ಆತ ಸರ್ಕಾರಿ ಉದ್ಯೋಗದಲ್ಲಿದ್ದವರು. ಕನ್ನಡ, ಸಂಸ್ಕೃತ, ಇಂಗ್ಲಿಷ್ ಭಾಷೆಯಲ್ಲಿ ಪರಿಣತರು. ಮನೆಮಾತು ತಮಿಳು. ಜಾತಕ, ಸಂಖ್ಯಾಶಾಸ್ತ್ರ ಪ್ರವೀಣರು. ಇವರ ವಂಶಸ್ಥರು ಮೈಸೂರು ಒಡೆಯರ ಆಸ್ಥಾನ ಜ್ಯೋತಿಷಿಯಾಗಿದ್ದರಂತೆ. ಆಫೀಸ್ ಕೆಲಸ ಮುಗಿದ ನಂತರ, ಜಾತಕ ನೋಡುವುದು, ಮಾಡಿಕೊಡುವುದು ಇವರಿಗೆ ಒಳ್ಳೆಯ ಹೆಸರು ಸಂಪಾದನೆಗೆ ಕಾರಣವಾಗಿತ್ತು. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಬೆಂಗಳೂರಿನ ಪದ್ಮನಾಭನಗರದಲ್ಲಿ 3 ಬೆಡ್‌ರೂಮ್‌ನ ಮನೆ, ಗಂಡು ಮಕ್ಕಳಿಬ್ಬರೂ ಒಳ್ಳೆಯ ಕೆಲಸದಲ್ಲಿದ್ದರು. ಇಲ್ಲೊಬ್ಬ ಮಗಳಿಗೂ ಬೆಂಗಳೂರಿನಲ್ಲೇ ಮದುವೆ ಮಾಡಿ ಕೊಟ್ಟಿದ್ದರು.
ವೈಟ್‌ಫೀಲ್ಡ್ನಲ್ಲಿರುವ ಆಫೀಸಿಗೆ ದಿನನಿತ್ಯ ಪದ್ಮನಾಭನಗರದಿಂದ ಹೋಗೋದು ಕಷ್ಟದ ವಿಷಯ ಅಂತ ಆಫೀಸ್ ಪಕ್ಕದಲ್ಲೇ ಮನೆಮಾಡಿ, ಮಗ ಸೊಸೆ ಶಿಫ್ಟ್[- ಆದಾಗ, ಬೆಂಗಳೂರಿನ ಟ್ರಾಫಿಕ್ ಬಗ್ಗೆ ಬೇಸರ ಮೂಡಿತಲ್ಲದೆ ಮಗ ಬೇರೆಯಾದ ಅನ್ನೋ ಸುಳಿವೇ ಅವರಿಗೆ ಸಿಗಲಿಲ್ಲ. 2ನೇ ಮಗನಿಗೆ ಕೆಲಸ ಸಿಕ್ಕಿದ್ದೇ ಬೇರೆ ಊರಲ್ಲಿ. ಹೀಗಾಗಿ ಕೆಲಸದ ನೆಪದಿಂದ ದೂರವಾದ ಮಕ್ಕಳ ಬಗ್ಗೆ ಏನೂ ಕಂಪ್ಲೇಂಟ್ ಇಲ್ಲದೆ, ನಿವೃತ್ತಿ ನಂತರ ಗಂಡ-ಹೆಂಡ್ತಿ ಇಬ್ರೂ ಬರುವ ಪೆನ್ಶನ್ ಹಣದಲ್ಲೇ ಜೀವನ ಮಾಡುತ್ತಿದ್ದರು. ಅಪರೂಪಕ್ಕೆ ತಂದೆ ಮಕ್ಕಳ, ಮೊಮ್ಮಕ್ಕಳ ಭೇಟಿಗಳು.. ಬದುಕನ್ನು ಸರಾಗವಾಗಿ ಸಾಗಿಸಿತ್ತು. ಜಾತಕ ಮಾಡಿ ಕೊಡೋದು,ನೋಡೋದು, ಪುಸ್ತಕ ಬರಿಯೋದು…ಇದರಲ್ಲೇ ಬ್ಯುಸಿಯಾಗಿ ಹೋದವರಿಗೆ ವಿಲನ್ ಆಗಿ ಬಂದದ್ದು ವೃದ್ಧಾಪ್ಯ.
