Advertisement

ವಿಶಿಷ್ಟ ರಂಗ ಪ್ರಯೋಗ ತ್ರಿಭಾಷಾ ರಂಗೋತ್ಸವ 

08:15 AM Mar 02, 2018 | |

ವನಸುಮ ವೇದಿಕೆ (ರಿ.) ಕಟಪಾಡಿ, ವನಸುಮ ಟ್ರಸ್ಟ್‌ (ರಿ.) ಕಟಪಾಡಿ ಪ್ರವರ್ತನೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ನಾಟಕ ಅಕಾಡಮಿ ಸಹಯೋಗದೊಂದಿಗೆ ತ್ರಿಭಾಷಾ ರಂಗೋತ್ಸವ – 18 ಜ.28ರಿಂದ 30ರ ತನಕ ಎಸ್‌.ವಿ.ಎಸ್‌. ಪ್ರೌಢ ಶಾಲೆ ಕಟಪಾಡಿಯಲ್ಲಿ ಜರಗಿತು.

Advertisement

ಝಜ್‌
ಮೊದಲ ದಿನ ಝಜ್‌ ಪದುವಾರಂಗ ಅಧ್ಯಯನ ಕೇಂದ್ರದಿಂದ “ಝಜ್‌’ ಕೊಂಕಣಿ ನಾಟಕ ಪ್ರದರ್ಶನವಾಯಿತು. ಫಾ| ಅಲ್ವಿನ್‌ ಸೇರಾವೋ ರಚಿಸಿದ ನಾಟಕವನ್ನು ಕ್ರಿಸ್ಟೋಫ‌ರ್‌ ನೀನಾಸಂ ನಿರ್ದೇಶಿಸಿದರು. “ಝಜ್‌’ ನಾಟಕ ಮನುಷ್ಯನ ಎರಡು ಮುಖಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತದೆ. ನಾಟಕದಲ್ಲಿ ಎರಡೇ ಪಾತ್ರಗಳಿದ್ದು, ಒಬ್ಬನು ದೇವರನ್ನು ನಂಬುತ್ತಾನೆ, ಇನ್ನೊಬ್ಬನು ದೇವರನ್ನು ನಂಬದವ. ಒಂದು ಪಾತ್ರವನ್ನು ಕ್ರಿಸ್ಟೋಫ‌ರ್‌ ಇನ್ನೊಂದು ಪಾತ್ರವನ್ನು ಫೆರ್ನಾಂಡಿಸ್‌ ಮಾಡಿದರು. ದೇವರನ್ನು ನಂಬದೆ ಇರುವ ವೈದ್ಯನ ಪ್ರಶ್ನೆಗೆ ನಂಬುವವನು ಬೈಬಲ್‌ ಇನ್ನಿತರ ಧಾರ್ಮಿಕ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ಉತ್ತರ ಕೊಡುತ್ತಾ ಹೋಗುತ್ತಾನೆ. ನಾಸ್ತಿಕ ತನ್ನ ಸ್ನೇಹಿತೆ ಸೋಫಿಯಾ ಸಾವನ್ನು ನೆನಪಿಸಿ ದೇವರಿಗೆ ಬೈಯುತ್ತಾನೆ. ಹಾಗೆಯೇ ಜೀಸಸ್‌ ಗೋರಿಯಿಂದ ಮೇಲೇಳಲಿಲ್ಲ. ಎಲ್ಲವೂ ಕಟ್ಟುಕಥೆ ಕಾಲ್ಪನಿಕ ಎಂದು ಜರೆಯುತ್ತಾನೆ. ಆಸ್ತಿಕ ಉತ್ತರಿಸುತ್ತಾನೆ; ನೀನು ಕಾಲೇಜಿನಲ್ಲಿ ಎಲೆಕ್ಷನ್‌ಗೆ ನಿಂತಿದ್ದೆ. ನಿನಗೆ ನಾಲ್ಕು ಲಕ್ಷ ಖರ್ಚಾಗಿದೆ ಎಂದೆ. ಒಟ್ಟು 300 ವಿದ್ಯಾರ್ಥಿಗಳಿದ್ದರು. ನೀನು ಗೆದ್ದೆ. ಆದರೂ ಕೇವಲ 160 ಓಟುಗಳು ನಿನಗೆ ಸಿಕ್ಕಿವೆ. ಈಗ ಮೀಡಿಯಾ ಇದೆ ಫೇಸ್‌ ಬುಕ್‌ ಇದೆ, ಆದರೂ ನಿನಗೆ 4 ಲಕ್ಷ ಖರ್ಚಾಯಿತು. ಕೇವಲ 10 ಓಟಿನಲ್ಲಿ ನೀನು ಗೆದ್ದೆ, ಅದೂ ಕಾಲೇಜ್‌ ಕ್ಯಾಂಪಸಿನೊಳಗೆ ಮಾತ್ರ. ಆದರೆ ಜೀಸಸ್‌ ಯಾವುದೇ ಮೀಡಿಯಾ ಇಲ್ಲದಿದ್ದ ಸಮಯದಲ್ಲಿ ವಿಶ್ವವ್ಯಾಪಿಯಾಗಿ ಬೆಳೆದರು ಎಂದು ತರ್ಕ ಮಂಡಿಸುತ್ತಾನೆ. ಈ ರೀತಿ ಅವರಿಬ್ಬರ ನಡುವೆ ತರ್ಕ ಬೆಳೆಯುತ್ತಾ ಹೋಗುತ್ತದೆ.ವೈದ್ಯನಿಗೆ ತನ್ನ ಮೇಲೆಯೇ ವಿಶ್ವಾಸವಿರಲಿಲ್ಲ. ಅವನ ನೆರಳು ಅವನಿಗೆ ಭರವಸೆಯನ್ನು ನೀಡುತ್ತದೆ. ಮೂರು ಬಾರಿ ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡುತ್ತಾನೆ. ಅವನ ನೆರಳು ಇದರಿಂದ ಬಚಾವು ಮಾಡುತ್ತದೆ.ಹೀಗೆ ನಾಟ ಆಸ್ತಿಕ ಮತ್ತು ನಾಸ್ತಿಕವಾದದ ತಾಕಲಾಟಕ್ಕೆ ಬೆಳಕು ಹಿಡಿಯುತ್ತದೆ. ಹಿನ್ನೆಲೆ ಸಂಗೀತವೂ ಬೆಳಕಿನ ಸಂಯೋಜನೆ ಪೂರಕವಾಗಿದ್ದು, ನಾಟಕ ಕುತೂಹಲ ಕಾಯ್ದುಕೊಂಡು ಹೋಯಿತು. ವೈದ್ಯನ ಚಿತ್ರಣವನ್ನು ನಾಟಕೀಯವಾಗಿ ಕಟ್ಟಿಕೊಡುವುದರಲ್ಲಿ ಪಾತ್ರಧಾರಿ ಯಶಸ್ವಿಯಾದರು. ನಿರ್ದೇಶಕ ಕ್ರಿಸ್ಟೋಫ‌ರ್‌ ನೀನಾಸಂ ರಂಗದಲ್ಲಿ ಅಕಾಡೆಮಿಕ್‌ ಶಿಸ್ತನ್ನು ಕಾಯ್ದುಕೊಂಡರು. 

