ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಗವಿರಂಗನಾಥಸ್ವಾಮಿ ದೇವಸ್ಥಾನದ ಬಳಿ ಇರುವ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ನಡೆದಿದೆ.
ಮಂಡ್ಯ ತಾಲೂಕಿನ ಹೊಳಲು ಗ್ರಾಮದ ನಾಲ್ವರು ಯುವಕರು ತಾಲೂಕಿನ ಗವಿರಂಗನಾಥ ಸ್ವಾಮಿ ದೇವಾಲಯಕ್ಕೆ ಪೂಜೆಗಾಗಿ ಆಗಮಿಸಿದ್ದರು. ಪೂಜೆ ಮುಗಿಸಿದ ನಂತರ ಸುಮಾರು 12 ಗಂಟೆ ಸಮಯದಲ್ಲಿ ಸಮೀಪದಲ್ಲಿಯೇ ಇರುವ ಕೆರೆಯಲ್ಲಿ ಈಜಲು ತೆರಳಿದ್ದಾರೆ.
ಕೆರೆಗೆ ಇಳಿದ ನಾಲ್ವರಲ್ಲಿ ಹೊಳಲು ಗ್ರಾಮದ ಚಂದ್ರು ಪುತ್ರ ಭರತ್(26) ಮತ್ತು ಚನ್ನೇಗೌಡ ಪುತ್ರ ವಿನೋದ್(26) ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಉಳಿದ ಇಬ್ಬರು ಕೆರೆಯಿಂದ ಮೇಲೆ ಬಂದು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಪಟ್ಟಣ ಠಾಣೆಯ ಪಿಎಸ್‌ಐ ಬ್ಯಾಟರಾಯಗೌಡ ನೇತೃತ್ವದಲ್ಲಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಹಾಗೂ ಈಜು ತಜ್ಞರು ಶವಗಳ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕರಾವಳಿ ಪ್ರದೇಶಕ್ಕೆ ಶೀಘ್ರ ಪ್ರತ್ಯೇಕ ಮರಳು ನೀತಿ : ಮುರುಗೇಶ್ ನಿರಾಣಿ
ಮೃತ ಭರತ್ ತಂದೆ ಚಂದ್ರು ವ್ಯವಸಾಯ ಮಾಡಿಕೊಂಡಿದ್ದರೆ, ಮೃತ ವಿನೋದ್ ತಂದೆ ಚನ್ನೇಗೌಡ ಗ್ರಾಮ ಪಂಚಾಯತಿಯಲ್ಲಿ ವಾಟರ್‌ಮೆನ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸಂಜೆ 7 ಗಂಟೆ ಸಮಯದಲ್ಲಿ ಒಂದು ಶವ ಪತ್ತೆಯಾಗಿದ್ದು, ಮತ್ತೊಂದು ಶವಕ್ಕಾಗಿ ಹುಡುಕಾಟ ನಡೆದಿದ್ದು, ಕೆ.ಆರ್.ಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.