Advertisement

ಉ.ಪ್ರದಲ್ಲಿ ಬಿಜೆಪಿಗೆ ಘಟಬಂಧನದ ತೊಡಕು

12:15 PM May 24, 2019 | Team Udayavani |

ಉತ್ತರ ಪ್ರದೇಶದಲ್ಲಿ 2014ರ ಚುನಾವಣೆಯಲ್ಲಿ 73 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ಓಟಕ್ಕೆ ಈ ಬಾರಿ ಮಹಾಗಠಬಂಧನ ಕೊಂಚ ಅಡ್ಡಿ ಉಂಟು ಮಾಡಿದೆ. ಆದರೆ ಕಾಂಗ್ರೆಸ್‌ ಕೈ ಚೆಲ್ಲಿದೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಸಕ್ರಿಯ ರಾಜಕಾರಣಕ್ಕೆ ಕರೆದುಕೊಂಡು ಬಂದಿದ್ದಂತೂ ಯಾವ ಪರಿಣಾಮವನ್ನೂ ಉಂಟು ಮಾಡಿಲ್ಲ. ಮಹಾಗಠಬಂಧನದಲ್ಲಿ ಸೇರದೇ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಕೇವಲ ರಾಯ್‌ಬರೇಲಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

Advertisement

ಇನ್ನು ಎಸ್‌ಪಿ ಹಾಗೂ ಬಿಎಸ್‌ಪಿ ಒಟ್ಟಾಗಿ ಉತ್ತಮ ಸಾಧನೆ ಮಾಡಿವೆ. ಅದರಲ್ಲೂ ಹಿಂದಿನ 2014 ರಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಮಾಯಾವತಿ ಈ ಬಾರಿ ಮಹಾಗಠಬಂಧನದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲ, ಅವರು ಸಮಾಜವಾದಿ ಪಕ್ಷಕ್ಕಿಂತ ಹೆಚ್ಚು ಸೀಟ್‌ಗಳನ್ನೂ ಗಳಿಸಿದ್ದಾರೆ.

ಬಿಜೆಪಿಗೆ ಕಳೆದ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಹಿನ್ನಡೆಯಾಗಿದ್ದು, ಹಿಂದಿ ಭಾಷಿಕ ರಾಜ್ಯಗಳ ಪೈಕಿ ಉತ್ತರ ಪ್ರದೇಶದಲ್ಲಿ ಮಾತ್ರ. ಉಳಿದಂತೆ ಇತರ ರಾಜ್ಯಗಳಲ್ಲಿ ಮೋದಿ ಅಲೆ ಉತ್ತಮವಾಗಿಯೇ ಕೆಲಸ ಮಾಡಿದೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಪಕ್ಷಗಳು ಮಹಾಗಠಬಂಧನ ಮಾಡಿಕೊಂಡು ಬಿಜೆಪಿಗೆ ಭಾರಿ ಹಿನ್ನಡೆ ಉಂಟು ಮಾಡುತ್ತಾರೆ. ಇದರಿಂದ ಬಿಜೆಪಿ ಬಹುಮತ ಕಳೆದುಕೊಳ್ಳಲೂಬಹುದು ಎಂದು ಹೇಳಲಾಗಿತ್ತು. ಆದರೆ, ಬಿಜೆಪಿ ಒಂದು ಹಂತಕ್ಕೆ ಪೈಪೋಟಿ ನೀಡಿದ್ದಂತೂ ನಿಜ. ಆದರೆ ಇದರಿಂದ ಬಿಜೆಪಿ ಬಹುಮತ ಗಳಿಸಲು ಯಾವುದೇ ಅಡ್ಡಿಯಾಗಿಲ್ಲ. ಆದರೆ ಕಾಂಗ್ರೆಸ್‌ಗೆ ಈ ಬಾರಿ ಹಿನ್ನಡೆಯಾಗಿದ್ದು, ಅಮೇಠಿಯಲ್ಲಿ ಭಾರಿ ಪೈಪೋಟಿ ಕಂಡುಬಂದಿದ್ದರೆ, ರಾಯ್‌ಬರೇಲಿ ಮಾತ್ರವೇ ಕೈಗೆ ಸಿಕ್ಕಂತಾಗಿದೆ.

