Advertisement
83ರ ಇಳಿ ವಯಸ್ಸಿನ ಪರಮ ಪೂಜ್ಯ ಮುನಿ 108 ಪಾವನಸಾಗರ್‌ಜೀ ಮಹಾರಾಜ್ ಹೀಗೆ ಹೇಳುವಾಗ ಬಾಹುಬಲಿ ಮೂರ್ತಿಯನ್ನು ಮನಸಾರೆ ನೋಡಿದ ತೃಪ್ತಿಯ ಜತೆಗೆ ಇನ್ನೂ ನೋಡಬೇಕೆಂಬ ತವಕ ಕಾಣುತ್ತಿತ್ತು.
Related Articles
Advertisement
ಸಾವಿರಾರು ಕಿ.ಮೀ. ನಡೆದು ಬಂದ ಮುನಿಗಳುಇನ್ನು ಸಾಂಗ್ಲಿಯ ಆಚಾರ್ಯಶ್ರೀ 108 ಚಂದ್ರಪ್ರಭ ಸಾಗರ್ ಮುನಿ ಮಹಾರಾಜ್ ಅವರು ತಮ್ಮ ಎರಡು ಚಾತುರ್ಮಾಸವನ್ನು ಬೆಳಗೊಳದಲ್ಲೇ ಮುಗಿಸಿದ್ದು, ಮಹಾಮಸ್ತಕಾಭಿಷೇಕಕ್ಕೆ ಆಗಮಿಸಿರುವ ಮುನಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ನಿರ್ವಹಣೆಗೂ ನೆರವಾಗುತ್ತಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಿಂದ ಒಂದೂವರೆ ವರ್ಷದ ಹಿಂದೆ ನಡೆದು ಶ್ರವಣ ಬೆಳಗೊಳಕ್ಕೆ ಆಗಮಿಸಿದೆವು. ನಿತ್ಯ 25ರಿಂದ 30 ಕಿ.ಮೀ.ನಂತೆ ಸುಮಾರು 700 ಕಿ.ಮೀ. ಅಂತರವನ್ನು ತಿಂಗಳಲ್ಲಿ ತಲುಪಿದೆವು. ಬೆಳಗ್ಗೆ 6ರಿಂದ 9ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಕಾಲ್ನಡಿಗೆಯಲ್ಲಿರುತ್ತೇವೆ. ಮಾರ್ಗ ಮಧ್ಯೆ ಸಿಗುವ ಸರ್ಕಾರಿ ಶಾಲೆ, ಭಕ್ತರ ಮನೆ ಇತರೆಡೆ ವಿಶ್ರಾಂತಿ ಪಡೆಯುತ್ತೇವೆ ಎಂದು 108 ಚಂದ್ರಪ್ರಭ ಸಾಗರ್ ಮುನಿ ಮಹಾರಾಜ್ ಹೇಳಿದರು. ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಎರಡು- ಮೂರು ಸಾವಿರ ಕಿ.ಮೀ. ದೂರದಿಂದಲೂ ಮುನಿಗಳು ಆಗಮಿಸಿದ್ದಾರೆ. ಆಚಾರ್ಯರು, ಬಾಲಾರ್ಚಾಯರು, ಮಾತಾಜಿಗಳು, ಸಾಧ್ವಿಗಳು, ಚುಲಕ್, ಚುಲ್ಲಿಕಾ ಸೇರಿದಂತೆ ಈವರೆಗೆ 330 ಮಂದಿ ಆಗಮಿಸಿದ್ದಾರೆ. ಮಹಾಮಸ್ತಕಾಭಿಷೇಕದ ಹೊತ್ತಿಗೆ ಇನ್ನೂ 