ಮಲಾಲಾ ಅಲ್ಲಾ
ಎರಡನೇ ದಿನ ವನಸುಮ ವೇದಿಕೆ (ರಿ.) ಕಟಪಾಡಿ ತಂಡದವರು ಅಭಿನಯಿಸಿದ ಮಲಾಲಾ ಅಲ್ಲಾ ಕನ್ನಡ ನಾಟಕ ಪ್ರದರ್ಶನಗೊಂಡಿತು. ಮಹಮ್ಮದ್‌ ಕುಂಞ ಬೋಳುವಾರುರವರ ರಚನೆ. ನಿರ್ದೇಶನ, ವಿನ್ಯಾಸ ಮತ್ತು ಬೆಳಕು ಬಾಸುಮ ಕೊಡಗು ಅವರದ್ದು. ಇದೊಂದು ಹೆಣ್ಣುಮಕ್ಕಳ ತಂದೆ, ತಾಯಿ, ಅಣ್ಣ ತಮ್ಮಂದಿರು ಎಲ್ಲರಿಗೂ ಸಂಬಂಧಿಸಿದ ಸಾರ್ವತ್ರಿಕ ಪ್ರಶ್ನೆಯನ್ನೆತ್ತುವ ಉತ್ತಮ ಪ್ರಯತ್ನ ಎನ್ನಬಹುದು. ನಾಟಕದಲ್ಲಿ ಯಾವುದೇ ಜಾತಿ, ಕೋಮು ಅಥವಾ ಧರ್ಮದವನ್ನು ಮೀರಿ ಹೆಣ್ಣು ಮಕ್ಕಳ ಸಮಸ್ಯೆಗಳ ಕುರಿತಾದ ಒಳನೋಟವಿತ್ತು. 