3 ಸಚಿವರ ಗೆಲುವು
ಉತ್ತರ ಪ್ರದೇಶದ ನಾಲ್ವರು ಸಚಿವರ ಪೈಕಿ ಮೂವರನ್ನು ಈ ಬಾರಿ ಲೋಕಸಭೆ ಚುನಾವಣೆ ಕಣಕ್ಕಿಳಿಸಲಾಗಿತ್ತು. ಈ ಪೈಕಿ ಎಸ್‌ಪಿ ಸಿಂಗ್‌ ಬಘೇಲ್‌, ರೀಟಾ ಬಹುಗುಣ ಜೋಶಿ, ಸತ್ಯದೇವ್‌ ಪಚೌರಿ ಗೆದ್ದಿದ್ದಾರೆ. ಮುಕುಟ ಬಿಹಾರಿ ವರ್ಮಾ ಸೋತಿದ್ದಾರೆ. ಇನ್ನು ಕೇಂದ್ರ ಸಚಿವರ ಪೈಕಿ ಮನೇಕಾ ಗಾಂಧಿ ಮಾತ್ರವೇ ಸೋಲುಂಡಿದ್ದು, ರಾಜನಾಥ್‌ ಸಿಂಗ್‌ ಸೇರಿದಂತೆ ಎಲ್ಲ ಹಾಲಿ ಸಚಿವರೂ ಗೆಲುವು ಸಾಧಿಸಿದ್ದಾರೆ.

Advertisement

ಮತ ಪ್ರಮಾಣ ಹೆಚ್ಚಳ
ಬಿಜೆಪಿ ಉತ್ತರ ಪ್ರದೇಶದಲ್ಲಿ 2014 ಕ್ಕೆ ಹೋಲಿಸಿ­ದರೆ ಕಡಿಮೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರು­ವುದೇನೋ ನಿಜ. ಆದರೆ ಮತಪ್ರಮಾಣದಲ್ಲಿ ಇಳಿಕೆಯಾಗಿಲ್ಲ. 2014ರಲ್ಲಿ ಶೇ. 42.6 ರಷ್ಟು ಮತ ಬಿಜೆಪಿಗೆ ಲಭ್ಯವಾಗಿತ್ತು. ಈ ಬಾರಿ ಶೇ. 49 ರಷ್ಟು ಮತ ಬಿಜೆಪಿಗೆ ರಾಜ್ಯದಲ್ಲಿ ಲಭ್ಯವಾಗಿದೆ. ಇದು ಅತ್ಯಂತ ಮಹತ್ವದ ಅಂಶವಾಗಿದ್ದು, ಕಳೆದ ಐದು ವರ್ಷಗಳಲ್ಲಿ ಶೇ. 6.4 ರಷ್ಟು ಮತಗಳಿಸಿ­ದಂತಾಗಿದೆ.

ಗೆದ್ದ ಪ್ರಮುಖರು
ಅಖೀಲೇಶ್‌ (ಎಸ್‌ಪಿ), ಅಜಮ್‌ಗಢ
ಸ್ಮತಿ ಇರಾನಿ (ಬಿಜೆಪಿ), ಅಮೇಠಿ
ರೀಟಾ ಬಹುಗುಣ (ಬಿಜೆಪಿ), ಪ್ರಯಾಗರಾಜ್‌
ಜ.ವಿ.ಕೆ ಸಿಂಗ್‌ (ಬಿಜೆಪಿ), ಗಾಜಿಯಾಬಾದ್‌
ಹೇಮಮಾಲಿನಿ (ಬಿಜೆಪಿ), ಮಥುರಾ

ಸೋತ ಪ್ರಮುಖರು
ರಾಹುಲ್‌ ಗಾಂಧಿ (ಕಾಂಗ್ರೆಸ್‌), ಅಮೇಠಿ
ಡಿಂಪಲ್‌ ಯಾದವ್‌ (ಎಸ್‌ಪಿ), ಕನೌಜ್‌
ಸಾವಿತ್ರಿ ಬಾಯಿ ಫ‌ುಲೆ (ಕಾಂ), ಬಹ್ರೈಚ್‌
ಶಿವಪಾಲ ಯಾದವ್‌(ಪಿಎಸ್‌ಪಿ), ಫಿರೋಜಾಬಾದ್‌

ಮಹಾಗಠಬಂಧನದ ಜಾತಿವಾದಿ ಹಾಗೂ ಅವಕಾಶವಾದಿ ರಾಜಕಾರಣವನ್ನು ಪ್ರಜ್ಞಾವಂತ ಮತದಾರರು ದೂರವಿಟ್ಟಿದ್ದಾರೆ.
ಯೋಗಿ ಆದಿತ್ಯನಾಥ, ಉ.ಪ್ರ ಸಿಎಂ

ಇದು ಮೋದಿ ಮತ್ತು ಅಮಿತ್‌ ಶಾ ಅವರ ಕಠಿಣ ಪರಿಶ್ರಮಕ್ಕೆ ಸಂದ ಗೆಲುವು. ಅಲ್ಲದೆ ನಮ್ಮ ಕಾರ್ಯಕರ್ತರು ಅವಿರತ ಶ್ರಮಿಸಿ ಈ ಸಾಧನೆ ಮಾಡಿದ್ದಾರೆ.
ಹೇಮಾಮಾಲಿನಿ, ಬಿಜೆಪಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next