50 ಮಂದಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಬೆಳಗೊಳದ ಬಾಹುಬಲಿ ಮೂರ್ತಿ ಜಗತ್ತಿನಲ್ಲೇ ಶ್ರೇಷ್ಠವಾದುದು. ಅಲ್ಲಿ ಶಿಲ್ಪಕಲೆಯ ಸೊಬಗಷ್ಟೇ ಅಲ್ಲದೇ ಬಾಹುಬಲಿಯ ವ್ಯಕ್ತಿತ್ವ ದರ್ಶನವಾಗುತ್ತದೆ. ಹಾಗೆಯೇ ವಿಶ್ವಶಾಂತಿ ಮಾತ್ರವಲ್ಲದೇ ಜಗತ್ತಿನ ಸಕಲ ಜೀವಿಗಳಿಗೂ ನೋವುಂಟು ಮಾಡಬಾರದು ಎಂಬ ಸಂದೇಶ ಸಾರುತ್ತದೆ. ಸಮಾಜದಲ್ಲಿ ಇಂದು ಶಾಂತಿ, ಅಹಿಂಸೆಯ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗುವಂತೆ ಮೂರ್ತಿ ಪ್ರೇರಣೆ ನೀಡಲಿ ಎಂದು ಆಶಿಸಿದರು. ವೈರಾಗ್ಯದತ್ತ ಪುತ್ರ- ಅಧ್ಯಾತ್ಮದತ್ತ ಪಿತೃ
ಬೆಳಗೊಳದಲ್ಲಿ ನಿರ್ಮಾಣವಾಗಿರುವ ಮುನಿನಗರದಲ್ಲಿ ವೈರಾಗ್ಯ ಪಾಲಿಸುತ್ತಿರುವ ಪುತ್ರ ಹಾಗೂ ಅಧ್ಯಾತ್ಮದತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿರುವ ತಂದೆ ಕಾಣಸಿಗುತ್ತಾರೆ. ಬಹುಕಾಲದ ಅಪೇಕ್ಷೆಯಂತೆ ಅಪ್ಪ, ಅಮ್ಮ ಹಾಗೂ 26ರ ತರುಣ ಪೂಜ್ಯ ಐಲಕ್ 105 ಸ್ವಸ್ತಿಸಾಗರ್‌ಜೀ ಮಹಾರಾಜ್ ಮಹಾಮಸ್ತಕಾಭಿಷೇಕವನ್ನು ಕಣ್ಮುಂಬಿಕೊಳ್ಳಲು ಕಾತರಾಗಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯ ಕೃಷಿ ಕುಟುಂಬದ ಕುಬೇರ್ ಬರ್ಮಾ ಬೋಕರೆ ಅವರಿಗೆ ಮೂವರು ಗಂಡು ಮಕ್ಕಳು. ಇಬ್ಬರು ಮಕ್ಕಳು ಕೃಷಿಕರಾಗಿದ್ದು, ಐದು ಎಕರೆ ಭೂಮಿಯಲ್ಲಿ ಬೇಸಾಯ ಮಾಡುತ್ತಾರೆ. ಚಿಕ್ಕಂದಿನಿಂದಲೂ ಅಧ್ಯಾತ್ಮ, ವೈರಾಗ್ಯದತ್ತ ಸೆಳೆತವಿದ್ದ ಕಿರಿಯ ಪುತ್ರ ದಿಗಂಬರ ಮುನಿಯಾಗಿ 2016ರ ಜುಲೈನಲ್ಲಿ ದೀಕ್ಷೆ ಸ್ವೀಕರಿಸಿದ್ದಾರೆ. ಕಿರಿಯ ಮಗನಿಗೆ ಚಿಕ್ಕಂದಿನಿಂದಲೂ ಅಧ್ಯಾತ್ಮದತ್ತ ಒಲವಿತ್ತು. 