 ನೋಬೆಲ್‌ ಪ್ರಶಸ್ತಿ ವಿಜೇತೆ ಪಾಕಿಸ್ಥಾನದ ಹುಡುಗಿ ಮಲಾಲಾ ಮಾತ್ರವಲ್ಲದೆ ಪ್ರತಿಯೊಂದು ಮನೆಯಲ್ಲೂ ಮಲಾಲಾ ಇದ್ದಾಳೆ ಎಂದು ನೆನಪಿಸುವ ಪ್ರಯತ್ನವಾಗಿತ್ತು ಈ ನಾಟಕ. ಸ್ವಾತ್‌ ಕಣಿವೆಯ ಯಾವುದೇ ಹೆಣ್ಣು ಮಗು ಇನ್ನು ಮುಂದೆ ಶಾಲೆಗೆ ಹೋಗುವುದು “ಹರಾಮ್‌’ ಎಂದು ತಾಲಿಬಾನ್‌ ಸೈನಿಕರು ಫ‌ತ್ವಾ ನೀಡುತ್ತಾರೆ. ಇದನ್ನು ಧಿಕ್ಕರಿಸುವವ‌ರಿಗೆ ಕಠಿಣ ಶಿಕ್ಷೆ ಕಾದಿರುತ್ತದೆ. ನಾಟಕದ ಕೇಂದ್ರ ಬಿಂದು ಮಲಾಲಾ ಆಗಿರದೆ ಭಾರತದ ಪ್ರೊಫೆಸರ್‌ ಮುರಾರಿ ರಾವ್‌ ಮಾಡುತ್ತಿರುವ ಒಂದು ಪ್ರೊಜೆಕ್ಟ್ ಆಗಿರುತ್ತದೆ. ಅವರ ಪಂಚ್‌ಲೈನ್‌, ಎಜುಕೇಟ್‌ ಎನಾದರ್‌ ವುಮನ್‌ ಇಕ್ವಾಲಿಟಿ ಫಾಲ್ಸ್‌ ಟು ಯುವರ್‌ ಫೀಟ್‌ಎನ್ನುವುದು.ಪ್ರೊಫೆಸರ್‌ ಮಗಳು ಸೌಮ್ಯಾ ರಾವ್‌ ಅವಳ ಗೆಳತಿ ದುರ್ಗಾ ಪಾಂಡೆ ಮತ್ತು ಕೆಮರಾ ಮ್ಯಾನ್‌ ಪ್ರಭು ದಯಾಳ್‌ ಪ್ರಮುಖ ಪಾತ್ರಧಾರಿಗಳು.ಇವರಲ್ಲದೆ ಹಿಂದೂ ಪರಿಷತ್‌, ತಾಲಿಬಾನ್‌ ಸೇನೆ, ಜಾತ್ಯತೀತ ಮುಸ್ಲಿಂ ಪಂಥ ಮತ್ತು ವಕೀಲರೆಂಬ ಇನ್ನು ನಾಲ್ಕು ಪಾತ್ರಗಳಿವೆ. 