80 ಮತ್ತು 85ರ ಈ ಜೋಡಿಗೆ, ಅದರಲ್ಲೂ ಆಕೆಗೆ 2ನೇ ಮಗನ ಮೇಲೆ ಅತಿ ಪ್ರೀತಿ. ತೀರಾ ಕೈಯಲ್ಲಾಗದ ಪರಿಸ್ಥಿತಿಯಲ್ಲಿ ಆಕೆ ಮಗನ ಜೊತೆ ಕಳೆಯುವ ಬಗ್ಗೆ ಹೇಳಿದಾಗ, ಮನೆಯನ್ನು ತನ್ನ ಹೆಸರಿಗೆ ಮಾಡಿದಲ್ಲಿ ಮಾತ್ರ ಜವಾಬ್ದಾರಿ ಹೊರುವುದಾಗಿ ಆ “ಮಗರಾಯ’ ಹೇಳಿದನಂತೆ. ಅಲ್ಲಿಯವರೆಗೂ ಮಕ್ಕಳಿಂದ ಚಿಕ್ಕಾಸೂ ಬೇಡದಿದ್ದ ಆ ತಾಯಿ ಮಗನ ಮಾತಿನಿಂದ ತೀರಾ ನೊಂದು ಅದೊಂದು ದಿನ ಮಗನ ಹೆಸರು ಕರೆಯುತ್ತಲೇ ಕೊನೆಯುಸಿರೆಳೆದರು.
ತಾಯಿ ಹೋದಮೇಲೆ, ಹಿರಿ ಮಗ ತಂದೆಗೆ ಹೇಳಿದನಂತೆ: “ನನ್ನ ಮನೆಯಲ್ಲಿ ನೀವು ಜಾತಕ ನೋಡೋದು, ಶಾಸ್ತ್ರ ನೋಡೋದು ಎಲ್ಲಾ ಮಾಡೋ ಹಾಗಿಲ್ಲ. ಯಾರೂ ನಿಮ್ಮನ್ನು ನೋಡೋದಕ್ಕೆ ಬರೋ ಹಾಗಿಲ್ಲ. ಹಾಗಿದ್ರೆ ಮಾತ್ರ ನನ್ನ ಮನೆಗೆ ಬನ್ನಿ’ ಅಂತ.
ತೀರಾ ಇತ್ತೀಚೆಗೆ ಮಗಳ ಮನೆಯಲ್ಲಿದ್ದ ಅವರನ್ನು ನೋಡಲು ಹೋಗಿ¨ªೆ. ಮನೆ ಮಾರಿ, ಹಣವನ್ನೆಲ್ಲಾ ಮಕ್ಕಳಿಗೆ ಹಂಚಿಯಾಗಿತ್ತು. ಮಗಳ ಮನೆ ಹತ್ತಿರ ಒಂದು ಸಣ್ಣ ರೂಂ ಸಿಕ್ಕಿದರೆ ಅದರಲ್ಲಿದ್ದು, ಒಬ್ಬರೇ ಬದುಕುವ ಬಗ್ಗೆ ಹೇಳಿಕೊಂಡರು. ಆ ಮಾತು ಕೇಳಿ ತುಂಬಾ ನೋವಾಯ್ತು. ವಯಸ್ಸಾದ ಮೇಲೆ ಮಕ್ಕಳೊಂದಿಗೆ ರಾಜಿ ಮಾಡಿಕೊಳ್ಳುವ ಬಗ್ಗೆ, ಸ್ವಲ್ಪ ತಮ್ಮನ್ನು ಬದಲಾಯಿಸಿಕೊಳ್ಳುವ ಬಗ್ಗೆ ಹೇಳಿದಾಗ, “ಅಲ್ಲಮ್ಮ, ಅಷ್ಟು ಕಷ್ಟದಲ್ಲಿ ಓದಿ, ನನ್ನ ಮೊದಲ ಸಂಬಳದಲ್ಲಿ ತೆಗೆದುಕೊಂಡ ಬೀರು ಅದು. ನೋಡಿ ಇಲ್ಲಿ..’ ಎನ್ನುತ್ತಾ ಬಾಗಿಲು ತೆರೆದು, ಅದರಲ್ಲಿದ್ದ ಅವರ ಸ್ಕೂಲ್ ಸರ್ಟಿಫಿಕೇಟ್, ಬರೆದಿಟ್ಟ ಹಸ್ತಪ್ರತಿಗಳು, ಪತ್ನಿ ಬರೆದ ಪತ್ರ, ಮಕ್ಕಳ ಫೋಟೋಗಳನ್ನು ತೋರಿಸುತ್ತಾ.. “ಈ ಬೀರು ಬಿಟ್ಟು ಬಂದ್ರೆ ಮಾತ್ರ ಅವನ ಮನೆಯಲ್ಲಿ ಇರಬಹುದು ಅಂತಾನೆ’ ಎಂದು ಕಣ್ಣೊರೆಸಿಕೊಂಡರು. ಅದನ್ನು ನೋಡಲಾಗದೇ ಎದ್ದು ಬಂದೆ.
ಮಕ್ಕಳೂ ವೃದ್ಧಾಪ್ಯದ ಹಾಗೆ ಕ್ರೂರರಾಗೋದು ಯಾಕೆ?
– ಅಜ್ಜಿಮನೆ ವಿಜಯಕ್ಕ