ಕಾಟಿಪಳ್ಳ ಗಣೇಶಪುರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಎರಡು ಯಕ್ಷಗಾನ ತಂಡಗಳ ಸಹಯೋಗದೊಂದಿಗೆ ಪುರುಷರೊಡನೆ ಮಹಿಳೆಯರೂ ಸೇರಿ ನಡೆಸಿದ ತಾಳಮದ್ದಲೆ ಕೂಟವು ವಿಶಿಷ್ಟವೂ, ವಿಭಿನ್ನವೂ ಆಗಿ ಜನಮನ ಗೆದ್ದಿತು. ಸ್ಥಳೀಯ ತಂಡಗಳಾದ ತಡಂಬೈಲಿನ ಎಸ್. ವಾಸುದೇವ ರಾವ್ ನೇತೃತ್ವದ ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಹಾಗೂ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯರು ಜತೆ ಸೇರಿ “ದ್ರುಪದ ಗರ್ವ ಭಂಗ’ ಎಂಬ ಆಖ್ಯಾನವನ್ನು ಪ್ರದರ್ಶಿಸಿದರು.ಇದು ಒಂದು ಉತ್ತಮ ಹೊಂದಾಣಿಕೆಯ ಶ್ರೇಷ್ಟಮಟ್ಟದ ಕೂಟವಾಗಿ ಮೆರೆಯಿತು.
ಅಗ್ರಪಂಕ್ತಿಯ ಹವ್ಯಾಸ ಕಲಾವಿದರಾದ ಸರ್ಪಂಗಳ ಈಶ್ವರ ಭಟ್ ದ್ರುಪದನಾಗಿ ದ್ರೋಣರ ಬಗೆಗಿನ ದ್ವೇಷವನ್ನು ವ್ಯಂಗ್ಯ ಮಿಶ್ರಿತ ಮಾತಿನ ಚಮತ್ಕೃತಿಯ ವೈಭವೀಕರಣದ ಮೂಲಕ ಪ್ರಕಟ ಪಡಿಸಿದರೆ ಅರ್ಜುನನ ಬಳಿ ಸಾಗುವಾಗ ತನ್ನಂತೆ ಕ್ಷತ್ರಿಯ ಕುಲದ ಎಳೆಯರಾದ ನಿಮಗೆ ಇದು ಅನಗತ್ಯವಲ್ಲವೇ ಎಂಬುದಾಗಿ ಸೋದಾಹರಣದಪೂರ್ವಕ ಮನೋಜ್ಞವಾಗಿ ಚಿತ್ರಿಸಿದರು. ಆಕರ್ಷಕ ಶೈಲಿಯ ವಿಡಂಬನಾತ್ಮಕ ಪ್ರಸ್ತುತಿಯ ಮೂಲಕ ತನ್ನ ವಿಚಾರಧಾರೆಯನ್ನು ಹರಿಸಿ ಪ್ರೇಕ್ಷಕರ ಮನದಾಳವನ್ನು ಮುಟ್ಟಿದರು.
ಏಕಲವ್ಯನಾಗಿ ಡಾ| ದಿನಕರ ಪಚ್ಚನಾಡಿ ಸಾಹಿತ್ಯಪೂರ್ಣ ಶೈಲಿಯಲ್ಲಿ ವಿದ್ಯಾದಾನ ಎಂಬುದರಲ್ಲಿ ತಾರತಮ್ಯ ಸರಿಯೇ ಎಂಬುದಾಗಿ ಪ್ರಶ್ನಿಸುತ್ತಾ ಹಲವು ನಿದರ್ಶನಗಳನ್ನಿತ್ತರೆ ಕೊನೆಗೆ ಗುರುದಕ್ಷಿಣೆಯನ್ನು ಕೊಡುವಲ್ಲಿ ಹೆಬ್ಬೆರಳೇಕೆ ಬೇಕಿದ್ದರೆ ದೇಹವನ್ನೇ ಸಂತೋಷವಾಗಿ, ಸಮರ್ಪಿಸುತ್ತೇನೆ ಎಂದು ತನ್ನ ಶ್ರದ್ಧೆ, ವಿನಯ ಪೂರ್ವಕವಾದ ಅಸಾಧರಣ ಗುರುಭಕ್ತಿಯನ್ನು ಪ್ರಕಟಿಸುವಲ್ಲಿ ಪ್ರತಿಭೆಯನ್ನು ಮೆರೆದರು.
