Advertisement

ಕಸಾಯಿಖಾನೆಗೆ ಅನುದಾನ ಸಲಹೆ ಮಾತ್ರ: ಖಾದರ್‌

08:00 AM Oct 09, 2018 | Team Udayavani |

ಮಂಗಳೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ಸ್ವಚ್ಛ ನಗರ ಆಶಯದಂತೆ ಮಂಗಳೂರಿನ ಕಸಾಯಿಖಾನೆ ಸ್ವಚ್ಛವಾಗಿಡಲು ಪೂರಕ ಅಭಿವೃದ್ಧಿ ಕುರಿತಂತೆ ಸಲಹೆ ಮಾತ್ರ ನೀಡಿದ್ದೇನೆ. ಇದಕ್ಕೆ ಅನುಮತಿ ಇನ್ನೂ ದೊರಕಿಲ್ಲ. ಇದು ಬೇಡವೆನ್ನುವುದಾದರೆ ಬಿಜೆಪಿ ಜನಪ್ರತಿನಿಧಿಗಳು ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದು ಈ ಸಲಹೆಯನ್ನು ತಿರಸ್ಕರಿಸಲಿ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ. ಸಚಿವ ಖಾದರ್‌ ಸ್ಮಾರ್ಟ್‌ ಸಿಟಿಯ ಹಣವನ್ನು ಕಸಾಯಿಖಾನೆ ಅಭಿವೃದ್ಧಿಗೆ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಪ್ರತಿಕ್ರಿಯಿಸಿದರು.

Advertisement

ಸ್ಮಾರ್ಟ್‌ ಸಿಟಿಯ ಪ್ರಮುಖ ಉದ್ದೇಶ ನಗರದ ಸ್ವಚ್ಛತೆ ಹಾಗೂ ಸುಂದರೀಕರಣ. ಕುದ್ರೋಳಿಯ ಕಸಾಯಿಖಾನೆ ಸ್ವತ್ಛವಾಗಿರಿಸಿ, ಅಲ್ಲಿ ಮಾಡುವ ಮಾಂಸ ಆರೋಗ್ಯಪೂರ್ಣವಾಗಿರಬೇಕೆಂಬ ಉದ್ದೇಶದಿಂದ ಸ್ಮಾರ್ಟ್‌ಸಿಟಿ ಸಲಹಾ ಮಂಡಳಿ ಸಭೆಯಲ್ಲಿ ಅದರ ಅಭಿವೃದ್ಧಿಗೆ ಸಲಹೆ ನೀಡಿದ್ದೇನೆ. ಸ್ವಚ್ಛ ಭಾರತ ಯೋಜನೆಯಡಿ ಘನ ತ್ಯಾಜ್ಯ ಉತ್ಪಾದನೆ ಆಗುವಲ್ಲೇ ವೈಜ್ಞಾನಿಕ ನಿರ್ವಹಣೆ ಆಗಬೇಕಿದೆ. ಮಂಗಳೂರು ಕಸಾಯಿಖಾನೆ ತ್ಯಾಜ್ಯವನ್ನು ಹತ್ತಿರದ ಚರಂಡಿಗೆ ಬಿಡುತ್ತಿದ್ದಾರೆ ಎಂಬ ಆರೋಪ ಇತ್ತು. ಸ್ಮಾರ್ಟ್‌ಸಿಟಿ ಯೋಜನೆಯಡಿ ನಾವು ಸೇವಿಸುವ ಆಹಾರವೂ ಸ್ವಚ್ಛವಿರಬೇಕು ಎಂಬ ಆಶಯದಿಂದ ಸಲಹೆ ನೀಡಿದ್ದೆ. ಸಲಹಾ ಮಂಡಳಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮನಪಾ ಮೇಯರ್‌, ಆಯುಕ್ತರ ಜತೆಗೆ ಮಂಗಳೂರು ಪಾಲಿಕೆಯ ವಿಪಕ್ಷ ನಾಯಕರು ಕೂಡ ಇದ್ದಾರೆ. ಅವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಕೆಲವರಿಗೆ ವಿವಾದ ಸೃಷ್ಟಿಸುವುದೇ ಉದ್ದೇಶ. ಅವರು ಮಾಧ್ಯಮದೆದುರು ಮಾತನಾಡುವ ಬದಲು ಕೇಂದ್ರ ಸಚಿವಾಲಯಕ್ಕೆ ಈ ಸಂಬಂಧ ಪತ್ರ ಬರೆಯಲಿ. ಕೇಂದ್ರ ಯಾವ ತೀರ್ಮಾನ ಕೈಗೊಳ್ಳಲಿದೆಯೋ ಅದರಂತೆ ಮುಂದಡಿ ಇಡೋಣ ಎಂದರು. ಮೇಯರ್‌ ಭಾಸ್ಕರ್‌ ಕೆ., ಉಪ ಮೇಯರ್‌ ಮುಹಮ್ಮದ್‌ ಕೆ., ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ನವೀನ್‌ ಡಿ’ಸೋಜಾ, ರಾಧಾಕೃಷ್ಣ, ಪ್ರಮುಖರಾದ ಮಮತಾ ಗಟ್ಟಿ, ಸದಾಶಿವ ಉಳ್ಳಾಲ, ಪದ್ಮನಾಭ ರೈ ಉಪಸ್ಥಿತರಿದ್ದರು.