ಪ್ರೊಫೆಸರ್‌ ತನ್ನ ಪ್ರೊಜೆಕ್ಟ್ ವಿಷಯಕ್ಕೆ ಸಂಬಂಧಿಸಿ ಚಿತ್ರೀಕರಣ ಮಾಡುತ್ತಾರೆ. ಅದಕ್ಕಾಗಿ ಮುಸ್ಲಿಂ ಹುಡುಗಿಯ ಮೇಲೆ ಸೇನೆಯ ಹುಡುಗರು ಕಲ್ಲೆಸೆಯುವ ದೃಶ್ಯವಿರುತ್ತದೆ. ಈ ದೃಶ್ಯ ಎಲ್ಲ ಪತ್ರಿಕೆ ಮತ್ತು ಮಾಧ್ಯಮದಲ್ಲಿ ಪ್ರಕಟವಾಗಿ ಸೇನೆಯ ಹುಡುಗರು ಬರುತ್ತಾರೆ .ಅನಂತರ ಜಾತ್ಯಾತೀತ ಮುಸ್ಲಿಂ ಪಂಥದ ಹುಡುಗರೂ ಬರುತ್ತಾರೆ. ದುರ್ಗಾಪಾಂಡೆ ಮತ್ತು ಇವರ ನಡುವೆೆ ಮಾತಿನ ಚಕಮಕಿ ನಡೆಯುತ್ತದೆ. ಹಸಿರು ರುಮಾಲು ನೋಡಿ ನೀವು ರೈತ ಸಂಘದವರೋ ಎನ್ನುವ ದುರ್ಗಾ ಪಾಂಡೆಯ ಪ್ರಶ್ನೆಗೆ ನಾವು ಜಾತ್ಯತೀತ ಮುಸ್ಲಿಂ ಪಂಥದವರು, ಸಮಾಜ ಸೇವೆ ಮಾಡುತ್ತೇವೆ, ಗಂಡು ಮಕ್ಕಳಿಗೆ ಶಾಲೆ, ವಿದ್ಯೆ ಎಲ್ಲ ಕೊಡುತ್ತೇವೆ . ಹೆಣ್ಣು ಮಕ್ಕಳಿಗೆ ಮದುವೆ ಆಗಲು ಸಹಾಯ ಮಾಡುತ್ತೇವೆ ಎನ್ನುತ್ತಾರೆ. ಹೀಗೆ ಇವರ ಸಂವಾದ ಮುಂದುವರಿಯುತ್ತದೆ. 

Advertisement

ಆದರೆ ಸೌಮ್ಯಾ ರಾವ್‌ ಮತ್ತು ದುರ್ಗಾ ಪಾಂಡೆ ತಮ್ಮ ಯೋಚನಾ ಕ್ರಮ ಬದಲಾಯಿಸಿ, ಶೋಷಿತರ ಧ್ವನಿಯಾಗುತ್ತಾರೆ. ಮಲಾಲಳನ್ನು ಒಂದು ಬ್ರಾಂಡ್‌ ನೇಮ್‌ ಮಾಡಿಕೊಂಡು ಅದನ್ನು ನಗದು ಮಾಡಲು ಹೊರಟವರ ಮನೆಯಲ್ಲೇ ಹೆಣ್ಣು ಮಕ್ಕಳಿಗೆ ಧ್ವನಿ ಇರುವುದಿಲ್ಲ. ಅವಳ ಬಗ್ಗೆ ಮಾತನಾಡುವವರೆಲ್ಲ ತಮ್ಮ ಮನೆಯಲ್ಲಿ ಗಂಡು ಬೀರಿ ಆಗುವ ಕತೆಯಿರುತ್ತದೆ. ದುರ್ಗಾ ಪಾಂಡೆ ಪ್ರೀತಿಸುವ ಮುಸ್ಲಿಂ ಹುಡುಗನ ಕಥೆಯ ಉಲ್ಲೇಕವಿರುತ್ತದೆ. ಅವಳ ಅಣ್ಣ ಜೆಎನ್‌ಯುನ ವಿದ್ಯಾರ್ಥಿ ಪ್ರೊಜೆಕ್ಟೆಡ್‌ ಲೆಫ್ಟಿಸ್ಟ್‌. ಮುಸ್ಲಿಂ ಪ್ರಿಯಕರನ ಮೇಲೆ ದಾಳಿ ಮಾಡಿ ಸೇನೆಯ ಮೇಲೆ ಅಪವಾದ ಹಾಕಿಸುತ್ತಾರೆ. ತಾಲಿಬಾನ್‌ ಬೇರೆಲ್ಲೂ ಇಲ್ಲ, ಅದು ಇಲ್ಲೇ ಇದೆ ಎಂದು ಹೇಳುತ್ತಾರೆ.

