Advertisement

ತ್ಯಾವರೆಕೊಪ್ಪದಲ್ಲಿ ಕಾಡೆಮ್ಮೆ ಸಫಾರಿ!

03:14 AM Apr 30, 2019 | Sriram |

ಶಿವಮೊಗ್ಗ: ಆನೆ, ಹುಲಿ, ಸಿಂಹಗಳ ಸಫಾರಿ ಮಾಮೂಲಿ. ಆದರೆ, ಇನ್ನು ಕಾಡೆಮ್ಮೆ ಸಫಾರಿಯೂ ನಡೆಯಲಿದೆ! ಹೌದು, ದೇಶದಲ್ಲೇ ಮೊದಲ ಬಾರಿಗೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಇದಕ್ಕೆ ಸಿದ್ಧತೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಅತಿ ಶೀಘ್ರವೇ ಪ್ರವಾಸಿಗರಿಗೆ ಲಭ್ಯವಾಗಲಿದೆ. ಭಾರಿ ಎತ್ತರ, ತೂಕ ಹಾಗೂ ತನ್ನ ಆಕಾರದಿಂದಲೇ ಜನರನ್ನು ಆಕರ್ಷಿಸುವ ಕಾಡೆಮ್ಮೆಗಳನ್ನು ಇನ್ಮುಂದೆ ಹತ್ತಿರದಿಂದಲೇ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

Advertisement

ಮಲೆನಾಡಿನ ಜನರಿಗೆ ಕಾಡೆಮ್ಮೆಗಳು ಚಿರಪರಿಚಿತ. ಆದರೆ ಬಯಲು ಸೀಮೆ ಹಾಗೂ ಪಟ್ಟಣಗಳ ಜನರಿಗೆ ಕಾಡೆಮ್ಮೆಗಳ ಬಗ್ಗೆ ಮಾಹಿತಿ ಕಡಿಮೆ. ಯಾವುದೇ ಮೃಗಾಲಯಗಳಿಗೆ ಹೋದರೂ ಹುಲಿ, ಚಿರತೆ, ಸಿಂಹ, ಕರಡಿ, ಜಿಂಕೆ, ಹೆಬ್ಟಾವು ಕಾಣಸಿಗುತ್ತವೆ. ಆದರೆ ಕಾಡೆಮ್ಮೆಗಳು ಕಾಣುವುದಿಲ್ಲ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಬೇರೆ ಪ್ರಾಣಿಗಳ ಜತೆ ಕಾಡೆಮ್ಮೆಗಳನ್ನು ಬಿಡಲಾಗಿದೆ. ಹಾಗಾಗಿ ಅವು ಪ್ರವಾಸಿಗರನ್ನು ಅಷ್ಟಾಗಿ ಸೆಳೆದಿಲ್ಲ. ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಡೆಮ್ಮೆಗಳು ಇರುವುದರಿಂದ ಜತೆಗೆ ಈ ಭಾಗದ ವಾತಾವರಣಕ್ಕೆ ಹೊಂದಿಕೊಳ್ಳುವುದರಿಂದ ಇಲ್ಲೇ ಸಫಾರಿ ಮಾಡಲು ಅಧಿಕಾರಿಗಳು ಮಾಸ್ಟರ್‌ ಪ್ಲ್ಯಾನ್‌ ಸಿದ್ಧಪಡಿಸಿದ್ದಾರೆ. ಏನಿದು ಮಾಸ್ಟರ್‌ ಪ್ಲ್ಯಾನ್‌?: ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳ ಸಲಹೆ ಮೇರೆಗೆ ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮವು 2.5 ಎಕರೆಯಿಂದ 10ರಿಂದ 15 ಎಕರೆಗೆೆ ವಿಸ್ತರಣೆಗೊಳ್ಳಲಿದೆ. ಪ್ರಸ್ತುತ 23 ಜಾತಿಯ 310 ಪ್ರಾಣಿ, ಪಕ್ಷಿಗಳನ್ನು ಸಣ್ಣ ಪಂಜರದಲ್ಲಿ ಇಡಲಾಗಿದ್ದು ಅವುಗಳನ್ನು 36 ಪಂಜರದೊಳಗೆ ಇಡುವ ಜತೆಗೆ ಅವುಗಳ ಸಂಖ್ಯೆ ಹೆಚ್ಚಿಸಲು ಯೋಜನೆ ಸಿದ್ಧವಾಗಿದೆ.

ಪ್ರವಾಸಿಗರ ಹೆಚ್ಚಳಕ್ಕೆ ಆದ್ಯತೆ: ವಾರ್ಷಿಕ 2.5 ಲಕ್ಷ ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದು ಅದರಲ್ಲಿ 50 ಸಾವಿರ ಮಕ್ಕಳಿರುವುದು ವಿಶೇಷ. ಪ್ರವಾಸಿಗರ ಸಂಖ್ಯೆಯನ್ನು 5 ಲಕ್ಷಕ್ಕೆ ಏರಿಸಲು ಯೋಜನೆ ರೂಪಿಸಲಾಗಿದೆ.

ಸರ್ಕಾರದ ಅನುದಾನ ಇಲ್ಲ
ಮೃಗಾಲಯಗಳ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಇಲ್ಲ ಎನ್ನುತ್ತಾರೆ ಅಧಿಕಾರಿಗಳು. ಝೂಗೆ ಬರುವ ಆದಾಯದಿಂದಲೇ ಸಿಬ್ಬಂದಿ ಸಂಬಳ, ಸಾರಿಗೆ, ಪ್ರಾಣಿಗಳಿಗೆ ಆಹಾರ, ಉಪಚಾರ ಎಲ್ಲವನ್ನೂ ನೋಡಿಕೊಳ್ಳಬೇಕು. ಬಾಕಿ ಹಣದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮಾಸ್ಟರ್‌ ಪ್ಲ್ಯಾನ್‌ಗೆ ಕೇಂದ್ರಿಯ ಮೃಗಾಲಯ ಪ್ರಾಧಿಕಾರ ಅನುದಾನ ಕೊಡುವ ವಿಶ್ವಾಸವಿದೆ, ಜತೆಗೆ ಸಂಸದರ ನಿಧಿ, ಜಿಪಂನಿಂದಲೂ ಅನುದಾನ ನಿರೀಕ್ಷಿಸಲಾಗಿದೆ ಎಂಬುದು ಅಧಿಕಾರಿಗಳ ಮಾತು.

-ಶರತ್‌ ಭದ್ರಾವತಿ
Advertisement

Udayavani is now on Telegram. Click here to join our channel and stay updated with the latest news.

Next