15ನೇ ವಯಸ್ಸಿಗೆ ಚಂದ್ರಪ್ರಭ ಸಾಗರ್ ಮಹಾರಾಜ್ ಅವರ ಬಳಿ ಸೇವೆ ಸಲ್ಲಿಸುತ್ತಿದ್ದ. ವರ್ಷದಲ್ಲಿ ನಾಲ್ಕೈದು ದಿನವಷ್ಟೇ ಮನೆಗೆ ಬರುತ್ತಿದ್ದ ಮಗ ವರ್ಷವಿಡೀ ಮುನಿಗಳ ಸೇವೆಯಲ್ಲಿ ನಿರತನಾಗಿರುತ್ತಿದ್ದ. 2016ರ ಜುಲೈನಲ್ಲಿ ಪುತ್ರ ದೀಕ್ಷೆ ತೆಗೆದುಕೊಂಡ. ನಮಗೆ ಆ ಬಗ್ಗೆ ಕಲ್ಪನೆಯೇ ಇರಲಿಲ್ಲ ಎಂದು ತಂದೆ ಕುಬೇರ್ ಬರ್ಮಾ ಬೋಕರೆ ಹೇಳಿದರು. ಮಗನ ಇಚ್ಛೆಗೆ ನಾವು ವಿರೋಧ ವ್ಯಕ್ತಪಡಿಸಲಿಲ್ಲ. ಪತ್ನಿ ಪದ್ಮಾವತಿ ಆರಂಭದಲ್ಲಿ ನೊಂದುಕೊಂಡರೂ ನಂತರ ಒಪ್ಪಿಕೊಂಡರು. ಹಿಂದೆಲ್ಲಾ ಟಿ.ವಿಗಳಲ್ಲಿ ಮಹಾಮಸ್ತಕಾಭಿಷೇಕ ನೋಡಿದ್ದೆವು. ಇದೇ ಮೊದಲ ಬಾರಿಗೆ ಪತ್ನಿಸಮೇತವಾಗಿ ನೇರವಾಗಿ ಮಹಾಮಸ್ತಕಾಭಿಷೇಕ ನೋಡಲಿದ್ದೇವೆ ಎಂದು ಉತ್ಸಾಹದಿಂದ ನುಡಿದರು. ಕ್ಷಣಿಕ ಸುಖಕ್ಕೆ ಬಾಳು ನರಕ
ಸುಖ, ಭೋಗಗಳ ಬಗ್ಗೆ ಮೊದಲಿನಿಂದಲೂ ತಾತ್ಸಾರವಿತ್ತು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದಾಗ ಸಾಮಾನ್ಯರಂತೆ ಜೀವನ ನಡೆಸುವ ಬದಲಿಗೆ ದೀಕ್ಷೆ ಪಡೆದು ಬದುಕಲು ನಿರ್ಧರಿಸಿದೆ ಎನ್ನುತ್ತಾರೆ 105 ಸ್ವಸ್ತಿಸಾಗರ್‌ಜೀ ಮಹಾರಾಜ್. ಹಿಂದೆಲ್ಲಾ ಜನ ಇಬ್ಬರು ಮಕ್ಕಳನ್ನು ಪಡೆಯುತ್ತಿದ್ದರು. ಇಬ್ಬರು ಮಕ್ಕಳು ಗುಣವಂತ, ಕುಲವಂತರಂತೆ ಬಾಳುತ್ತಿದ್ದರು. ಆದರೆ ಸಮಾಜದಲ್ಲಿ ಈಗ ಆ ಪರಿಸ್ಥಿತಿ ಇಲ್ಲ. ಕ್ಷಣಿಕ ಸುಖಕ್ಕಾಗಿ ಬಾಳನ್ನೇ ನರಕವಾಗಿಸಿಕೊಂಡವರನ್ನು ಎಲ್ಲೆಡೆ ಕಾಣಬಹುದು. ಪಾಲಿಸಿ ಪೋಷಿಸಿದ ಮಕ್ಕಳೇ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು ಎಷ್ಟು ಸರಿ. ಇನ್ನಾದರೂ ಜೀವನದ ಮಹತ್ವ ಅರಿತು ಬಾಳುವತ್ತ ಜನ ಸಮೂಹ ಮನಸ್ಸು ಮಾಡಬೇಕು ಎಂದು ಹೇಳುತ್ತಾರೆ. – ಎಂ.ಕೀರ್ತಿಪ್ರಸಾದ್