ಪ್ರೊ| ಮುರಾರಿ ರಾವ್‌ ಪಾತ್ರದಲ್ಲಿ ಹರಿ ಪ್ರಸಾದ ಕುಂಪಲ, ಮಗಳು ಸೌಮ್ಯಾ ರಾವ್‌ ಆಗಿ ರಮ್ಯಾ ಕಾಮತ್‌ ಕಟಪಾಡಿ ದುರ್ಗಾ ಪಾಂಡೆಯಾಗಿ ಪೃಥ್ವಿ ನಂದನ್‌, ಪ್ರಭು ದಯಾಳ್‌ ಆಗಿ ಮಿಥುನ್‌ ಅಮೀನ್‌ ಮೂಡಬೆಟ್ಟು, ಪ್ರಭಾತ್‌ ಶೆಟ್ಟಿ ಮಾಳೂರು, ಸಂದೇಶ್‌ ಕುಮಾರ್‌, ಯು.ಕೆ. ಭಾಸ್ಕರ್‌, ಜಯನ್‌ ಶಾರ್ಣೆ ಉಳಿದ ಪಾತ್ರವನ್ನು ನಿಭಾಯಿಸಿದರು. ನಾಟಕದ ಅರ್ಥ ಮತ್ತು ವ್ಯಾಖ್ಯಾನವನ್ನು ಹೆಚ್ಚಿಸುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸಿತು. ದೃಶ್ಯಾ ಕೊಡವೂರು, ಪಲ್ಲವಿ ಕೊಡಗು, ಕಾವ್ಯವಾಣಿ ಕೊಡಗು ಇವರ ಗಾಯನ ಮೆಚ್ಚಿಕೊಳ್ಳುವಂತಿತ್ತು. ನಿರ್ದೇಶಕ ಬಾಸುಮ ಕೊಡಗು ಅಭಿನಂದನಾರ್ಹರು. 

ಬರ್ಬರೀಕ
ಮೂರನೇ ದಿನ “ಬರ್ಬರೀಕ’ ತುಳು ನಾಟಕ ಪ್ರದರ್ಶನಗೊಂಡಿತು. ಮಹಾಭಾರತದ ಸಣ್ಣ ಕತೆಯೊಂದನ್ನು ಶಶಿರಾಜ ಕಾವೂರ್‌ ವಿಭಿನ್ನವಾಗಿ ನಿರೂಪಿಸುವ ಮೂಲಕ ಬರ್ಬರೀಕ ಸೃಷ್ಟಿಯಾಗಿದೆ. ವಿನ್ಯಾಸ ಮತ್ತು ನಿರ್ದೇಶನ ಬಾಸುಮ ಕೊಡಗು ಅವರದ್ದು. ಹುಟ್ಟು, ಕುಲ ಮತ್ತು ಪ್ರತಿಭೆಯ ತಾಕಲಾಟ ನಾಟಕದ ತಿರುಳು. ಕರ್ಣ, ಅಭಿಮನ್ಯು ಮತಿತ್ತರ ಪಾತ್ರಗಳ ಮೂಲಕ ಇದನ್ನು ಹೇಳಲಾಗಿದೆ. ಕೃಷ್ಣನ ಕುತಂತ್ರ, ಪುರೋಹಿಶಾಹಿಗಳ ಮನೋಧರ್ಮದ ಕುಟಿಲತೆ ಇಲ್ಲೂ ಕೈ ಮಿಲಾಯಿಸುತ್ತದೆ.

