ಅಂಬರೀಶ್ ಅಭಿನಯದ “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಕ್ಕೆ “ಯು’ ಪ್ರಮಾಣ ಪತ್ರ ಸಿಕ್ಕಿದೆ. ಶುಕ್ರವಾರ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ, ಯಾವುದೇ ಕಟ್ ಹಾಗೂ ಮ್ಯೂಟ್ ಇಲ್ಲದೆ “ಯು’ ಪ್ರಮಾಣ ಪತ್ರ ನೀಡಿದೆ. ನಿರ್ಮಾಪಕ ಜಾಕ್‌ಮಂಜು ಸೆನ್ಸಾರ್ ಬಳಿಕ ಚಿತ್ರದ ದಿನಾಂಕ ಘೋಷಿಸುವುದಾಗಿ ಹೇಳಿದ್ದರು. ಅದರಂತೆ, ಈಗ ಚಿತ್ರವನ್ನು ಸೆಪ್ಟೆಂಬರ್ 28 ರಂದು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಅಲ್ಲಿಗೆ ಇಷ್ಟು ದಿನಗಳಿಂದ ಚಿತ್ರ ಯಾವಾಗ ಬಿಡುಗಡೆಯಾಗುತ್ತೋ ಎಂದು ಕಾತುರದಿಂದ ಕಾಯುತ್ತಿದ್ದ ಅಂಬರೀಶ್ ಮತ್ತು ಸುದೀಪ್ ಅಭಿಮಾನಿಗಳಿಗೆ ಚಿತ್ರ ಬಿಡುಗಡೆ ಪಕ್ಕಾ ಆಗಿರುವುದರಿಂದ ಅವರ ಸಂತಸಕ್ಕೆ ಪಾರವೇ ಇಲ್ಲ. ಇದು ತಮಿಳಿನ “ಪವರ್ ಪಾಂಡಿ’ ಚಿತ್ರದ ಅವತರಣಿಕೆ. ಚಿತ್ರದಲ್ಲಿ ಅಂಬರೀಶ್ ಪಾತ್ರವೇ ಹೈಲೆಟ್. ಅಂಬರೀಶ್ ಅವರ ಯೌವ್ವನದ ಪಾತ್ರವನ್ನು ಸುದೀಪ್ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ಗುರುದತ್ ಗಾಣಿಗ ನಿರ್ದೇಶಕನ ಪಟ್ಟ ಅಲಂಕರಿಸಿದ್ದಾರೆ.
ತಮ್ಮ ಮೊದಲ ನಿರ್ದೇಶನದ ಚಿತ್ರದ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ ನಿರ್ದೇಶಕ ಗುರುದತ್ ಗಾಣಿಗ, “ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಿ, ಒಂದು ಕಟ್ ಇಲ್ಲದಂತೆ, “ಯು’ ಪ್ರಮಾಣ ಪತ್ರ ನೀಡಿದೆ. ಇದರರ್ಥ. ಕುಟುಂಬ ಸಮೇತ ಈ ಚಿತ್ರವನ್ನು ಯಾವುದೇ ಮುಜುಗರ ಇಲ್ಲದಂತೆ ನೋಡಬಹುದು. ಗಣೇಶ ಹಬ್ಬ ಆಚರಿಸಿ, ಸಂಭ್ರಮದಲ್ಲಲಿರುವ ಮನೆಯವರೆಲ್ಲರೂ ಅಂಥದ್ದೇ ಸಂಭ್ರಮ ಕಾಣಬಹುದಾದ ಚಿತ್ರವಿದು.
ಎಲ್ಲಾ ವರ್ಗದವರಿಗೂ ಇದು ಇಷ್ಟವಾಗುವ ಸಿನಿಮಾ. ಇಲ್ಲಿ ಪ್ರೀತಿ, ವಿಶ್ವಾಸ, ಗೆಳೆತನ ಇತ್ಯಾದಿ ವಿಷಯಗಳಿವೆ. ಚಿಕ್ಕವರು, ದೊಡ್ಡವರು ಎಂಬ ಬೇಧ-ಭಾವ ಇಲ್ಲದಂತೆಯೇ ಒಟ್ಟಿಗೆ ಕುಳಿತು ನೋಡುವ ಚಿತ್ರ ಎಂಬ ಹೆಮ್ಮೆ ನಮ್ಮದು. ಸೆಪ್ಟೆಂಬರ್ 28 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ’ ಎಂದು ಹೇಳುತ್ತಾರೆ. ಮೊದಲ ಸಿನಿಮಾ ನಿರ್ದೇಶಿಸಿರುವುದರಿಂದ ಸಹಜವಾಗಿಯೇ ನನಗೆ ಭಯ ಮತ್ತು ಖುಷಿ ಎರಡೂ ಇದೆ ಎನ್ನುವ ಗುರುದತ್,
“ಮೊದಲ ಚಿತ್ರದಲ್ಲೇ ದಿಗ್ಗಜರನ್ನು ನಿರ್ದೇಶಿಸಿದ ಅವಕಾಶ ಬಹಳಷ್ಟು ಮಂದಿಗೆ ಸಿಗುವುದಿಲ್ಲ. ಇಂಥದ್ದೊಂದು ಅವಕಾಶ ಮಾಡಿಕೊಟ್ಟ ಅಂಬರೀಶ್ ಸರ್, ಸುದೀಪ್ ಸರ್ ಮತ್ತು ನಿರ್ಮಾಪಕ ಜಾಕ್ ಮಂಜು ಅವರಿಗೆ ಥ್ಯಾಂಕ್ಸ್ ಹೇಳ್ತೀನಿ. ಇನ್ನು, ನನ್ನ ಕಲ್ಪನೆಗೆ ಸಹಕರಿಸಿದ ತಂತ್ರಜ್ಞರಿಗೂ ಕೃತಜ್ಞತೆ ಸಲ್ಲಿಸುವುದಾಗಿ’ ಹೇಳುತ್ತಾರೆ ನಿರ್ದೇಶಕ ಗುರುದತ್ ಗಾಣಿಗ. ಅಂದ ಹಾಗೆ, ಚಿತ್ರದ ಹಾಡುಗಳು ನಾಳೆ (ಸೆಪ್ಟೆಂಬರ್ 16) ಬಿಡುಗಡೆಯಾಗಲಿದೆ.