Advertisement

ಜಾಗತಿಕ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಉಬರಡ್ಕ ಉಮೇಶ ಶೆಟ್ಟಿ

11:12 AM Sep 01, 2017 | |

ಪ್ರಮಾಣಬದ್ಧ ನಿಲುವು, ಧೀರ ಗಂಭೀರ ಸ್ವರ, ಬಟ್ಟಲು ಕಂಗಳು, ಸಭ್ಯ-ಸುಸಂಸ್ಕೃತ ನಡೆ-ನುಡಿ, ಕಲಾನಿಷ್ಠೆ, ವೃತ್ತಿಪರತೆ ಈ ಎಲ್ಲವುಗಳು ಸಮಪಾಕಗೊಂಡ ಅಪರೂಪದ ಯಕ್ಷ ಕಲಾವಿದ ಉಬರಡ್ಕ ಉಮೇಶ ಶೆಟ್ಟರು. ಕುಂದಾಪುರದ ಕಡೆ ಅವರಿಗೆ “ಅಣ್ಣಪ್ಪ ಶೆಟ್ಟ’ರೆಂದೇ ಹೆಸರು. ಕಾರಣ, ಪುತ್ತೂರು ನಾರಾಯಣ ಹೆಗ್ಡೆಯವರ ಅನಂತರ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಣ್ಣಪ್ಪ ಪಾತ್ರವನ್ನು ಅಷ್ಟೇ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದವರು ಅವರು. ಸುಮಾರು ನಾಲ್ಕು ದಶಕಗಳ ಕಾಲ ಧರ್ಮಸ್ಥಳ ಮೇಳವೊಂದರಲ್ಲೇ ತಿರುಗಾಟ ನಡೆಸಿದ ಉಮೇಶ ಶೆಟ್ಟರು ಈಗ ವೃತ್ತಿ ಮೇಳದಿಂದ ನಿವೃತ್ತರು. ಮಂಗಳೂರಿನ ಜಾಗತಿಕ ಬಂಟ ಪ್ರತಿಷ್ಠಾನವು ಡಾ| ಡಿ.ಕೆ. ಚೌಟ ದತ್ತಿನಿಧಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ವಾರ್ಷಿಕ ಪ್ರಶಸ್ತಿಗೆ ಈ ಬಾರಿ ಉಬರಡ್ಕ ಆಯ್ಕೆಯಾಗಿದ್ದಾರೆ.

Advertisement

ಸುಳ್ಯ ತಾಲೂಕಿನ ಉಬರಡ್ಕದಲ್ಲಿ ಕಿಟ್ಟಣ್ಣ ಶೆಟ್ಟಿ-ಯಮುನಾ ದಂಪತಿಗೆ ಜೂನ್‌ 16, 1958ರಲ್ಲಿ ಜನಿಸಿದ ಉಮೇಶ ಶೆಟ್ಟರು ಓದಿದ್ದು 7ನೇ ತರಗತಿ. ಬಳಿಕ ಅವರು ಸೇರಿದ್ದು ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರವನ್ನು. ಕುರಿಯ ವಿಠಲ ಶಾಸ್ತ್ರಿ ಮತ್ತು ಪಡ್ರೆ ಚಂದು ಗುರುದ್ವಯರ ಗರಡಿಯಲ್ಲಿ ಪಳಗಿದ ಅವರದು ತಿದ್ದಿದ ನಾಟ್ಯ; ಸುಸ್ಪಷ್ಟ ಅರ್ಥಗಾರಿಕೆ. ಯಕ್ಷಗಾನದ ಮೇರು ಕಲಾವಿದ ಅಳಿಕೆ ರಾಮಯ್ಯ ರೈಯವರ ಅಳಿಯನಾಗಿರುವುದು ಅವರ ಕಲಾ ಪ್ರಪೂರ್ಣತೆಗೆ ಪ್ರೇರಕವಾದ ಅಂಶ.