ಗುರುದ್ರೋಣನಾಗಿ ಎಸ್. ವಾಸುದೇವರಾವ್ ಏಕಲವ್ಯನಲ್ಲಿ ಆತನಿಗೆ ವಿದ್ಯಾದಾನ ಏಕೆ ಸಲ್ಲ ಎಂಬುದಕ್ಕೆ ಶಾಸ್ತ್ರ ಸಮ್ಮತವಾದ ಕಾರಣಗಳೊಂದಿಗೆ ತನ್ನ ಕಟ್ಟುಪಾಡು, ಅನಿವಾರ್ಯತೆ, ತನಗಿರುವ ನಿರ್ಬಂಧನಗಳನ್ನೂ ಪ್ರೌಢ ಶೈಲಿಯ, ಸ್ವರ ಗಾಂಭೀರ್ಯದಿಂದ ಕೂಡಿದ ಭಾವಪೂರ್ಣ ಮಾತುಗಳೊಂದಿಗೆ ಪ್ರಕಟಪಡಿಸಿ, ಸಂಭಾಷಣೆಯಲ್ಲೂ ತೊಡಗಿಸಿಕೊಳ್ಳುತ್ತಾ ಪ್ರತಿಪಾದಿಸಿದರು.
ಅರ್ಜುನನಾಗಿ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿಯ ಸುಲೋಚನಾ ವಿರಾಟ್ ಗುರುಗಳೊಂದಿಗೆ ವಿಧೇಯ ಶಿಷ್ಯನಾಗಿ ಭಾವಪೂರ್ಣ ಮಾತುಗಳಿಂದಲೂ, ಕೊನೆಗೆ ದ್ರುಪದನೊಂದಿಗೆ ಯುದ್ಧ ಭಾಗದಲ್ಲಿ ತಾನು ಎಳೆಯ ಬಾಲಕನಾದರೂ ಗುರುವಿನ ಮನಗೆದ್ದ ಸಮರ್ಥ ಶಿಷ್ಯ ಎಂಬುದನ್ನು ವೀರಾವೇಷದಿಂದ, ಗಾಂಭೀರ್ಯ ಮುಕುಟವಾಗಿ ನಿರರ್ಗಳವಾದ ಮಾತುಗಾರಿಕೆಯೊಂದಿಗೆ ಪ್ರಕಟಪಡಿಸುವಲ್ಲಿ ಯಸ್ವಿಯಾದರು. ಉಳಿದಂತೆ ಲಲಿತಾ ಭಟ್ ಚಿತ್ರಕನಾಗಿ ಜಯಂತಿ ಹೊಳ್ಳ ಕೌರವನಾಗಿ ಹಾಗೂ ಕಲಾವತಿ ಭೀಮನಾಗಿ ಏರು ದನಿಯಲ್ಲಿ ಗತ್ತು ಗಾಂಭೀರ್ಯಯುತವಾಗಿ ಮಾತುಗಾರಿಕೆಯೊಂದಿಗೆ ಯುದ್ಧ ಭಾಗದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟರು. ಹಿಮ್ಮೇಳದಲ್ಲಿ ಭಾಗವತರಾಗಿ ಸದಾನಂದ ಕುಲಾಲ್, ಚಂಡೆ ಮದ್ದಲೆ ವಾದಕರಾಗಿ ಗಣೇಶ ಭಟ್ ಬೆಳಾಲು ಹಾಗೂ ಎಸ್. ಎನ್. ಭಟ್ ಸಹಕರಿಸಿದರು.