ಮುಂಬೈ: ವರ್ಣರಂಜಿತ ಕ್ರಿಕೆಟ್ ಕೂಟ ಇಂಡಿಯನ್ ಪ್ರೀಮಿಯರ್ ಲೀಗ್ ಈ ಬಾರಿ ಕೋವಿಡ್-19 ಸೋಂಕಿನ ಕಾರಣದಿಂದ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಮಾರ್ಚ್ ಅಂತ್ಯದಲ್ಲಿ ಆರಂಭವಾಗಬೇಕಿದ್ದ ಕೂಟವನ್ನು ಅಕ್ಟೋಬರ್ ನಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದೇ ಸಮಯದಲ್ಲಿ ಭಾರತದ ಹೊರಗೆ ಐಪಿಎಲ್ ನಡೆಸುವುದಾದರೆ ನಾವು ರೆಡಿ ಎಂದು ಯುಎಇ ಹೇಳಿದೆ.
ಅಕ್ಟೋಬರ್ ನಲ್ಲಿ ಟಿ20 ವಿಶ್ವಕಪ್ ನಡೆಯಬೇಕಿದೆ. ಒಂದು ವೇಳೆ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಈ ಕೂಟ ಮುಂದೂಡಿಕೆಯಾದರೆ ಐಪಿಎಲ್ ನಡೆಯುವುದು ನಿಶ್ಚಿತ ಎನ್ನಲಾಗಿದೆ. ಜೂನ್ 10ರಂದು ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ.
ಒಂದು ವೇಳೆ ಭಾರತದ ಹೊರಗೆ ಐಪಿಎಲ್ ನಡೆಸಲು ಉತ್ಸುಕವಾದರೆ, ಆತಿಥ್ಯ ವಹಿಸಿಕೊಳ್ಳಲು ನಾವು ಸಿದ್ದರಿದ್ದೇವೆ ಎಂದು ಯುಎಇ ಕ್ರಿಕೆಟ್ ಬೋರ್ಡ್ ಹೇಳಿದೆ. ಬೋರ್ಡ್ ನ ಕಾರ್ಯದರ್ಶಿ ಮುಬಾಶ್ಶಿರ್ ಉಸ್ಮಾನಿಯವರ ಮಾತನ್ನು ಗಲ್ಫ್ ನ್ಯೂಸ್ ಪತ್ರಿಕೆ ಪ್ರಕಟಿಸಿದೆ.
ಈ ಹಿಂದೆಯೂ ಯಶಸ್ವಿಯಾಗಿ ಐಪಿಎಲ್ ನಡೆಸಿರುವ ಅನುಭವ ನಮಗಿದೆ. ಈ ಬಹುರಾಷ್ಟ್ರೀಯ ಟೂರ್ನಮೆಂಟ್ ಗಳನ್ನೂ ನಡೆಸಿರುವ ನಮಗೆ ಈ ಬಾರಿ ಐಪಿಎಲ್ ನಡೆಸುವ ವಿಶ್ವಾಸವಿದೆ ಎಂದು ಮುಬಾಶ್ಶಿರ್ ಉಸ್ಮಾನಿ ಹೇಳಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯೂ ಈ ಬಾರಿ ಐಪಿಎಲ್ ಗೆ ಆತಿಥ್ಯ ವಹಿಸಲು ಉತ್ಸುಕತೆ ತೋರಿದೆ. ಆದರೆ ಬಿಸಿಸಿಐ ಏನು ನಿರ್ಧಾರ ಮಾಡುತ್ತದೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.