ತನ್ನ 14ನೇ ವಯಸ್ಸಿಗೆ 1972ರಲ್ಲಿ ಶ್ರೀ ಧರ್ಮಸ್ಥಳ ಮೇಳವನ್ನು ಸೇರಿದ ಶೆಟ್ಟರು 44 ವರ್ಷ ಸೇವೆ ಸಲ್ಲಿಸಿ 2015ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಆ ಮೇಳದಲ್ಲಿರುವಾಗ ಪುತ್ತೂರು ನಾರಾಯಣ ಹೆಗ್ಡೆ ಮತ್ತು ಎಂಪಕಟ್ಟೆ ರಾಮಯ್ಯ ರೈಯವರಿಂದ ಪ್ರಭಾವಿತರಾಗಿದ್ದ ಅವರಿಗೆ ಕಡತೋಕಾ ಮಂಜುನಾಥ ಭಾಗವತರು ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಸಮರ್ಥ ಮಾರ್ಗದರ್ಶನವಿತ್ತು. “ಕ್ಷೇತ್ರ ಮಹಾತ್ಮೆ’ಯ ಅಣ್ಣಪ್ಪ, “ಕೃಷ್ಣಲೀಲೆ’ಯ ಕಂಸ, “ಚೂಡಾಮಣಿ’ಯ ಹನುಮಂತ, “ಅಭಿಮನ್ಯು ಕಾಳಗ’ದ ದ್ರೋಣ ಅವರಿಗೆ ಹೆಸರು ತಂದ ಪಾತ್ರಗಳು. ಹಿರಣ್ಯಕಶ್ಯಪ, ಅತಿಕಾಯ, ದೇವೇಂದ್ರ, ಅರ್ಜುನ, ಭೀಮ, ರಾಮ, ಕೃಷ್ಣ, ಈಶ್ವರ  ಇತ್ಯಾದಿ ಪಾತ್ರಗಳಲ್ಲೂ ಅವರು ತಮ್ಮದೇ ಛಾಪು ಬೀರಿದ್ದಾರೆ. ಅಳಿಕೆಯವರ ಪ್ರಸಿದ್ಧ ಋತುಪರ್ಣ ಪಾತ್ರದಲ್ಲಿಯೂ ಅವರು ಪ್ರೇಕ್ಷಕರ ಗಮನ ಸೆಳೆದುದು ಒಂದು ಹೆಗ್ಗಳಿಕೆ. ಮಳೆಗಾಲದ ವಿಶೇಷ ಕಾರ್ಯಕ್ರಮಗಳಲ್ಲಿ ಹಲವು ತುಳು ಪ್ರಸಂಗಗಳ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದುದು ಅವರ ಸಾಧನೆಯ ಇನ್ನೊಂದು ಮುಖ. ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾದ ಸಂಪೂರ್ಣ ರಾಮಾಯಣದಲ್ಲಿ ಉಮೇಶ ಶೆಟ್ಟಿಯವರ ಶ್ರೀರಾಮನ ಪಾತ್ರ ಕರಾವಳಿಯ ಆಚೆಗಿನ ವೀಕ್ಷಕರಿಗೂ ಪ್ರಿಯವಾಗಿದೆ.

