Advertisement
ಚೈಲ್ಡ್ ಕೇರ್ ಸೆಂಟರ್‌ನಲ್ಲಿ ಇರಿಸುವುದಾಗಿ ಹೇಳಿ ಮೂರು ವರ್ಷದ ಮಗುವನ್ನು ಕರೆದೊಯ್ದ ಗೆಳತಿ ಮಂಗಳೂರಿನ ಸಂಬಂಧಿಯೊಬ್ಬರಿಗೆ ನೀಡಿ, ಹೆತ್ತ ಕರುಳೇ ಎರಡು ವರ್ಷಗಳ ಕಾಲ ಹುಡುಕಾಡುವಂತೆ ಮಾಡಿದ ಕರುಣಾಜನಕ ಘಟನೆ ಈಗ ಬೆಳಕಿಗೆ ಬಂದಿದೆ. ಕರುಳ ಕುಡಿ ಕಳೆದುಕೊಂಡ ನೋವಿನಲ್ಲಿ ವಾರವೆಲ್ಲ ಕೆಲಸ ಮಾಡಿ, ವಾರಾಂತ್ಯದಲ್ಲಿ ಹುಡುಕಾಟ ನಡೆಸಿದ ನಂತರ ಅಂತೂ ಪುಟಾಣಿ ಮಗು ತಾಯಿಯ ಮಡಿಲು ಸೇರಿಕೊಂಡಿದೆ. ಮಕ್ಕಳ ಸಹಾಯವಾಣಿಯ ಸಹಕಾರದಿಂದ ಪ್ರಕರಣ ಸುಖಾಂತ್ಯ ಕಂಡಿದೆ.
ಬೆಂಗಳೂರಿನ ಪೀಣ್ಯ ನಿವಾಸಿ ಗಿರಿಜಾ (ಹೆಸರು ಬದಲಾಯಿಸಲಾಗಿದೆ) ಸ್ನೇಹಿತೆ ಹಾಸ್ಟೆಲ್‌ಗೆ ಸೇರಿಸುವ ಭರವಸೆ ನೀಡಿದ್ದಕ್ಕೆ ತನ್ನ ಗಂಡು ಮಗುವನ್ನು ಆಕೆಯ ಕೈಗೊಪ್ಪಿಸಿದ್ದರು. ಆದರೆ ಸ್ನೇಹಿತೆಯ ಲೆಕ್ಕಾಚಾರವೇ ಬೇರೆಯಾಗಿತ್ತು. ಆ ಮಗುವನ್ನು ಹಾಸ್ಟೆಲ್‌ಗೆ ಸೇರಿಸುವ ಉದ್ದೇಶ ಆಕೆ ಹೊಂದಿರಲಿಲ್ಲ. ಕೆಲ ದಿನಗಳ ಬಳಿಕ ಮಗುವನ್ನು ನೋಡಿ ಬರುವ ಇರಾದೆಯನ್ನು ಗಿರಿಜಾ ವ್ಯಕ್ತಪಡಿಸಿದಾಗ ಸ್ನೇಹಿತೆ ಏನೋ ಒಂದು ಸಬೂಬು ನೀಡಿ ದಿನ ಮುಂದೂಡಿದ್ದಳು. ಅದನ್ನೂ ಗಿರಿಜಾ ಇರಬಹುದೆಂದು ನಂಬಿದ್ದಳು. ಹೀಗೆ ಎರಡು ವರ್ಷ ಆಕೆಯ ಬಳಿ ಗೋಗರೆದರೂ ಮಗು ಮುಖ ನೋಡಲೂ ಸಾಧ್ಯವಾಗದೇ ಇದ್ದಾಗ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಪರಿಹಾರ ಕೇಂದ್ರದ ಮಕ್ಕಳ ಸಹಾಯವಾಣಿ ಮೊರೆ ಹೋದರು. ಮಾಹಿತಿ ಕಲೆಹಾಕಿದ ಸಹಾಯವಾಣಿ ಅಧಿಕಾರಿಗಳು ಅಂತೂ ಮಗುವನ್ನು ತಾಯಿ ಗಿರಿಜಾ ಅವರ ಮಡಿಲು ಸೇರಿಸಿದ್ದಾರೆ. ಬೆಳಕಾದ ಸಹಾಯವಾಣಿ:
