ಆಕ್ಲಂಡ್ ( ನ್ಯೂಜಿಲ್ಯಾಂಡ್): ಇಂಗ್ಲೆಂಡ್ ನ ವೇಗದ ಬೌಲರ್ ಜೋಫ್ರಾ ಆರ್ಚರ್ ಗೆ ಜನಾಂಗೀಯ ನಿಂದನೆ ಮಾಡಿದ ಕ್ರಿಕೆಟ್ ಅಭಿಮಾನಿಗೆ ಎರಡು ವರ್ಷ ನಿಷೇಧ ಹೇರಲಾಗಿದೆ.
ಕಳೆದ ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ಇಂಗ್ಲೆಂಡ್ ಬೌಲರ್ ಜೋಫ್ರಾ ಆರ್ಚರ್ ಗೆ ಜನಾಂಗೀಯ ನಿಂದನೆ ಮಾಡಲಾಗಿತ್ತು. ಮೊದಲ ಟೆಸ್ಟ್ ವೇಳೆ ಈ ಜನಾಂಗೀಯ ನಿಂದನೆ ಮಾಡಲಾಗಿತ್ತು. ಇದರಿಂದ ನೊಂದುಕೊಂಡಿದ್ದ ಆರ್ಚರ್ ಸರಣಿಯ ನಂತರ ಬಹಿರಂಗವಾಗಿ ಹೇಳಿಕೊಂಡಿದ್ದರು.
ಈ ಘಟನೆಯ ಬಳಿಕ ಕಿವೀಸ್ ನಾಯಕ ಕೇನ್ ವಿಲಿಯಮ್ಸ್ ಅವರು ಆರ್ಚರ್ ಬಳಿ ಕ್ಷಮೆ ಕೇಳಿದ್ದರು. ನಂತರ ಪೊಲೀಸರು ವಿಚಾರಣೆ ನಡೆಸಿ ಆಕ್ಲಂಡ್ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು.
28ರ ಹರೆಯದ ಆ ವ್ಯಕ್ತಿಯು ಘಟನೆಗೆ ಕ್ಷಮೆ ಕೇಳಿದ್ದು, ಪೊಲೀಸರು ಎಚ್ಚರಿಕೆಯನ್ನೂ ನೀಡಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಯಾವುದೇ ಅಂತಾರಾಷ್ಟ್ರೀಯ ಮತ್ತು ದೇಶೀಯ ಕೂಟಗಳಲ್ಲಿ ಭಾಗವಹಿಸಲು ನಿಷೇಧ ಹೇರಲಾಗಿದೆ.
ಒಂದು ವೇಳೆ ಆತ ನಿಷೇಧ ಶಿಕ್ಷೆಯನ್ನು ಪಾಲಿಸದೇ ಇದ್ದಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.