ಕಾಡ ಜನಾಂಗದ ಹಿಡಿಂಬೆ ಭೀಮನಿಗೆ ಹೆಂಡತಿಯಾಗುವುದು ಅಪರಾಧವಾಗುವುದಿಲ್ಲ. ಪುತ್ರ ಘಟೋತ್ಕಜ ವೀರನಾಗಿದ್ದರೂ ಪಾಂಡವರ ಅಡಿಯಾಳಾಗಿರುವುದು ಅವಮಾನವಾಗುವುದಿಲ್ಲ. ಆದರೆ ಕೃಷ್ಣನನ್ನೇ ಸೋಲಿಸುವ ಹಂತಕ್ಕೆ ಬರುವ “ಮಾರ್ವಿ’ ಮಾಡುವ ಅವಮಾನ, ಅವಳ ಮಗ ಬರ್ಬರೀಕನನ್ನು ಬಲಿ ತೆಗೆದುಕೊಳ್ಳುತ್ತದೆ. ಎದುರಾಳಿಯ ಮರ್ಮ ಸ್ಥಾನವನ್ನು ಅರಿಯಬಲ್ಲ ಪ್ರತಿಭೆ ಹೊಂದಿರುವ ಬರ್ಬರೀಕ ಪಾಂಡವರ ಗೆಲುವಿನ ಕುದುರೆಯಾಗಬಹುದಿತ್ತು, ಆದರೆ ಕೃಷ್ಣನ ಮರ್ಮಸ್ಥಾನವನ್ನೂ ತಿಳಿದಿದ್ದ ಎನ್ನುವ ಕಾರಣಕ್ಕೆ ಕೃಷ್ಣ ಅವನನ್ನು ಪಾಂಡವರ ಪರವಾಗಿ ಯುದ್ಧ ಮಾಡಲು ಸಜ್ಜು ಮಾಡುವ ಬದಲು ಅವನ ಬಲಿದಾನಕ್ಕೆ ಹಲವು ತರ್ಕಗಳನ್ನು ಸೃಷ್ಟಿ ಮಾಡಿಸಿ ಅದರಲ್ಲೂ ಯಶಸ್ವಿಯಾಗುತ್ತಾನೆ.

ಇಡೀ ನಾಟಕದಲ್ಲಿ ಬುದ್ಧಿ ಮತ್ತು ಮನಸ್ಸು ನಾಟಕದ ನಡೆಗೆ ಮುಖ್ಯವಾಗಿತ್ತು. ನಾಟಕ ಪೌರಾಣಿಕವಾದ್ದರಿಂದ ಕಲಾತ್ಮಕ ವಿನ್ಯಾಸದಲ್ಲಿ ನಿರ್ದೇಶಕರಿಗೆ ಧಾರಾಳ ಅವಕಾಶವಿತ್ತು ಮತ್ತು ಅದರ ಅಗತ್ಯವೂ ಇತ್ತು. ಶಷ್ಮಿತಾ ಕಾಪು, ಶಶಾಂಕ್‌ ಕಾಪು ,ಇನು ಬೈಕಾಡಿ, ಚಂದ್ರಾವತಿ ಪಿತ್ರೋಡಿ, ಸುಶ್ಮಿತಾ ಮುದ್ರಾಡಿ, ಪ್ರವೀಣ್‌ ಆಚಾರ್ಯ, ಸಂತೋಷ್‌ ಉಪ್ಪೂರು, ಸತೀಶ್‌ ಕಲ್ಯಾಣಪುರ, ವಿಕ್ರಂ ದೊಡ್ಡಣಗುಡ್ಡೆ, ವಿಜಯಾ ಹೆಜಮಾಡಿ, ರಾಹುಲ್‌ ಕೊರಂಗ್ರಪಾಡಿ ಅಭಿನಯ ಮೆಚ್ಚುವಂತಿತ್ತು. ಸಂಗೀತ ನಾಟಕಕ್ಕೆ ಪೂರಕವಾಗಿ ಮೂಡಿಬಂತು. ಬೆಳಕಿನ ವಿನ್ಯಾಸ ಚೆನ್ನಾಗಿತ್ತು ಒಳ್ಳೆಯ ತುಳು ಪೌರಾಣಿಕ ನಾಟಕ ನೀಡಿದ ಶೇಕರ್‌ ಬೈಕಾಡಿ ಅಭಿನಂದನಾರ್ಹರು.

ಕಟಪಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ವಿಭಿನ್ನ ಪ್ರಯೋಗದ ನಾಟಕೋತ್ಸವ ನಡೆದದ್ದು ಮೆಚ್ಚುವಂತಹ ಕೆಲಸ. ಅಲ್ಲೂ ಹೊಸ ರೀತಿಯ ನಾಟಕಗಳನ್ನು ಆಸ್ವಾದಿಸುವ ಪ್ರೇಕ್ಷಕರ ಸೃಷ್ಟಿಯಾಗಿದೆ ಎನ್ನುವುದಕ್ಕೆ ತ್ರಿಭಾಷಾ ನಾಟಕೋತ್ಸವವೇ ಸಾಕ್ಷಿ. 

ಜಯರಾಂ ನೀಲಾವರ 

Advertisement

Udayavani is now on Telegram. Click here to join our channel and stay updated with the latest news.

Next