ಮುದ್ದೇಬಿಹಾಳ: ನೀರು ಕುಡಿಯಲೆಂದು ಕೃಷ್ಣಾ ನದಿಗೆ ಇಳಿದಿದ್ದ ಬಾಲಕಿಯೊಬ್ಬಳು ಕಾಲುಜಾರಿ ಗುಂಡಿಯಲ್ಲಿ ಬಿದ್ದು ಮುಳುಗಿದ್ದನ್ನು ಕಂಡ ಆಕೆಯನ್ನು ರಕ್ಷಿಸಲು ಧಾವಿಸಿದ ಅವಳ ಅತ್ತೆಯೂ ನೀರುಪಾಲಾದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಕೃಷ್ಣಾ ನದಿ ತೀರದ ಹುನಕುಂಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೃತರನ್ನು ಹುನಕುಂಟಿ ಗ್ರಾಮದ ಶಾಂತಮ್ಮ ಭೀಮನಗೌಡ ನಾಗೋಡ (20 ವ) ಹಾಗೂ ಗುರುಸಂಗಮ್ಮ ಭೀಮಪ್ಪ ಮುದೂರ (8 ವ) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಮಂಗಳೂರು: ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೊಲೀಸ್ ಸೆರೆ
ದನ ಮೇಯಿಸಲೆಂದು ನದಿ ತೀರಕ್ಕೆ ಇಬ್ಬರು ಹೋಗಿದ್ದರು. ಬಾಯಾರಿಕೆ ಆಗಿದ್ದರಿಂದ ಗುರುಸಂಗಮ್ಮ ನೀರು ಕುಡಿಯಲೆಂದು ನದಿಗೆ ಇಳಿದಿದ್ದಾಳೆ. ನದಿ ತೀರದಲ್ಲಿ ಅಲ್ಲಲ್ಲಿ ಮಣ್ಣು ತೆಗೆದಿದ್ದರಿಂದ ಆಳವಾದ ಗುಂಡಿಗಳಿದ್ದು, ಅವುಗಳು ಭರ್ತಿಯಾಗಿರುವುದನ್ನು ತಿಳಿಯದೇ ಬಾಲಕಿ ಗುರುಸಂಗಮ್ಮ ಕಾಲು ಜಾರಿ ಗುಂಡಿಯೊಳಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಅತ್ತೆ ಶಾಂತಾ ಆಕೆಯ ರಕ್ಷಣೆಗೆ ತೆರಳಿದ್ದು, ಆಕೆಯೂ ಕೂಡ ನೀರುಪಾಲಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಕೂಡಲೇ ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಪ್ರಮೋದ ಸುಂಕದ ನೇತೃತ್ವದ ತಂಡ ಸ್ಥಳಕ್ಕಾಗಮಿಸಿ ನೀರಿನ ಗುಂಡಿಯಲ್ಲಿ ಮುಳುಗಿದ್ದ ಇಬ್ಬರ ಶವವನ್ನು ಕಾರ್ಯಾಚರಣೆ ಮೂಲಕ ಹೊರ ತೆಗೆದರು.
ಸ್ಥಳಕ್ಕೆ ಪಿಎಸೈ ಎಂ.ಬಿ. ಬಿರಾದಾರ, ಗ್ರಾಮಲೆಕ್ಕಾಧಿಕಾರಿ ಸುನೀಲ್ ಚವ್ಹಾಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತ ಪ್ರಕರಣ ದಾಖಲಾಗಿದೆ.