ಚಿತ್ರದುರ್ಗ: ವಿಕಲಚೇತನರಿಗೆ ವಿದ್ಯಾಭ್ಯಾಸ ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶನಿವಾರ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಅನುದಾನದಡಿ ಗಣಿಬಾಧಿತ ಪ್ರದೇಶದ ದೈಹಿಕ ವಿಕಲಚೇತನರಿಗೆ 50 ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಎಲ್ಲಾ ವಿಕಲಚೇತನರಿಗೂ ದ್ವಿಚಕ್ರ ವಾಹನ ವಿತರಣೆ ಮಾಡಲಾಗುವುದು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಜೀವನೋಪಾಯ ಹಾಗೂ ಉದ್ಯೋಗ ಅರಸಿ, ಜಿಲ್ಲಾ ಕೇಂದ್ರಕ್ಕೆ ಅತೀ ಹೆಚ್ಚು ವಿಕಲಚೇತನರು ಆಗಮಿಸುತ್ತಾರೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಗುರಿ ನಿಗದಿಪಡಿಸಿ, ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆ ಮಾಡುತ್ತಿದ್ದ ಕಾರಣ ಕ್ಷೇತ್ರದಲ್ಲಿ ಹಲವರಿಗೆ ವಾಹನ ವಿತರಣೆ ಮಾಡುವಲ್ಲಿ ವಿಳಂಬವಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ ಡಿಎಂಎಫ್ ಅನುದಾನ ಬಳಕೆ ಮಾಡಿಕೊಂಡು ಒಂದೇ ಸಲ 50 ಜನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆ ಮಾಡಲಾಗಿದೆ ಎಂದರು.
ವಿಕಲಚೇತನರ ಇಲಾಖೆಯಿಂದ ಪ್ರಸಕ್ತ ವರ್ಷ 21 ಜನ ದ್ವಿಚಕ್ರವಾಹನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅನುದಾನ ಲಭ್ಯತೆ ನೋಡಿಕೊಂಡು ಎಲ್ಲರಿಗೂ ವಾಹನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ವಿಕಲಚೇತನರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಮಾತನಾಡಿ, ಪ್ರತಿ ವರ್ಷ ಕ್ಷೇತ್ರಕ್ಕೆ ನಾಲ್ಕೈದು ವಾಹನಗಳು ಮಾತ್ರ ಲಭ್ಯವಾಗುತ್ತಿದ್ದವು. ಆದರೆ, ಶಾಸಕರ ವಿಶೇಷ ಕಾಳಜಿಯಿಂದ ಒಮ್ಮೆಲೇ 50 ಜನರಿಗೆ ಸೌಲಭ್ಯ ಕಲ್ಪಿಸಿಕೊಡಲು ಸಾಧ್ಯವಾಗಿದೆ. ಇಷ್ಟೊಂದು ಜನ ವಿಕಲಚೇತನರಿಗೆ ನೆರವಾದ ಶಾಸಕರ ಕಾರ್ಯ ಮಾದರಿ ಎಂದರು.
ಇಲಾಖೆ ವತಿಯಿಂದ ಆಧಾರ ಸ್ವಯಂ ಉದ್ಯೋಗ ಯೋಜನೆಯಡಿ ಒಂದು ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುವುದು. ಇದರಲ್ಲಿ 50 ಸಾವಿರ ಸಬ್ಸಿಡಿ ನೀಡಲಾಗುತ್ತದೆ. ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನಲ್ಲಿ ಲಭ್ಯವಿದ್ದ 50 ಲಕ್ಷ ರೂ. ಅನುದಾನದಲ್ಲಿ 45 ಲಕ್ಷ ರೂ. ಬಳಸಿ 50 ಜನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ನೀಡಲಾಗಿದೆ. ಇಲಾಖೆ ವತಿಯಿಂದ ವಾಹನಗಳನ್ನು ನೋಂದಾಯಿಸಿ, ಒಂದು ವರ್ಷದ ಜೀವವಿಮೆ ಸಹ ನೀಡಲಾಗಿದೆ. ನೋಂದಣಿಯ ಸ್ಮಾರ್ಟ್ ಕಾರ್ಡುಗಳು ಬಂದ ನಂತರ ವಿಕಲಚೇತನರಿಗೆ ನೀಡಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪದ್ಮಾ ಮತ್ತಿತರರಿದ್ದರು.
ಸರ್ಕಾರದ ಅನುದಾನದಲ್ಲಿ ಶಾಸಕರು ದ್ವಿಚಕ್ರ ವಾಹನ ನೀಡಿರುವುದರಿಂದ ನಾಲ್ಕು ಗೋಡೆಗಳ ಮಧ್ಯೆ ಇರದೇ, ಎಲ್ಲರಂತೆ ಸಮಾಜದಲ್ಲಿ ಜೀವನ ನಿರ್ವಹಿಸಲು ಹಾಗೂ ಆರ್ಥಿಕವಾಗಿ ಬದುಕು ಕಟ್ಟಿಕೊಳ್ಳಲು ಅವಕಾಶ ಕೊಟ್ಟಂತಾಗಿದೆ.
– ರಂಗಮ್ಮ, ದ್ವಿಚಕ್ರ ಪಡೆದ ಫಲಾನುಭವಿ.