ಹೊಸದಿಲ್ಲಿ: ಉದ್ಯೋಗಿಗಳಿಗೆ ಖುಷಿ ನೀಡುವ ವಿಚಾರವನ್ನು ಭವಿಷ್ಯ ನಿಧಿ ಮಂಡಳಿ ಶುಕ್ರವಾರ ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಉದ್ಯೋಗದಾತರನ್ನು ಅವಲಂಬಿಸದೆ ನೇರವಾಗಿ ಯುನಿವರ್ಸಲ್ ಅಕೌಂಟ್ ನಂಬರ್ ಅನ್ನು ಪಡೆದುಕೊಳ್ಳುವುದು ಸಾಧ್ಯವಾಗಲಿದೆ. ಇದರಿಂದಾಗಿ ಉದ್ಯೋಗ ಬದಲಾವಣೆ ಮಾಡಿದ ಸಂದರ್ಭದಲ್ಲಿ ಭವಿಷ್ಯ ನಿಧಿ ವರ್ಗಾವಣೆ ಮಾಡಿಸಿಕೊಳ್ಳುವುದು ಸುಲಭವಾಗಲಿದೆ.
ಉದ್ಯೋಗಿಗಳು ಭವಿಷ್ಯ ನಿಧಿ ಮಂಡಳಿ (ಇಪಿಎಫ್ಒ) ವೆಬ್‌ಸೈಟ್ ಮೂಲಕವೇ ಭವಿಷ್ಯ ನಿಧಿಗೆ, ವಿಮೆಗೆ ನೋಂದಣಿ ಮಾಡಿಕೊಳ್ಳಲಿದ್ದಾರೆ. ಇದರ ಜತೆಗೆ 65 ಲಕ್ಷ ಮಂದಿ ಪಿಂಚಣಿದಾರರು ಪಿಂಚಣಿ ಪಾವತಿ ಮಾಡಿದ ದಾಖಲೆಗಳನ್ನು ವೆಬ್‌ಸೈಟ್‌ನಿಂದ ನೇರವಾಗಿ ಡಿಜಿಲಾಕರ್‌ಗೆ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನೂ ಕಲ್ಪಿಸಿ ಕೊಟ್ಟಿದೆ.
ಅದಕ್ಕಾಗಿ ರಾಷ್ಟ್ರೀಯ ಇ-ಆಡಳಿತ ವಿಭಾಗದ ಜತೆಗೆ ಭವಿಷ್ಯ ನಿಧಿ ಮಂಡಳಿ ಒಪ್ಪಂದ ಮಾಡಿಕೊಂಡಿದೆ. ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಸಂಸ್ಥೆಯ 67ನೇ ಸಂಸ್ಥಾಪನಾ ದಿನ ಪ್ರಯುಕ್ತ ಎರಡು ಸೇವೆಗಳಿಗೆ ಚಾಲನೆ ನೀಡಿದ್ದಾರೆ.