ ನ್ಯಾಯಾಲಯ ಸಂಸತ್‌ಗೆ ನಿರ್ದೇಶನ ನೀಡಲಾಗದು. ಕಾನೂನು ರಚನೆ ಸಂಸತ್‌ನ ಪರಮಾಧಿಕಾರವಾಗಿದ್ದು ಕಾನೂನು ರಚನೆ ನೀತಿ ನಿರೂಪಣೆಗೆ ಸಂಬಂಧಿಸಿದ್ದಾಗಿದೆ ಎಂದು ಕೇಂದ್ರ ಸರಕಾರ ಸ್ಪಷ್ಟ ಮಾತುಗಳಲ್ಲಿ ಹೇಳಿತ್ತು.

ಸಮಾನ ನಾಗರಿಕ ಸಂಹಿತೆ ಜಾರಿ ಸಂಬಂಧ ಈ ಹಿಂದೆ 21ನೇ ಕಾನೂನು ಆಯೋಗ 2018ರ ಆಗಸ್ಟ್‌ನಲ್ಲಿ ಸಾರ್ವಜನಿಕರು, ವಿವಿಧ ಸಂಘಟನೆಗಳ ಸಹಿತ ಸಂಬಂಧಿತರಿಂದ ಸಲಹೆ, ಆಕ್ಷೇಪ, ಅಭಿಪ್ರಾಯಗಳನ್ನು ಸಂಗ್ರಹಿಸಿ, ಕೇಂದ್ರ ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು. ಆದರೆ ಇದು ದೇಶದ ಏಕತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಈಗ ಮತ್ತೆ 22ನೇ ಕಾನೂನು ಆಯೋಗದ ಮೂಲಕ ಸಾರ್ವಜನಿಕರಿಂದ ಯುಸಿಸಿ ಜಾರಿ ಕುರಿತಂತೆ ಸಾರ್ವಜನಿಕರ ಅಭಿಪ್ರಾಯ ಕೋರಲು ನಿರ್ಧರಿಸಿದೆ. ಅದರಂತೆ ಕಾನೂನು ಆಯೋಗ ಈ ಸಂಬಂಧ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳಿಗೆ ಸಮಾನ ನಾಗರಿಕ ಸಂಹಿತೆ ಜಾರಿ ಬಗ್ಗೆ ತಮ್ಮ ಅಭಿಪ್ರಾಯ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ಕುರಿತಂತೆ ವಿಪಕ್ಷಗಳು ಈಗಾಗಲೇ ಕೇಂದ್ರದ ವಿರುದ್ಧ ಮುಗಿಬಿದ್ದಿವೆ.

ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕೂ ಕಡಿಮೆ ಅವಧಿ ಉಳಿದಿರುವಂತೆಯೇ ಕೇಂದ್ರ ಸರಕಾರ ರಾಜಕೀಯವಾಗಿ ಅತ್ಯಂತ ವಿವಾದಾತ್ಮಕವಾಗಿರುವ ಸಮಾನ ನಾಗರಿಕ ಸಂಹಿತೆ ಜಾರಿಯತ್ತ ಮುಂದಡಿ ಇಟ್ಟಿದೆ. ಈ ಮೂಲಕ ಕೇಂದ್ರ ಸರಕಾರ ಈ ವರ್ಷಾಂತ್ಯದೊಳಗಾಗಿ ಮತ್ತೂಂದು ಮಾಸ್ಟರ್‌ ಸ್ಟ್ರೋಕ್‌ಗೆ ಸನ್ನದ್ಧವಾದಂತೆ ಕಂಡುಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next