ಮಗುವಿನ ಮುಖವನ್ನೂ ನೋಡದೇ ಎರಡು ವರ್ಷ ಕಳೆದಿದೆ. ಹಾಸ್ಟೆಲ್‌ಗೆ ಸೇರಿಸಲೆಂದು ಮಗುವನ್ನು ಕೊಂಡೊಯ್ದ ಸ್ನೇಹಿತೆಯಿಂದ ನನ್ನ ಮಗುವನ್ನು ನನಗೆ ಕೊಡಿಸಿ. ಮಗುವನ್ನು ನನ್ನ ಮಡಿಲಿಗೆ ಒಪ್ಪಿಸಿ ಎಂದು ಗಿರಿಜಾ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು. ಕೂಡಲೇ ಈ ಬಗ್ಗೆ ದೂರು ದಾಖಲಿಸಿಕೊಂಡು ಮಗುವನ್ನು ಪಡೆದಿದ್ದ ಆಕೆಯ ಸ್ನೇಹಿತೆಯನ್ನು ಕರೆಸಿ ವಿಚಾರಣೆ ನಡೆಸಿದಾಗ ಮಂಗಳೂರಿನ ಉದ್ಯಮಿಯೊಬ್ಬರ ಕುಟುಂಬಕ್ಕೆ ನೀಡಿದ್ದಾಗಿ ಬಾಯ್ಬಿಟ್ಟಿದ್ದಾಳೆ.
Related Articles
Advertisement
ಕಾನೂನು ಹೆದರಿ ಮಗು ಒಪ್ಪಿಸಿದ ದಂಪತಿಎರಡು ವರ್ಷ ಮಗುವನ್ನು ಪೋಷಿಸಿದ್ದ ದಂಪತಿಗೆ, ಮತ್ತೂಬ್ಬರ ಮಕ್ಕಳನ್ನು ಇಟ್ಟುಕೊಳ್ಳುವುದು ಕಾನೂನುಬಾಹಿರ. ಕಾನೂನು ಪ್ರಕಾರವೇ ದತ್ತು ಪಡೆದುಕೊಳ್ಳಬೇಕು. ಈಗ ಮಗುವನ್ನು ತಾಯಿ ವಶಕ್ಕೆ ನೀಡಲೇಬೇಕು ಎಂದು ಸಹಾಯವಾಣಿ ಸಿಬ್ಬಂದಿ ಮನವೊಲಿಸಿದ್ದಾರೆ. ನಿಯಮಗಳ ಅನ್ವಯ ಮಕ್ಕಳ ಕಲ್ಯಾಣ ಸಮಿತಿ ಸಿಬ್ಬಂದಿ ಗಿರಿಜಾ ಅವರಿಂದ ಕೆಲವು ದಾಖಲೆಗಳನ್ನು ಪಡೆದು ಮಗುವನ್ನು ಒಪ್ಪಿಸಿದ್ದಾರೆ. ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯೆ ನೀಡಿದ ಮಕ್ಕಳ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕಿ ಪ್ರೀತಿ ಬಾಳಿಗ, ಮಗುವನ್ನು ಸರಿಯಾಗಿ ನೋಡಿಕೊಳ್ಳಿ. ಒಂದು ತಿಂಗಳ ಬಳಿಕ ಮಗು ಸಮೇತ ಹಾಜರಾಗಬೇಕು ಎಂದು ಗಿರಿಜಾ ಅವರಿಗೆ ಸೂಚಿಸಿದ್ದೇವೆ ಎಂದಿದ್ದಾರೆ. ವಾರ ಪೂರ್ತಿ ಕೆಲಸ, ರಜೆಯಲ್ಲಿ ಹುಡುಕಾಟ!
