Advertisement

ಎರಡು ಝೆನ್‌ ಕತೆಗಳು

06:00 AM Jul 01, 2018 | Team Udayavani |

ಅಮರಾವತಿಯೆಂಬ ಹಳ್ಳಿಯೊಂದು ಗಿರಿತಪ್ಪಲಿನಲ್ಲಿ ನಿಸರ್ಗದ ನಿಸ್ವನದೊಂದಿಗೆ ಐಕ್ಯವಾದಂತೆ ಶಾಂತವಾಗಿ ಹರಡಿಕೊಂಡಿತ್ತು. ಜನ ಮಾತನಾಡಿಕೊಳ್ಳುತ್ತಿರಲಿಲ್ಲ ಎಂದೇನೂ ಅಲ್ಲ. ಆದರೆ, ಮಾತು ಮುತ್ತಿನ ಸರದಂತೆ ಮೌನದ ದಾರದಲ್ಲಿ ಪೋಣಿಸಲ್ಪಟ್ಟಿತ್ತು. ಹಳ್ಳಿಯಲ್ಲಿ ಇಂಥ ಶಾಂತತೆ ಮೂಡಲು ಕಾರಣವಾಗಿದ್ದುದು ಒಂದು ಆಶ್ರಮ. ಆ ಆಶ್ರಮದ ಅಂಗಳದಲ್ಲಿ ತರಗೆಲೆ ಅಲುಗಿದರೂ ಆಲಿಸಬಹುದಾಗಿರುವಂಥ ಸ್ಥಿತಿ. ಹಾಗೆಂದು, ಆಶ್ರಮದಲ್ಲಿ ಯಾರೂ ಇರಲಿಲ್ಲವೆಂದಲ್ಲ. ಪಾಠಪ್ರವಚನಗಳು ನಡೆಯುತ್ತಿರಲಿಲ್ಲವೆಂದಲ್ಲ.

Advertisement

ಮಾಣಿಕ್ಯನೆಂಬ ಸಂತನೊಬ್ಬ ಅಲ್ಲಿದ್ದ. ಅವನಿಗೊಂದಿಷ್ಟು ಮಂದಿ ಶಿಷ್ಯರಿದ್ದರು. ಪ್ರತಿಯೊಬ್ಬ ಶಿಷ್ಯನೂ ಪ್ರಕಾಂಡ ಪಂಡಿತ. ಅವರಿಗೆ ಗುರು ಮೌನವಾಗಿ ಹೇಗೆ ಕಲಿಸಿದ, ಶಿಷ್ಯರು ನಿಶ್ಶಬ್ದವಾಗಿ ಹೇಗೆ ಕಲಿತರು ಎಂಬ ಬೆರಗು ಇಡೀ ಅಮರಾವತಿ ಹಳ್ಳಿಯನ್ನು ಆವರಿಸಿ, ಅಲ್ಲಿನವರ ನಡೆ-ನುಡಿಯಲ್ಲಿ ಅನೂಹ್ಯ ಗಾಂಭೀರ್ಯ ನೆಲೆಸಿಬಿಟ್ಟಿತ್ತು.

ಒಬ್ಬ ಸಂತನಿಂದಾಗಿ ಒಂದು ಹಳ್ಳಿಯೇ ಬದಲಾಗುತ್ತದೆ ಎಂಬುದು ಗಿರಿತಪ್ಪಲಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಚಾರವಾಗಿ ಅವರೆಲ್ಲ ಮಾಣಿಕ್ಯ ಮುನಿಯನ್ನು ನೋಡಲು ಅಮರಾವತಿಗೆ ಆಗಮಿಸುತ್ತಿದ್ದರು. “ಆಹಾ! ಮೌನದ ಮಂದಿರ’ ಎಂದು ಆಶ್ರಮವನ್ನು ಕೊಂಡಾಡುತ್ತಿದ್ದರು.

ಮಾಣಿಕ್ಯನು ಮರಣಿಸಿದ ದಿನ ಇಡೀ ಆಶ್ರಮ ಮಂತ್ರಘೋಷಗಳಿಂದ ಗಂಟೆಗಳ ಮೊಳಗಿನಿಂದ ವೇದಗಳ ಪಠಣದಿಂದ ತುಂಬಿಹೋಯಿತು. ಹಳ್ಳಿಯ ಬೀದಿಗಳಲ್ಲಿ ಶಬ್ದಗಳ ಮೆರವಣಿಗೆ ಸಾಗತೊಡಗಿತು. ಈಗಲೂ ಅಲ್ಲಿನ ಹಿರಿಯರು ಅದನ್ನು ನೆನಪಿಸಿಕೊಳ್ಳುವುದು ಹೀಗೆ: ಅದು ಮೌನವೇ ಮೌನವಾದ ದಿನ!