    ಉಬರಡ್ಕ ಪ್ರಶಸ್ತಿ- ಜನಪ್ರಿಯತೆಗಳ ಬೆನ್ನು ಹತ್ತಿದವರಲ್ಲ. ಆದರೂ ಹಲವು ಗೌರವ-ಸಮ್ಮಾನಗಳು ಅವರಿಗೆ ಲಭಿಸಿವೆ. ಬಹರೈನ್‌ ಕನ್ನಡ ಸಂಘ, ಕುವೈಟ್‌ ಬಂಟಾಯನ, ಎಡನೀರು ಮಠ, ಶ್ರೀಕೃಷ್ಣ ಯಕ್ಷ ಸಭಾ, ಸತ್ಯಸಾಯಿ ವಿದ್ಯಾಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ, ಪೈಲಾರು ಯಕ್ಷೊàತ್ಸವ, ಸುಳ್ಯ ತಾಲೂಕು ಕನ್ನಡ ಸಮ್ಮೇಳನ, ಕಾಂತಾವರ ಕ್ಷೇತ್ರ, ಹವ್ಯಾಸಿ ಬಳಗ ಕದ್ರಿ, ಕರಾವಳಿ ಯಕ್ಷಗಾನ ಕಲಾವಿದರು ಮೊದಲಾದ ಸಂಘಟನೆಗಳಿಂದ ಅವರು ಸಮ್ಮಾನಿತರಾಗಿದ್ದಾರೆ. 1994ರಲ್ಲಿ ದಿಲ್ಲಿಯ ಕಾರ್ಯಕ್ರಮವೊಂದರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್‌ದಯಾಳ್‌ ಶರ್ಮ ಅವರಿಂದ ಗೌರವ ಪುರಸ್ಕಾರ ಪಡೆದಿರುವುದು ಅವರ ಬದುಕಿನ ಅವಿಸ್ಮರಣೀಯ ಘಟನೆ.

    ಪತ್ನಿ ಉಷಾ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಪ್ರಸ್ತುತ ಬೆಳ್ತಂಗಡಿ ತಾಲೂಕಿನ ನಿಡ್ಲೆಯ “ಕಲಾಕೌಸ್ತುಭ’ದಲ್ಲಿ ವಾಸವಾಗಿರುವ ಉಮೇಶ ಶೆಟ್ಟರು ಮೇಳ ನಿವೃತ್ತಿಯ ಬಳಿಕವೂ ತಮ್ಮ ಯಕ್ಷಗಾನ ವ್ಯವಸಾಯವನ್ನು ಮುಂದುವರಿಸಿದ್ದಾರೆ. ಸತ್ಯಸಾಯಿ ವಿದ್ಯಾಸಂಸ್ಥೆಗಳು ಅಳಿಕೆ, ಇರಾ ಸೋಮನಾಥೇಶ್ವರ ದೇವಸ್ಥಾನ ಹಾಗೂ ನಿಡ್ಲೆ ಶಾಲೆಗಳಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸುವುದರ ಮೂಲಕ ಅನೇಕ ಯಕ್ಷಗಾನಾಸಕ್ತರಿಗೆ ತರಬೇತು ನೀಡುತ್ತಿದ್ದಾರೆ. ಅವರ ಪುತ್ರ ಅವಿನಾಶ್‌ ಶೆಟ್ಟಿ ಬೆಂಗಳೂರಿನಲ್ಲಿ ಸ್ವಂತ ಉದ್ಯಮದೊಂದಿಗೆ ಯಕ್ಷಗಾನದ ಹವ್ಯಾಸಿ ಕಲಾವಿದನಾಗಿ ಕಲೆ ರಕ್ತಗತವೆಂಬುದನ್ನು ಸಾಬೀತು ಪಡಿಸಿದ್ದಾರೆ.

Advertisement

    ಇದೇ ಸಪ್ಟೆಂಬರ್‌ 3, 2017ರಂದು ಮಂಗಳೂರಿನ ಹೊಟೇಲ್‌ ಮೋತಿಮಹಲ್‌ ಸಭಾಂಗಣದಲ್ಲಿ ಜರಗುವ ಜಾಗತಿಕ ಬಂಟ ಪ್ರತಿಷ್ಠಾನದ ಮಹಾಸಭೆಯಲ್ಲಿ ಉಬರಡ್ಕ ಉಮೇಶ ಶೆಟ್ಟರಿಗೆ ನಗದು ಪುರಸ್ಕಾರದೊಂದಿಗೆ ಬಂಟ ಪ್ರತಿಷ್ಠಾನ ಪ್ರಶಸ್ತಿ ಪ್ರದಾನವಾಗಲಿದೆ.

ಭಾಸ್ಕರ ರೈ ಕುಕ್ಕುವಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next