ಚನ್ನಪಟ್ಟಣ ಮೂಲದ ಗಿರಿಜಾ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 2016ರಲ್ಲಿ ಗಂಡನಿಂದ ದೂರವಾಗಿ 3 ವರ್ಷದ ಮಗು ಸೌರಭ್ (ಹೆಸರು ಬದಲಾಯಿಸಲಾಗಿದೆ) ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ ಪೀಣ್ಯದ ಗಾರ್ಮೆಂಟ್ಸ್‌ವೊಂದಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದರು. ಮಗುವನ್ನು ನೋಡಿಕೊಂಡು ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಈ ಸಂದರ್ಭದಲ್ಲಿ ಪರಿಚಯವಾದ ಗೆಳತಿ ಅನುಪಮಾ (ಹೆಸರು ಬದಲಾಯಿಸಲಾಗಿದೆ) ಪರಿಚಯವಿರುವ ಚೈಲ್ಡ್ ಕೇರ್‌ಗೆ ಸೇರಿಸುವುದಾಗಿ ಹೇಳಿ ಮಗು ಕರೆದೊಯ್ದಿದ್ದಳು. 15 ದಿನಗಳ ಬಳಿಕ ಮಗುವನ್ನು ನೋಡಿಕೊಂಡು ಬರೋಣ ಎಂದಾಗ,ಚೈಲ್ಡ್ ಕೇರ್ ದೂರವಿದೆ. ಮತ್ತೆ ಎಂದಾದರೂ ಹೋಗೋಣ ಎಂದು ಸಬೂಬು ಹೇಳಿದ್ದಾರೆ. ಎರಡು ಮೂರು ತಿಂಗಳು ಹೀಗೆ ಯಾಮಾರಿಸಿದ್ದಾಳೆ. ನೊಂದ ಗಿರಿಜಾ, ವಾರವೆಲ್ಲ ಕೆಲಸ ಮಾಡಿ, ರಜಾ ದಿನಗಳಲ್ಲಿ ಬೆಂಗಳೂರಿನಲ್ಲಿರುವ ಚೈಲ್ಡ್ ಕೇರ್‌ಗಳಿಗೆಲ್ಲ ಭೇಟಿ ನೀಡಿದ್ದಾರೆ. ಆದರೆ ಮಗು ಸಿಗಲಿಲ್ಲ. ಇಷ್ಟೆಲ್ಲಾ ಪ್ರಹಸನದ ಬಳಿಕ ಮಂಗಳೂರಿನಲ್ಲಿ ಅನುಪಮಾ ಅವರ ಸಹೋದರಿಗೆ ಮಕ್ಕಳಿರಲಿಲ್ಲ ಎಂಬ ಸಂಗತಿ ಗೊತ್ತಾಗಿ, ಅಲ್ಲಿ ಹೋಗಿ ನೋಡಿದಾಗ ಮಗು ಇತ್ತು. ಆದರೆ, ಅವರು ಸುತಾರಾಂ ವಾಪಸ್ ನೀಡಲು ಒಪ್ಪಿರಲಿಲ್ಲ. ಹೀಗಾಗಿ ಅಂತಿಮವಾಗಿ ಮಕ್ಕಳ ಸಹಾಯವಾಣಿ ಕೇಂದ್ರದ ಮೊರೆ ಹೋಗಿದ್ದರು. ಮಕ್ಕಳನ್ನು ಯಾರಧ್ದೋ ಮಾತು ನಂಬಿ ಅವರ ವಶಕ್ಕೆ ಒಪ್ಪಿಸಬಾರದು. ಕಾನೂನು ನಿಯಮಗಳನ್ನು ಉಲ್ಲಂಘಿಸಿ ಮತ್ತೂಬ್ಬರ ಮಕ್ಕಳನ್ನು ಮನೆಯಲ್ಲಿಟ್ಟುಕೊಳ್ಳುವುದು, ಪೋಷಿಸುವುದು ಶಿಕ್ಷಾರ್ಹ. ಈ ಬಗ್ಗೆ ಜನರು ಅರಿತುಕೊಳ್ಳಬೇಕು.
– ರಾಣಿ ಶೆಟ್ಟಿ, ಮುಖ್ಯಸ್ಥೆ, ಪರಿಹಾರ ಕೇಂದ್ರ, ನಗರ ಪೊಲೀಸ್ ಆಯುಕ್ತರ ಕಚೇರಿ – ಮಂಜುನಾಥ್ ಲಘುಮೇನಹಳ್ಳಿ