2
ಗುರು ಹಕು-ಯಿಕೊ ತನ್ನ ಆಶ್ರಮಕ್ಕೆ ಮರಳಿಬಂದಾಗ ಅಮಾವಾಸ್ಯೆಯ ಕತ್ತಲು ಇಹಲೋಕವನ್ನಿಡೀ ಆವರಿಸಿದಂತಿತ್ತು. ಆಶ್ರಮದ ಒಳಗೊಂದು ಮಿಣುಕುದೀಪ ಉರಿಯುತ್ತಿತ್ತು. ದೀಪದ ಬುಡದಲ್ಲಿಯೇ ಶಿಷ್ಯ ವಮೋಶಿ ಧೇನಿಸುತ್ತ ಕುಳಿತಿದ್ದ. ಗುರು ಅವನನ್ನು ಹೊರಗಿನಿಂದಲೇ ದಿಟ್ಟಿಸಿ ನೋಡಿ ಗವಾಕ್ಷಿಯ ಬಳಿ ಮುಖವಿಟ್ಟು “ಶೂ ಶೂ’ ಎಂದು ಕರೆದ.

Advertisement

ವಮೋಶಿ ಒಮ್ಮೆ ತಲೆ ಎತ್ತಿ ಕುಳಿತಲ್ಲಿಂದಲೇ ಯಾರು ಎಂದು ಕೇಳಿದ.
“”ಯಾರೆಂದು ಗೊತ್ತಾಗಲಿಲ್ಲವೆ?” ಗುರು ಸ್ವರ ಬದಲಿಸಿದ.
“”ಇಲ್ಲ…” ಎಂದ ವಮೋಶಿ.
“”ಮತ್ತೆ ನಿನ್ನ ಬಳಿ ದೀಪವಿದೆಯಲ್ಲವೆ?”
“”ನನ್ನ ಬಳಿ ದೀಪವಿದ್ದರೆ ನೀನು ಹೇಗೆ ಕಾಣಿಸುತ್ತಿ?”
“”ದೀಪವನ್ನೊಮ್ಮೆ ಕಿಟಕಿಯ ದಂಡೆಯ ಮೇಲಿಟ್ಟು ಕತ್ತಲಲ್ಲಿ ನಿಲ್ಲು. ಆಗ ನಾನು ಯಾರೆಂದು ತೋರಬಹುದು”
ವಮೋಶಿ ಹಾಗೆಯೇ ಮಾಡಿದ. ಕಿಟಕಿಯ ಆಚೆಗೆ ನಿಂತಿದ್ದ ಗುರುವಿನ ಗುರುತು ಹಿಡಿದವನೇ ವಮೋಶಿ, “”ಹೋ, ನೀವಾ ಗುರುಗಳೆ…” ಎಂದು ನಕ್ಕ.
“”ಒಳಗೆ ಎಷ್ಟು ಬೆಳಗಿದರೇನು ಫ‌ಲ, ಹೊರಗಿನದ್ದನ್ನು ಬೆಳಗಿಸದ ಹೊರತಾಗಿ” ಎಂದು ಗೊಣಗುತ್ತ ಒಳಬಂದವನೇ ಹಕು-ಯಿಕೊ ಬಗಲ ಚೀಲವನ್ನು ಬದಿಗಿಟ್ಟು ಮತ್ತೆ ಹೊರನಡೆದ. ವಮೋಶಿ ಅವನನ್ನು ಅನುಸರಿಸಿದ. ಹಕು-ಯಿಕೊ ವಿಹಾರದ ಬಾಗಿಲು ದೂಡಿ ಒಳಬಂದು ಬುದ್ಧನ ಮೂರ್ತಿಯ ತಳದಲ್ಲೊಂದು ದೀಪ ಉರಿಸಿ ಬಿಂಬವನ್ನು ನೋಡುತ್ತ ಕುಳಿತ.

“”ನಿನಗೆ ನಾನು ಕಾಣಿಸುವುದಿಲ್ಲ. ನನಗೆ ನೀನೂ ಕಾಣಿಸುತ್ತಿಲ್ಲ. ಆದರೆ, ಅವನು ನಮ್ಮ ಕಣ್ಣುಗಳಲ್ಲಿ ಬೆಳಗುತ್ತಿದ್ದಾನೆ” ಎಂದು ಗುರು ಗೊಯಿಂಕಾ ಉದ್ಗರಿಸಿದಾಗ ವಮೋಶಿ ಅದೇನೋ ಅರ್ಥವಾಗಿ ತಲೆಯಾಡಿಸಿದ.

Advertisement

Udayavani is now on Telegram. Click here to join our channel and stay updated with the latest news.

Next