ಮೀನುಗಾರಿಕೆ ಜೆಟ್ಟಿಗೆ ಇನ್ನಷ್ಟು ನೆರವು
ನಗರದ ಮೀನುಗಾರಿಕೆ ಬಂದರಿನ ಮೂರನೇ ಹಂತದ ಜೆಟ್ಟಿ ಯೋಜನೆಯ ತಾತ್ಕಾಲಿಕ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ 4.5 ಕೋ.ರೂ. ಮೊತ್ತದ ಯೋಜನಾ ವರದಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸಚಿವ ಯು.ಟಿ. ಖಾದರ್‌ ಸೂಚಿಸಿದ್ದಾರೆ. ಜೆಟ್ಟಿಯ ಕಾಮಗಾರಿಯನ್ನು ಸೋಮವಾರ ವೀಕ್ಷಿಸಿ, ಮೀನುಗಾರ ಮುಖಂಡರು, ಅಧಿಕಾರಿಗಳ ಜತೆಗೆ ಚರ್ಚಿಸಿ, ಎರಡೂ ಜೆಟ್ಟಿಗಳ ಸಮಗ್ರ ಅಭಿವೃದ್ಧಿಯ ರೂಪುರೇಷೆ ರೂಪಿಸಿ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಸೇರಿಸಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಮೂರನೇ ಹಂತದ ಜೆಟ್ಟಿ ನಿರ್ಮಾಣವು ವಿನ್ಯಾಸದ ವ್ಯತ್ಯಾಸ, ಬಳಿಕ ಎರಡು ವರ್ಷ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರಿಂದ ವಿಳಂಬವಾಗಿತ್ತು. ಅನುದಾನ ಬಿಡುಗಡೆಯಲ್ಲಿ ಕೇಂದ್ರ, ರಾಜ್ಯ ಸರಕಾರಗಳ ಪಾಲು ವಿಂಗಡಣೆ ಸಮಸ್ಯೆ ಎದುರಾಗಿತ್ತು. ಬೋಟು ನಿಲುಗಡೆಗೆ ಜಾಗ ಸಾಕಾಗುತ್ತಿಲ್ಲ ಎಂದು ಮುಖಂಡರು ಹೇಳಿದರು.

ನಿತಿನ್‌ ಕುಮಾರ್‌, ಮೋಹನ್‌ ಬೆಂಗರೆ, ಚೇತನ್‌ ಬೆಂಗರೆ, ಮನೋಹರ್‌ ಬೋಳೂರು, ರಾಜೇಶ್‌ ಉಳ್ಳಾಲ, ಬಾಬು ಉಳ್ಳಾಲ, ಇಲಾಖೆ ಉಪನಿರ್ದೇಶಕ ಚಿಕ್ಕವೀರ ನಾಯಕ್‌, ಇಬ್ರಾಹಿಂ ಬೆಂಗರೆ, ಸಿಆರ್‌ಝಡ್‌ ಅಧಿಕಾರಿ ಮಹೇಶ್‌, ಸ.ಎಂಜಿನಿಯರ್‌ ಮನೋಹರ್‌ ಉಪಸ್ಥಿತರಿದ್ದರು.

Advertisement

ಎಲ್ಲ ಕ್ಷೇತ್ರ ಸ್ವಚ್ಛವಾಗಿರಲಿ
ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದ ಸಂದರ್ಭ ಒಂದು ವರ್ಷದ ಅವಧಿಗೆ ಕುದ್ರೋಳಿ ಕಸಾಯಿಖಾನೆಯನ್ನು ಬಿಜೆಪಿ ಪರ ಸಂಘಟನೆಯೇ ನಿರ್ವಹಿಸಿತ್ತು. ಇಲ್ಲಿ ಸ್ವಚ್ಛವಾಗಿಲ್ಲ ಎಂದು ದೂರು ನೀಡಿದ್ದರು. ಸ್ವಚ್ಛ ಭಾರತ ಎಂದು ಹೇಳಿದರೆ ಸಾಲದು; ಎಲ್ಲ ಕ್ಷೇತ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಚಿವ ಖಾದರ್‌ ಹೇಳಿದರು.

ಗೋಶಾಲೆ ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ ಎನ್ನುತ್ತಾರೆ. ಆದರೆ ಸ್ಮಾರ್ಟ್‌ ಸಿಟಿಯಲ್ಲಿ ಗೋಶಾಲೆ ಬಗ್ಗೆ ಯೋಜನೆ ಇಲ್ಲ ಎಂಬುದನ್ನು ಯಾಕೆ ಕೇಂದ್ರದ ಗಮನಕ್ಕೆ ತರುತ್ತಿಲ್ಲ ಎಂದು ಪ್ರಶ್ನಿಸಿದ ಸಚಿವರು, ಅಕ್ರಮ ಗೋ ಸಾಗಾಟಕ್ಕೆ ಯಾರೂ ಬೆಂಬಲ ನೀಡಿಲ್ಲ. ಆ ಬಗ್ಗೆ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ಮಧ್ಯಪ್ರವೇಶ ಮಾಡುವುದಿಲ್ಲ ಎಂದರು.

ದಸರಾ ಫ್ಲೆಕ್ಸ್‌ಗೆ ರಿಯಾಯಿತಿ
ದಸರಾ ಹಿನ್ನೆಲೆಯಲ್ಲಿ ಫ್ಲೆಕ್ಸ್‌ ಬ್ಯಾನರ್‌ ಅಳವಡಿಸಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಸರಾ ನಾಡಿನ ಹಬ್ಬ. ಇದನ್ನು ಎಲ್ಲರೂ ಸಂಭ್ರಮದಿಂದ ಆಚರಿಸುತ್ತಾರೆ. ಹೀಗಾಗಿ ದಸರಾ ಫ್ಲೆಕ್ಸ್‌ ಬ್ಯಾನರ್‌ಗಳನ್ನು ತೆಗೆಯದಂತೆ ಸೂಚಿಸಲಾಗಿದೆ. ರಾಜಕಾರಣಿಗಳ ಪೋಸ್ಟರ್‌ ತೆಗೆಸಿದರೆ ಪರವಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next